2ಜಿ : ಒಮ್ಮತಕ್ಕೆ ಬನ್ನಿ-ಸಿಬಲ್
ನವದೆಹಲಿ (ಐಎಎನ್ಎಸ್): ಮೊಬೈಲ್ ಎರಡನೆಯ ತಲೆಮಾರಿನ ತರಂಗಾಂತರ (2ಜಿ) ಹಂಚಿಕೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಮಂಗಳವಾರ ಇಲ್ಲಿ ದೂರವಾಣಿ ಸೇವಾ ಸಂಸ್ಥೆಗಳ ಜತೆ ಚರ್ಚೆ ನಡೆಸಿದರು. ‘ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.ಇದರಲ್ಲಿ 15 ಅಂಶಗಳನ್ನು ಪಟ್ಟಿ ಮಾಡಲಾಗಿದೆ. ದೂರವಾಣಿ ಸೇವಾ ಸಂಸ್ಥೆಗಳಿಗೆ ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನೀಡಿರುವ ಹೊಸ ಶಿಫಾರಸ್ಸಿಗೆ ಪ್ರತಿಯಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಅವಕಾಶ ನೀಡಲಾಯಿತು ಎಂದರು.
ಈಗಿರುವ ‘2ಜಿ’ ತರಂಗಾಂತರ ಹಂಚಿಕೆ ದರವನ್ನು ಆರು ಪಟ್ಟು ಹೆಚ್ಚಿಸುವುದಾಗಿ ಇತ್ತೀಚೆಗೆ ‘ಟ್ರಾಯ್’ ಹೇಳಿತ್ತು. ಇದು ಜಾರಿಗೊಂಡರೆ ಮೊಬೈಲ್ ಕಂಪೆನಿಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ಕರೆ ದರವೂ ದುಬಾರಿಯಾಗುವ ಸಾಧ್ಯತೆ ಇದೆ.ಸದ್ಯ ಕಂಪೆನಿಗಳು ರೂ. 267 ಕೋಟಿ ಬದಲಿಗೆ, ‘ಟ್ರಾಯ್’ ಪರಿಷ್ಕೃತ ಶಿಫಾರಸ್ಸಿನಂತೆ ಪ್ರತಿ ತರಂಗಾಂತರಕ್ಕೆ (ಎಂಎಚ್ಜೆಡ್) ರೂ.1,770 ಕೋಟಿ ಪಾವತಿಸಬೇಕು. ಹಾಗೂ ಹೆಚ್ಚುವರಿ ತರಂಗಾಂತರಕ್ಕಾಗಿ ರೂ.4,572 ಕೋಟಿ ಪಾವತಿಸಬೇಕು. ದುಬಾರಿ ದರದ ಹಿನ್ನೆಲೆಯಲ್ಲಿ ಕಂಪೆನಿಗಳು ಈ ಪ್ರಸ್ತಾವ ವಿರೋಧಿಸಿವೆ.
ಎ.ರಾಜಾ ಅವಧಿಯಲ್ಲಿ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ನೀತಿಯಲ್ಲಿ ‘2ಜಿ’ ತರಂಗಾಂತರ ಹಂಚಿಕೆ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 12 ರಿಂದ 40 ಶತಕೋಟಿ ಡಾಲರ್ (ರೂ.55,200 ಕೋಟಿಗಳಿಂದ ರೂ.1,84, 000 ಕೋಟಿಗಳಷ್ಟು) ನಷ್ಟವಾಗಿದೆ ಎಂದು ಅಧಿಕೃತ ಲೆಕ್ಕಪರಿಶೋಧನೆ ವರದಿ ತಿಳಿಸಿದೆ.
ಒಮ್ಮತಕ್ಕೆ ಬನ್ನಿ: ‘2ಜಿ’ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ದೂರವಾಣಿ ಸೇವಾ ಪೂರೈಕೆ ಸಂಸ್ಥೆಗಳ ನಡುವಿನ ಅಭಿಪ್ರಾಯ ವ್ಯತ್ಯಾಸ ಇಡೀ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದೂ ಕಪಿಲ್ ಸಿಬಲ್ ಹೇಳಿದ್ದಾರೆ. ವಾರ್ಷಿಕ ತರಂಗಾಂತರ ಬಳಕೆ ದರ ಹಾಗೂ ಪರವಾನಿಗೆ ಶುಲ್ಕವನ್ನು ಹೆಚ್ಚಿಸುವ ಕುರಿತು ‘ಟ್ರಾಯ್’ ನೀಡಿರುವ ಶಿಫಾರಸ್ಸುಗಳ ಕುರಿತು ಚರ್ಚೆ ನಡೆಸಿದ ಅವರು, ಕಂಪೆನಿಗಳು ತಮ್ಮ ನಡುವಿನ ಅಭಿಪ್ರಾಯ ವ್ಯತ್ಯಾಸವನ್ನು ಬಗೆಹರಿಸಿಕೊಂಡು ಒಮ್ಮತಕ್ಕೆ ಬರಬೇಕು ಎಂದು ಎಚ್ಚರಿಕೆ ನೀಡಿದರು.
ಮಾರ್ಚ್ ಅಂತ್ಯದ ವೇಳೆಗೆ ನಮ್ಮ ಅಭಿಪ್ರಾಯಗಳನ್ನು ‘ಟ್ರಾಯ್’ ಮುಂದಿಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ‘ಭಾರತೀಯ ಮೊಬೈಲ್ ಸೇವಾ ಪೂರೈಕೆದಾರರ ಒಕ್ಕೂಟದ (ಸಿಒಎಐ) ನಿರ್ದೇಶಕ ರಾಜನ್ ಎಸ್. ಮ್ಯಾಥ್ಯೂ ತಿಳಿಸಿದ್ದಾರೆ. ‘ಟ್ರಾಯ್ ನೀಡಿರುವ ಹೊಸ ಶಿಫಾರಸ್ಸುಗಳು ಉದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಲಿವೆ ಎಂದು ಭಾರ್ತಿ ಏರ್ಟೆಲ್ನ ಮುಖ್ಯಸ್ಥ ಸಂಜಯ್ ಕಪೂರ್, ಅಭಿಪ್ರಾಯಪಟ್ಟಿದ್ದಾರೆ. ಈ ಶಿಫಾರಸ್ಸು ಹಳೆಯ ಸೇವಾ ಪೂರೈಕೆದಾರರ ಪರವಾಗಿದ್ದು, ಇದನ್ನು ಜಾರಿಗೆ ತಂದರೆ ಸರ್ಕಾರಕ್ಕೆ ರೂ.6,500 ಕೋಟಿ ನಷ್ಟವಾಗಲಿದೆ ಎಂದು ರಿಯಲನ್ಸ್ ಕಮ್ಯುನಿಕೇಷನ್ಸ್ ದೂರಿದೆ. ವೊಡಾಫೋನ್ನ ಮುಖ್ಯಸ್ಥ ಟಿ.ವಿ ರಾಮಚಂದ್ರನ್ ಹಾಗೂ ಇತರೆ ಮೊಬೈಲ್ ಕಂಪೆನಿಗಳ ಮುಖ್ಯಸ್ಥರೂ ಚರ್ಚೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.