ಸೋಮವಾರ, ಮೇ 23, 2022
29 °C

2ಜಿ: ಇಂದು ಜಾಮೀನು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಐವರು ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರ ಜಾಮೀನು ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಬರಲಿದ್ದು, ಇವರಿಗೆ ಜಾಮೀನು ನೀಡದಂತೆ ಸಿಬಿಐ ವಿರೋಧ ವ್ಯಕ್ತಪಡಿಸುವ ನಿರೀಕ್ಷೆಯಿದೆ.ಯುನಿಟೆಕ್ ವೈರ್‌ಲೆಸ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯೆಂಕ ಹಾಗೂ ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಉದ್ಯಮ ಸಮೂಹದ ಅಧಿಕಾರಿಗಳಾದ ಹರಿ ನಾಯರ್, ಗೌತಮ್ ದೋಶಿ ಮತ್ತು ಸುರೇಂದ್ರ ಪಿಪಾರ ಅವರು ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಜಾಮೀನು ನೀಡದಂತೆ ವಿರೋಧ ವ್ಯಕ್ತಪಡಿಸಲು ತನ್ನ ವಕೀಲರಿಗೆ ಸಿಬಿಐ ಸೂಚಿಸಿರುವುದಾಗಿ ಮೂಲಗಳು ದೃಢಪಡಿಸಿವೆ.ಆದರೆ ಈ ತಿಂಗಳ 24ರಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಡಿಎಂಕೆ ಸಂಸದೆ ಕನಿಮೊಳಿ, ಕಲೈಙ್ಞರ್ ಟಿ.ವಿ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್, ಕುಸೆಗಾಂವ್ ಫ್ರೂಟ್ಸ್ ಅಂಡ್ ವೆಜಿಟೆಬಲ್ಸ್‌ನ ನಿರ್ದೇಶಕರಾದ ಆಸಿಫ್ ಬಲ್ವಾ, ರಾಜೀವ್ ಅಗರವಾಲ್ ಹಾಗೂ ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ತನಿಖಾ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.ಹಗರಣದ ಆರೋಪಿಗಳು ತಮ್ಮ ಮೇಲೆ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಿದ್ಧಪಡಿಸಿದ ನಂತರ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು  ಸುಪ್ರೀಂಕೋರ್ಟ್ ಈ ಹಿಂದೆ ತಿಳಿಸಿದ್ದರಿಂದ, ಸೋಮವಾರದ ವಿಚಾರಣಾ ಪ್ರಕ್ರಿಯೆ ಕುತೂಹಲ ಮೂಡಿಸಿದೆ. ಏಕೆಂದರೆ ಈ ತಿಂಗಳ 22ರಂದೇ  ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಲಾಗಿದೆ.ದೂರಸಂಪರ್ಕ ಇಲಾಖೆ ಮಾಜಿ ಸಚಿವ ಎ.ರಾಜಾ, ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೆಹೂರ ಹಾಗೂ ಮೂರು ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಟೆಲಿಕಾಂ, ಸ್ವಾನ್ ಟೆಲಿಕಾಂ, ಯುನಿಟೆಕ್ ವೈರ್‌ಲೆಸ್ ಸೇರಿದಂತೆ ಇತರ ಎಲ್ಲ ಆರೋಪಿಗಳೂ ಹಗರಣದಲ್ಲಿ ತಮ್ಮದೇನೂ ತಪ್ಪಿಲ್ಲ ಮತ್ತು ತಾವು ತರಂಗಾಂತರ ಹಂಚಿಕೆಯಲ್ಲಿ ಯಾವುದೇ ಲಾಭ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.