2ಜಿ ಸ್ಪೆಕ್ಟ್ರಂ: ಪಿಎಸಿ ಸದಸ್ಯರಲ್ಲಿ ಭಿನ್ನಾಭಿಪ್ರಾಯ

7

2ಜಿ ಸ್ಪೆಕ್ಟ್ರಂ: ಪಿಎಸಿ ಸದಸ್ಯರಲ್ಲಿ ಭಿನ್ನಾಭಿಪ್ರಾಯ

Published:
Updated:
2ಜಿ ಸ್ಪೆಕ್ಟ್ರಂ: ಪಿಎಸಿ ಸದಸ್ಯರಲ್ಲಿ ಭಿನ್ನಾಭಿಪ್ರಾಯ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣದ ತನಿಖೆ ಮುಂದುವರಿಸುವ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ (ಪಿಎಸಿ) ತೀವ್ರ ಭಿನ್ನಾಭಿಪ್ರಾಯಗಳು ಕೇಳಿ ಬಂದಿವೆ.

ಹಗರಣದ ತನಿಖೆ ಉದ್ದೇಶಕ್ಕಾಗಿ ಈಗಾಗಲೇ ಜಂಟಿ ಸಂಸದೀಯ ಸಮಿತಿಯನ್ನು ರಚಿಸಿರುವುದರಿಂದ ಪಿಎಸಿಯ ಅಗತ್ಯದ ಬಗ್ಗೆ ಶುಕ್ರವಾರ ನಡೆದ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳ ಸದಸ್ಯರು  ಪ್ರಶ್ನಿಸಿದರು.

ಹಗರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ದಾಖಲಿಸಲು ಕಾನೂನು ಕಾರ್ಯದರ್ಶಿ ಡಿ.ಆರ್. ಮೀನಾ ಮತ್ತು ಸಿಬಿಐ ನಿರ್ದೇಶಕ ಎ.ಪಿ. ಸಿಂಗ್ ಅವರು ಸಮಿತಿಯ ಮುಂದೆ ಹಾಜರಾಗಬೇಕಿತ್ತು. ಸಮಿತಿ ಸಭೆ ಆರಂಭವಾಗಬೇಕಿದ್ದ ಬೆಳಗಿನ 11 ಗಂಟೆಗೇ ಮೊದಲೇ ಮೀನಾ ಆಗಮಿಸಿದ್ದರು. ಆದರೆ ಸಿಂಗ್ ಅವರು ಮಧ್ಯಾಹ್ನದ ವೇಳೆಗೆ ಸಂಸತ್ತನ್ನು ತಲುಪಿದರು.

 

ಪಕ್ಕದ ಕೊಠಡಿಯಲ್ಲಿ ಕಾಯುವಂತೆ ಮೀನಾ ಮತ್ತು ಸಿಂಗ್ ಅವರಿಗೆ ಸೂಚಿಸಲಾಯಿತು. ಜೆಪಿಸಿಯ ಕಾರ್ಯ ವ್ಯಾಪ್ತಿ ಕುರಿತ ಪ್ರತಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಡಿಎಂಕೆಯ ಕೆಲವು ಸದಸ್ಯರು ಜಂಟಿ ಸಂಸದೀಯ ಸಮಿತಿ ರಚನೆಯಾಗಿರುವುದರಿಂದ ಪಿಎಸಿ ತನಿಖೆಯನ್ನು ಮುಕ್ತಾಯಗೊಳಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಕಾನೂನು ಕಾರ್ಯದರ್ಶಿ ಮೀನಾ ಅವರು ಮಧ್ಯಾಹ್ನ 2.45ರ ವೇಳೆಗೆ ಪಿಎಸಿ ಮುಂದೆ ಹಾಜರಾದರು. ಮೀನಾ  ಅವರ ಸಾಕ್ಷ್ಯವನ್ನು ದಾಖಲಿಸಲಾಗುತ್ತಿದ್ದಂತೆಯೇ ಸದಸ್ಯರ ನಡುವೆ ಕಾವೇರಿದ ಚರ್ಚೆ ನಡೆಯಿತು.

 

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಶನಿವಾರ ಹಾಜರಾಗುವಂತೆ ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಮತ್ತು ಪ್ರಧಾನಿ ಅವರ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ. ನಾಯರ್ ಅವರಿಗೆ ಸೂಚಿಸಲಾಗಿದೆ.22 ಸದಸ್ಯರನ್ನು ಒಳಗೊಂಡಿರುವ ಸಮಿತಿಯಲ್ಲಿ ಕಾಂಗ್ರೆಸ್‌ನ ಏಳು, ಬಿಜೆಪಿಯ ನಾಲ್ಕು, ಎಐಎಡಿಎಂಕೆ ಮತ್ತು ಡಿಎಂಕೆಯ ತಲಾ ಇಬ್ಬರು ಹಾಗೂ ಶಿವಸೇನಾ, ಬಿಜೆಡಿ, ಜೆಡಿ (ಯು), ಎಸ್ಪಿ, ಬಿಎಸ್ಪಿ ಮತ್ತು ಸಿಪಿಎಂನ ತಲಾ ಒಬ್ಬರು ಸದಸ್ಯರು ಇದ್ದಾರೆ. ಒಂದು ಸ್ಥಾನ ಖಾಲಿಯಾಗಿಯೇ ಉಳಿದಿದೆ.

 

2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಮಿತಿಯು ಈಗಾಗಲೇ ತನ್ನ ವರದಿಯನ್ನು ಸಿದ್ಧಪಡಿಸುತ್ತಿದ್ದು ಸಮಿತಿ ಅವಧಿ ಪೂರ್ಣಗೊಳ್ಳುವ ಈ ತಿಂಗಳ 30ರೊಳಗೆ ಮುಕ್ತಾಯಗೊಳಿಸುವ ನಿರೀಕ್ಷೆ ಇದೆ. ಹಗರಣದ ಬಗ್ಗೆ ಆದಷ್ಟು ಶೀಘ್ರ ವರದಿ ಸಲ್ಲಿಸಲು ಜೋಶಿ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೊಸ ಪಿಎಸಿಯಲ್ಲಿ ಜೋಶಿ ಅಧ್ಯಕ್ಷರಾಗಿ ಮುಂದುವರಿಯಲಿದ್ದು ಮೇ 1ರಂದು ಅಧಿಕಾರ ಸ್ವೀಕರಿಸುವರು ಮತ್ತು 2ಜಿ ತರಂಗಾಂತರ ಹಂಚಿಕೆಯ ಅವ್ಯವಹಾರದ ಬಗ್ಗೆ ತನಿಖೆ ನಡೆಸುವರು.

 

ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಕಾಯಂ ಸಂಸದೀಯ ಸಮಿತಿಯಾಗಿದ್ದು ವ್ಯಾಪಕ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ ನಿರ್ದಿಷ್ಟ ಉದ್ದೇಶಕ್ಕಾಗಿ ನಿಗದಿತ ಅವಧಿವರೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯನ್ನು ರಚಿಸಲಾಗುತ್ತದೆ.ಜೆಪಿಸಿ ಅಧ್ಯಕ್ಷ ಚಾಕೊ ಅವರು 2ಜಿ ತರಂಗಾಂತರ ಹಗರಣದಲ್ಲಿ ಪಿಎಸಿಯ ತನಿಖೆ ಅಗತ್ಯವಿಲ್ಲವೆಂದು ಈಗಾಗಲೇ

ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೆ ಚಾಕೊ ಮತ್ತು ಜೋಶಿ ಇಬ್ಬರೂ ಈ ಬಗ್ಗೆ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರನ್ನೂ ಸಂಪರ್ಕಿಸಿದ್ದು ಅವರು ಈ ಇಬ್ಬರಿಗೂ ಪರಸ್ಪರ ಸಹಕಾರದೊಂದಿಗೆ ಕೆಲಸ ನಿರ್ವಹಿಸುವಂತೆ ತಿಳಿಸಿದ್ದಾರೆ. 

 

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry