ಗುರುವಾರ , ಏಪ್ರಿಲ್ 22, 2021
23 °C

2ಜಿ ತರಂಗಾಂತರ ಹಗರಣ ಐವರಿಗೆ ಜಾಮೀನು ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಎಫ್‌ಐಆರ್‌ನಲ್ಲಿ ಹೆಸರಿಸಿದ್ದ ವಿವಿಧ ಉದ್ದಿಮೆಗಳ ಐವರು ಅಧಿಕಾರಿಗಳನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.ಸಿಬಿಐ ಅನುಮಾನ ವ್ಯಕ್ತಪಡಿಸಿದ ರೀತಿಯಲ್ಲಿ ಈ ಅಧಿಕಾರಿಗಳು ಸಾಕ್ಷ್ಯಗಳನ್ನು ನಾಶ ಪಡಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ದೆಹಲಿಯ ನ್ಯಾಯಾಲಯ ಈ ಎಲ್ಲಾ ಐದು ಮಂದಿಯ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನಂತರ ಎಲ್ಲರನ್ನೂ ಬಂಧಿಸಲಾಯಿತು.ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ.ಪಿ.ಸೈನಿ ಅವರು, ಎಲ್ಲಾ ಐದು ಮಂದಿಯ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಜಾಮೀನು ಅರ್ಜಿಯಲ್ಲಿ ಆರೋಪಿ ಅಧಿಕಾರಿಗಳು ತಮ್ಮನ್ನು ಬಂಧಿಸದಂತೆ ತನಿಖಾ ಸಂಸ್ಥೆಗೆ ಸೂಚಿಸುವಂತೆ ಮನವಿ ಮಾಡಿದ್ದರು. ತಮ್ಮ ತಮ್ಮ ಸಂಸ್ಥೆಗಳಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕಾರಣ ಸಿಬಿಐ ತಮ್ಮನ್ನು ಬಂಧಿಸಬಹುದು ಎನ್ನುವ ಸಂದೇಹದ ಮೇಲೆ ಅಧಿಕಾರಿಗಳು ಮಧ್ಯಂತರ ಜಾಮೀನು ಕೋರಿದ್ದರು. ಏ.15ರಂದು ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.ಬಂಧಿತ ಅಧಿಕಾರಿಗಳು: ಸ್ವಾನ್ ಟೆಲಿಕಾಂ ನಿರ್ದೇಶಕ ವಿನೋದ್ ಗೊಯೆಂಕಾ, ಯುನಿಟೆಕ್ ವೈರ್‌ಲೆಸ್ (ತಮಿಳುನಾಡು) ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ, ಹಾಗೂ ರಿಲಯನ್ಸ್ ಎಡಿಎ ಗುಂಪಿನ ಗೌತಮ್ ದೋಷಿ, ಸುರೇಂದ್ರ ಪಿರರಾ ಮತ್ತು ಹರಿ ನಾಯರ್ ಅವರ ಜಾಮೀನನ್ನು ತಿರಸ್ಕರಿಸಲಾಗಿದ್ದು, ತಕ್ಷಣವೇ ಸಿಬಿಐ ಎಲ್ಲರನ್ನೂ ಬಂಧಿಸಿದೆ.ಎಫ್‌ಐಆರ್‌ನಲ್ಲಿ ಈ ಅಧಿಕಾರಿಗಳ ಹೆಸರನ್ನು ನಮೂದಿಸಿದ್ದರೂ ಸಹ, ಸಿಬಿಐ ಇದುವರೆಗೆ ಅವರನ್ನು ಬಂಧಿಸಿರಲಿಲ್ಲ. ಜತೆಗೆ ಈ ಅಧಿಕಾರಿಗಳು ಪ್ರಕರಣ ತನಿಖೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು.ಮೇಲ್ಮನವಿ: ಜಾಮೀನು ನೀಡಲು ನಿರಾಕರಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಐವರೂ ಅಧಿಕಾರಿಗಳು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿಗಳಾದ ವಿಕ್ರಮ್‌ಜಿತ್ ಸೆನ್ ಮತ್ತು ಸಿದ್ಧಾರ್ಥ ಮೃದಿಲ್ ಅವರ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಗುರುವಾರ ವಿಚಾರಣೆ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.