2ಜಿ ಹಗರಣ: ರಾಜಾ ಬಂಧನ

7

2ಜಿ ಹಗರಣ: ರಾಜಾ ಬಂಧನ

Published:
Updated:
2ಜಿ ಹಗರಣ: ರಾಜಾ ಬಂಧನ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಹಾಗೂ ಅವರ ಸಹವರ್ತಿಗಳಾಗಿದ್ದ  ಇಬ್ಬರು ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ.

ರಾಜಾ ಅವರೊಂದಿಗೆ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂಡೊಲಿಯಾ ಹಾಗೂ ಮಾಜಿ ದೂರಸಂಪರ್ಕ ಕಾರ್ಯದರ್ಶಿಯಾಗಿದ್ದ ಸಿದ್ಧಾರ್ಥ್ ಬೆಹುರಾ ಅವರು ಬಂಧನಕ್ಕೊಳಗಾಗಿದ್ದಾರೆ.

 2ಜಿ ತರಂಗಾಂತರ ಪಡೆದ ಟೆಲಿಕಾಂ ಕಂಪೆನಿಗಳಲ್ಲಿ ಹಣ ಹೂಡಿಕೆ ಕುರಿತಂತೆ ಆರೋಪ ಎದುರಿಸುತ್ತಿರುವ ರಾಜಾ ಅವರ ಸಹೋದರ ಎ.ಕೆ.ಪರುಮಾಳ್ ಅವರನ್ನು  ಮಂಗಳವಾರವಷ್ಟೇ ವಿಚಾರಣೆಗೆ ಒಳಪಡಿಸಲಾಗಿತ್ತು. 

ಬಂಧಿತರಾದ ರಾಜಾ ಅವರ ಹಿಂದಿನ ಆಪ್ತ ಕಾರ್ಯದರ್ಶಿ ಹಾಗೂ  ದೂರ ಸಂಪರ್ಕ ಕಾರ್ಯದರ್ಶಿಗಳು ಅಧಿಕಾರ ದುರುಪಯೋಗ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿನ ಹಸ್ತಕ್ಷೇಪ ಆರೋಪವನ್ನು ಹೊತ್ತಿದ್ದಾರೆ. ಜತೆಗೆ ಕೆಲ ದೂರಸಂಪರ್ಕ ಕಂಪೆನಿಗಳಿಗೆ ತರಂಗಾಂತರ ಹಂಚಿಕೆಯಲ್ಲಿ ಪರೋಕ್ಷವಾಗಿ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಾಲ್ಕು ಬಾರಿ ವಿಚಾರಣೆ: ಇದಕ್ಕೂ ಮೊದಲು ಸಿಬಿಐ  2ಜಿ ತರಂಗಾಂತರ ಹಂಚಿಕೆ ಕುರಿತಂತೆ  ರಾಜಾ ಅವರನ್ನು ನಾಲ್ಕು ಬಾರಿ ವಿಚಾರಣೆಗೆ ಒಳಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ಫೆ. 10ರೊಳಗಾಗಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ತಮ್ಮ ವರದಿಗಳನ್ನು ಸಲ್ಲಿಸಬೇಕೆಂದು ಸೂಚಿಸಿದೆ. ಈ ಪ್ರಕರಣದ ವಿಚಾರಣೆಯೂ ಅಂದೇ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry