ಬುಧವಾರ, ಮೇ 25, 2022
29 °C

2ಜಿ ಹಗರಣ: ದೋಷಾರೋಪ - ವಿಚಾರಣೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ) ಮಾಜಿ ದೂರಸಂಪರ್ಕ ಸಚಿವ ಎ. ರಾಜಾ, ಡಿಎಂಕೆ ಸಂಸತ್ ಸದಸ್ಯೆ ಕನಿಮೋಳಿ ಮತ್ತು ಉನ್ನತ ಮಟ್ಟದ ಕಾರ್ಪೊರೇಟ್ ಗಣ್ಯರು ಸೇರಿದಂತೆ 15 ಮಂದಿ ಇತರರ ವಿರುದ್ಧ ಶನಿವಾರ ಬಹುಕೋಟಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಒಳಸಂಚು, ನಂಬಿಕೆ ದ್ರೋಹ, ವಂಚನೆ ಮತ್ತು ಫೋರ್ಜರಿ ಅಪರಾಧಗಳ ಕುರಿತ ದೋಷಾರೋಪ ಹೊರಿಸಲಾಗಿದ್ದು. ಇದರೊಂದಿಗೆ ದೆಹಲಿ ನ್ಯಾಯಾಲಯವು ಅವರ ವಿಚಾರಣೆಯನ್ನು ಆರಂಭಿಸಿತು.

ಎಲ್ಲ ಆರೋಪಿಗಳ ವಿರುದ್ಧವೂ ಭಾರತೀಯ ದಂಡ ಸಂಹಿತಿಯ ಸೆಕ್ಷನ್ 409ರ ಅನ್ವಯ ನಂಬಿಕೆ ದ್ರೋಹದ ಗಂಭೀರ ಕ್ರಿಮಿನಲ್ ಆರೋಪವನ್ನು ಹೊರಿಸಲಾಗಿದ್ದು ಇದರನ್ವಯ ಅವರನ್ನು ಗರಿಷ್ಠ  ಜೀವಾವಧಿ ಶಿಕ್ಷೆಗೆ ಗುರಿಪಡಿಸಬಹುದು. ಉಳಿದ ಆರೋಪಗಳ ಅಡಿಯಲ್ಲಿ ಅವರನ್ನು ವಿವಿಧ ಅವಧಿಗಳಿಗೆ ಸೆರೆವಾಸಕ್ಕೆ ಗುರಿಪಡಿಸಬಹುದು.ಎಲ್ಲ ಆರೋಪಿಗಳೂ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ ಬಳಿಕ ವಿಶೇಷ ನ್ಯಾಯಮೂರ್ತಿ ಒ.ಪಿ. ಸೈನಿ ಅವರು ವಿಚಾರಣೆ ಆರಂಭಕ್ಕೆ ನವೆಂಬರ್ 11ರ ದಿನಾಂಕವನ್ನು ನಿಗದಿ ಪಡಿಸಿದರು.ಹಲವಾರು ತಿಂಗಳುಗಳಿಂದ ಸೆರೆಮನೆಯಲ್ಲಿ ಇರುವ ಈ ಎಲ್ಲ ಆರೋಪಿಗಳಿಗೂ ದೋಪಾರೋಪ ಪಟ್ಟಿ ಸಲ್ಲಿಕೆಯ ಕಾರಣ ಈಗ ಜಾಮೀನಿಗೆ ಅರ್ಜಿ ಸಲ್ಲಿಸಲು ಮಾರ್ಗ ನಿರಾಳವಾಗಿದೆ. ದೋಷಾರೋಪ ಪಟ್ಟಿ ಸಲ್ಲಿಸುವ ಮುನ್ನ ಆರೋಪಿಗಳಿಗೆ ಜಾಮೀನು ನೀಡುವಂತೆ ಸಲ್ಲಿಸಲಾಗಿದ್ದ ಯಾವುದೇ ಅರ್ಜಿಯನ್ನೂ ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.