2ಜಿ ಹರಾಜು: ಸರ್ಕಾರಕ್ಕೆ ಆದಾಯ ಖೋತಾ

7

2ಜಿ ಹರಾಜು: ಸರ್ಕಾರಕ್ಕೆ ಆದಾಯ ಖೋತಾ

Published:
Updated:

ನವದೆಹಲಿ (ಪಿಟಿಐ): ಇತ್ತೀಚೆಗೆ ನಡೆದ ತರಂಗಾಂತರ ಹರಾಜು ಪ್ರಕ್ರಿಯೆಯಿಂದ ಸರ್ಕಾರವು ನಿವ್ವಳ ರೂ 1,706.92 ಕೋಟಿ ಮೊತ್ತ ಮಾತ್ರ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಈ ಮೊತ್ತವು ನಿರೀಕ್ಷಿತ ನಲವತ್ತು ಸಾವಿರ ಕೋಟಿ ಮೊತ್ತಕ್ಕಿಂತ ತುಂಬಾ ಕಡಿಮೆಯಾಗಿದ್ದು ಪ್ರಸಕ್ತ ಹಣಕಾಸು ವರ್ಷದಲ್ಲಿ ಕಂಡುಬಂದ ವಿತ್ತೀಯ ಕೊರತೆಯನ್ನು ನೀಗಿಸುವಲ್ಲಿ ಸರ್ಕಾರ ಉದ್ದೇಶಿತ ಗುರಿಯನ್ನೇ ನಂಬಿಕೊಂಡಿತ್ತು ಎಂದೂ  ಹೇಳಿವೆ.

ಈ ಮಧ್ಯೆ, ಹರಾಜನ್ನು ಪಡೆಯುವಲ್ಲಿ ಯಶಸ್ವಿಯಾದ ಕಂಪೆನಿಗಳಿಗೆ ಪಾವತಿ ಮೊತ್ತ ಸಲ್ಲಿಸುವಲ್ಲಿ ಸರ್ಕಾರ ಹಲವು ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಇದರನ್ವಯ ಈ ಕಂಪೆನಿಗಳು ಒಟ್ಟು ಮೊತ್ತದಲ್ಲಿ ಶೇ 33ರಷ್ಟನ್ನು ಮೊದಲ ಬಾರಿ ಹಾಗೂ ಉಳಿದ ಮೊತ್ತವನ್ನು ಎರಡು ವರ್ಷಗಳ ಅವಧಿಯಲ್ಲಿ ಕಂತುಗಳಲ್ಲಿ ಪಾವತಿಸಬಹುದಾಗಿದೆ. 

ಟೆಲಿನಾರ್ ಪ್ರಾಯೋಜಿತ ಟೆಲಿವಿಂಗ್ಸ್ ಕಮ್ಯುನಿಕೇಷನ್ಸ್ ಒಟ್ಟು ರೂ 4,018.28 ಕೋಟಿ ಮೊತ್ತದಲ್ಲಿ ರೂ 1,326.03 ಕೋಟಿ ಮಾತ್ರ ಪಾವತಿಸಿದ್ದು, ವೊಡಾಪೋನ್ ಕಂಪೆನಿ ರೂ 1,127.94 ಕೋಟಿ ಮೊತ್ತದಲ್ಲಿ ರೂ 372.22 ಕೋಟಿ ಮಾತ್ರ ಪಾವತಿಸಿದೆ. ಆದರೆ ಭಾರ್ತಿ ಏರ್‌ಟೆಲ್ ಮಾತ್ರ ಸಂಪೂರ್ಣ ಮೊತ್ತವಾದ ರೂ 8.67 ಕೋಟಿ ಪಾವತಿಸಿದೆ .

ಈ ನಡುವೆ, ವಿಡಿಯೊಕಾನ್ ಮತ್ತು ಐಡಿಯಾ ಸೆಲ್ಯುಲರ್ ಕ್ರಮವಾಗಿ ತಾವು ಪಾವತಿಸಲು ಬಾಕಿ ಇದ್ದ ರೂ 733.08 ಕೋಟಿ ಮತ್ತು ರೂ 670.33 ಕೋಟಿ ಮೊತ್ತವನ್ನು ಸುಪ್ರೀಂಕೋರ್ಟ್ ಫೆಬ್ರುವರಿಯಲ್ಲಿ ರದ್ದುಪಡಿಸಿದ ಪರವಾನಗಿಯನ್ನು ಪಡೆಯಲು ಪಾವತಿಸಿದ್ದ ಮೊತ್ತಕ್ಕೆ ಸರಿದೂಗಿಸಿಕೊಂಡಿವೆ.ದೂರಸಂಪರ್ಕ ಮೇಲಿನ ಉನ್ನತಾಧಿಕಾರವುಳ್ಳ ಸಚಿವರ ತಂಡ ಅಕ್ಟೋಬರ್‌ನಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕಂಪೆನಿಗಳು ಮೊತ್ತವನ್ನು ಸರಿದೂಗಿಸುವ ನಿರ್ಧಾರ ತೆಗೆದುಕೊಂಡಿತ್ತು.2 ಜಿ ಪ್ರಕರಣದಲ್ಲಿ ಕಂಪೆನಿಗಳ ಮೇಲಿನ ಅಪರಾಧ ಮೊಕದ್ದಮೆ ಬಾಕಿ ಉಳಿಯದಂತೆ ಮಾಡುವ ಹಿನ್ನೆಲೆಯಲ್ಲಿ ಸಮಿತಿ ಈ ನಿರ್ಧಾರ ಕೈಗೊಂಡಿತ್ತು.

ನಿಷ್ಕ್ರಿಯ ಸಿಮ್ ರ್ದ್ದದು: ಟ್ರಾಯ್ ಚರ್ಚೆ

ನವದೆಹಲಿ (ಪಿಟಿಐ): ಗ್ರಾಹಕರು ಬಳಸದೇ ಇರುವ ನಿಷ್ಕ್ರಿಯ ಸಿಮ್‌ಗಳ ಸಂಪರ್ಕವನ್ನು ಕಡಿತಗೊಳಿಸುವ ದೂರಸಂಪರ್ಕ ಸೇವಾ ಸಂಸ್ಥೆಗಳ ನಿರ್ಧಾರ ಕುರಿತಂತೆ ಚರ್ಚೆ ನಡೆಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಾಗಿದೆ.

ದೇಶದಲ್ಲಿ ಸುಮಾರು ಇಪ್ಪತ್ತು ಕೋಟಿ ಸಿಮ್‌ಗಳು ನಿರ್ದಿಷ್ಟ ಅವಧಿಯಿಂದ ನಿಷ್ಕ್ರಿಯಗೊಂಡಿದ್ದು ಇದರಿಂದ ಒಟ್ಟು ರೂ 128.9 ಕೋಟಿ ಪಾವತಿಸಲು ಬಾಕಿ ಉಳಿದಿರುವುದಾಗಿ ದೂರಸಂಪರ್ಕ ಸೇವಾ ಸಂಸ್ಥೆಗಳು ಟ್ರಾಯ್‌ಗೆ ಮಾಹಿತಿ ನೀಡಿವೆ.

ಆದರೆ ತಮ್ಮ ಮೊಬೈಲ್ ಸಂಪರ್ಕವನ್ನು ಸೇವಾ ಸಂಸ್ಥೆಗಳು ತಮ್ಮಿಷ್ಟ ಬಂದಂತೆ ಕಡಿತಗೊಳಿಸಿವೆ ಎಂದು ಗ್ರಾಹಕರ ಹಲವು ವೇದಿಕೆಗಳು ತಮ್ಮನ್ನು ಸಂಪರ್ಕಿಸಿರುವುದಾಗಿ ಟ್ರಾಯ್ ತಿಳಿಸಿದೆ.

`ಮೊಬೈಲ್ ಸಂಪರ್ಕವನ್ನು ಪೂರ್ವ ಮಾಹಿತಿಯಿಲ್ಲದೆ ಸ್ವಇಚ್ಛೆಯ ಮೇರೆಗೆ ಕಡಿತಗೊಳಿಸುವ ಸೇವಾ ಸಂಸ್ಥೆಗಳ ನಿರ್ಧಾರದಿಂದ ಗ್ರಾಹಕ ಬಹುಕಾಲದಿಂದ ತನ್ನ ವ್ಯಕ್ತಿತ್ವದ ಗುರುತಾಗಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ಗ್ರಾಹಕನ ವೈಯಕ್ತಿಕ ಸಂಬಂಧವಲ್ಲದೆ ವೃತ್ತಿಪರ ಸಂಬಂಧದ ಮೇಲೂ ಪರಿಣಾಮ ಬೀರಿದೆ' ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.

ದೂರಸಂಪರ್ಕ ಸೇವಾ ಸಂಸ್ಥೆಗಳು ಸಂಪರ್ಕ ಕಡಿತಗೊಳಿಸುವ ವೇಳೆ ಪಾಲಿಸಬೇಕಾದ ಸಾಮಾನ್ಯ ನಿಯಮಗಳನ್ನೂ ಪಾಲಿಸದೇ ಇರುವುದು ತಮ್ಮ ಗಮನಕ್ಕೆ ಬಂದಿರುವುದಾಗಿ ಟ್ರಾಯ್ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry