ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಿಂದ ಸ್ಪೀಡ್ ಗವರ್ನರ್ ಕಡ್ಡಾಯ

Last Updated 24 ಅಕ್ಟೋಬರ್ 2011, 10:35 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡ ರಾಜ್ಯೋತ್ಸವದ ದಿನವಾದ ನ.1ರಿಂದ ಸರ್ಕಾರವು ರಾಜ್ಯದ ಜನರಿಗೆ `ಬ್ರೇಕ್~ ಹಾಕುತ್ತಿದೆ. ವಿರೋಧದ ನಡುವೆಯೂ ಎಲ್ಲ ರೀತಿಯ ಸಾರಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ (ವೇಗ ನಿಯಂತ್ರಕ)ಗಳನ್ನು ಅಳವಡಿಸುವುದನ್ನು ಕಡ್ಡಾಯ ಗೊಳಿಸುತ್ತಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೆಲ ವರ್ಷಗಳಿಂದಲೂ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆಯಾದರೂ ಹಳೆಯ ವಾಹನಗಳಿಗೆ ಮಾತ್ರವೇ ಅನ್ವಯವಾಗುತ್ತಿದೆ. ಆದರೆ, ಈಗ ಈವರೆಗೆ ನೋಂದಣಿಯಾಗಿರುವ ಹಳೆಯ ಮತ್ತು ನೋಂದಣಿ ಮಾಡಿಸಲಾಗುವ ಹೊಸ ವಾಹನಗಳಿಗೂ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಬೇಕು.

`ವೈಯಕ್ತಿಕ ವಾಹನಗಳು ಅಂದರೆ, ದ್ವಿಚಕ್ರ ವಾಹನ, ಕಾರ್ (ಬಿಳಿಯ ಬಣ್ಣದ ಬೋರ್ಡ್‌ಗಳು ಮಾತ್ರ) ಈ ಆದೇಶಕ್ಕೆ ಒಳಪಡುವುದಿಲ್ಲ. ಇನ್ನುಳಿದಂತೆ ಎಲ್ಲ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಬೇಕು. ಅಂದರೆ, ಹಳದಿ ಬೋರ್ಡ್ ಹೊಂದಿರುವ ಎಲ್ಲ ವಾಹನಗಳೂ ಆದೇಶಕ್ಕೆ ಒಳಪಡುತ್ತವೆ. ಸ್ಪೀಡ್ ಗವರ್ನರ್ ಅಳವಡಿಸುವುದರಿಂದ ಅತಿವೇಗ ದೊಂದಿಗೆ ಅಪಘಾತಗಳ ಪ್ರಮಾಣವನ್ನು ಸಹ ತಗ್ಗಿಸಬಹುದು.
 
ಎಲ್ಲ ರೀತಿಯ ಸಾರಿಗೆ ವಾಹನಗಳಾದ ಬಸ್, ಲಾರಿ, ಮ್ಯಾಕ್ಸಿಕ್ಯಾಬ್, ಶಾಲಾ ವಾಹನಗಳು (ಹಳದಿ ಬೋರ್ಡ್ ಹೊಂದಿರುವ ಎಲ್ಲ ವಾಹನಗಳು) ವೇಗ ನಿಯಂತ್ರಕ ಅಳವಡಿಸಿಕೊಳ್ಳುವುದು ಕಡ್ಡಾಯ. ಇದು ನ. 1ರಿಂದ ಜಾರಿಗೊಳ್ಳಲಿದೆ~ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಂಜರಾಜೇ ಅರಸ್ `ಪ್ರಜಾವಾಣಿ~ಗೆ ತಿಳಿಸಿದರು.

ಈಗಾಗಲೇ ಕೇರಳ, ಆಂಧ್ರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿ ಸ್ಪೀಡ್ ಗವರ್ನರ್ ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿಯೂ ಸ್ಪೀಡ್ ಗವರ್ನರ್ ಅಳವಡಿಕೆ ಬಗ್ಗೆ ಚಾಲಕರು, ಮಾಲೀಕರಿಗೆ ಅರಿವು ಮೂಡಿಸಲಾಗಿದೆ.

ಫಿಟ್‌ನೆಸ್ ಸರ್ಟಿಫಿಕೇಟ್ (ಎಫ್‌ಸಿ) ಮಾಡಿಸಲು ಬರುವ ವಾಹನದವರಿಗೆ ಈ ಬಗ್ಗೆ ತಿಳಿಸಲಾಗಿದೆ. ಸ್ಪೀಡ್ ಗವರ್ನರ್ ಅಳವಡಿಸಿದ್ದಲ್ಲಿ ಮಾತ್ರವೇ ವಾಹನಗಳಿಗೆ ಎಫ್‌ಸಿ ನೀಡಲಾಗುವುದು. ಇಲ್ಲವಾದಲ್ಲಿ ಕೊಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಭಾರತದಲ್ಲಿ, ವಿವಿಧ ರೋಗಗಳಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅತಿವೇಗದಿಂದ ಆದ ಅಪಘಾತದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ನಂತರದ ಸ್ಥಾನದಲ್ಲಿದೆ. ಸಮೀಕ್ಷೆ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಅಪಘಾತದಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದಾರೆ.
 
ಪ್ರತಿ 2 ನಿಮಿಷಕ್ಕೆ ಒಬ್ಬರು ಅಪಘಾತದಿಂದ ಜೀವವನ್ನು, 5-6 ಲಕ್ಷ ಮಂದಿ ಕೈ ಕಾಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಅತಿವೇಗವೂ ಒಂದು ಕಾರಣ. ಅಪಘಾತದಲ್ಲಿ ಸಾವಿಗೀಡಾಗುವವರ ಪ್ರಮಾಣಕ್ಕೆ ಬ್ರೇಕ್ ಹಾಕುವ ಉದ್ದೇಶ ಸಾರಿಗೆ ಇಲಾಖೆಯದ್ದು ಎನ್ನುತ್ತಾರೆ ಅಧಿಕಾರಿಗಳು.
 
ಸ್ಪೀಡ್ ಗವರ್ನರ್ ಅಳವಡಿಸಿಲ್ಲದ ವಾಹನಗಳಿಗೆ ಸದ್ಯಕ್ಕೆ, ಎಫ್‌ಸಿ ನೀಡಲಾಗುವುದಿಲ್ಲ. ಇದು ಆರಂಭಿಕ ಹಂತವಾದ್ದರಿಂದ ದಂಡ ಅಥವಾ ಇತರೆ ಶಿಕ್ಷೆ ವಿಧಿಸಲಾಗುವುದಿಲ್ಲ. ಸ್ವಲ್ಪ ಸಮಯಾವಕಾಶ ನೀಡಲಾಗುವುದು. ನಂತರ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು.

ಪ್ರತಿ ಸ್ಪೀಡ್ ಗವರ್ನರ್‌ಗೆ ಮಾರುಕಟ್ಟೆಯಲ್ಲಿ ಸುಮಾರು ರೂ.15 ಸಾವಿರವಿದೆ. ಹೀಗಾಗಿ, ಇವುಗಳನ್ನು ಅಳವಡಿಸಿಕೊಳ್ಳಲು ಸ್ವಲ್ಪ ಸಮಯಾವಕಾಶ ಕೊಡಲಾಗುವುದು. ಆದರೆ, ಸ್ಪೀಡ್ ಗವರ್ನರ್ ಇಲ್ಲದಿದ್ದರೆ ಎಫ್‌ಸಿ ನೀಡುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸ್ಪೀಡ್ ಗವರ್ನರ್ ಸಂಬಂಧ ರಾಜ್ಯ ಸರ್ಕಾರವು 29.11.2006ರಂದು ಅಧಿಸೂಚನೆ ಹೊರಡಿಸಿತು. ನಂತರ 2007ರ ಮೇ 1ರಂದು, 2008ರ ಏಪ್ರಿಲ್ 30ರೊಳಗೆ ಎಲ್ಲ ವಾಹನಗಳಿಗೂ ಸ್ಪೀಡ್ ಗವರ್ನರ್ ಕಡ್ಡಾಯ ಎಂದು ಹೇಳಿತು. ನಂತರ ಜೂನ್ 1ರಂದು ಅಧಿಸೂಚನೆ ಹೊರಡಿಸಿ ಅವಧಿಯನ್ನು ಜುಲೈ 10ರೊಳಗೆ ವಿಸ್ತರಿಸಿತು.
 
ನಂತರ ಮತ್ತೊಂದು ಅಧಿಸೂಚನೆ ಹೊರಡಿಸಿ ಅನಿರ್ದಿಷ್ಟ ಅವಧಿಗೆ ಎಂದು ಹೇಳಿತು. ಸರ್ಕಾರ ಸ್ಪೀಡ್ ಗವರ್ನರ್ ಅಳವಡಿಕೆ ಬಗ್ಗೆ ಪ್ರಸ್ತಾಪಿಸಿದಾಗೆಲ್ಲ ವಾಹನಗಳ ಮಾಲೀಕರು, ಚಾಲಕರಿಂದ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT