2ನೇ ಸುತ್ತಿನಲ್ಲಿ ಒಬಾಮಗೆ ಮೇಲುಗೈ

6

2ನೇ ಸುತ್ತಿನಲ್ಲಿ ಒಬಾಮಗೆ ಮೇಲುಗೈ

Published:
Updated:

ವಾಷಿಂಗ್ಟನ್ (ಪಿಟಿಐ): ವಿಶ್ವದಾದ್ಯಂತ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನ ಚರ್ಚೆಯಲ್ಲಿ ಮುನ್ನಡೆ ಸಾಧಿಸಿದ್ದ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಅಧ್ಯಕ್ಷ ಬರಾಕ್ ಒಬಾಮ ನಿರೀಕ್ಷೆಯಂತೆ ಜಯ ಗಳಿಸಿದ್ದಾರೆ.ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಚುನಾವಣಾ ಚರ್ಚೆಯಲ್ಲಿ ಒಬಾಮ ಅವರು ರಿಪಬ್ಲಿಕನ್ ಪಕ್ಷದ ಎದುರಾಳಿ ಮಿಟ್ ರೋಮ್ನಿ ವಿರುದ್ಧ ಮೇಲುಗೈ ಸಾಧಿಸಿದ್ದರು. ಚರ್ಚೆಯ ನಂತರದ ಪ್ರಾಥಮಿಕ ಸಮೀಕ್ಷೆಗಳೂ ಇದನ್ನು ದೃಢಪಡಿಸಿದ್ದವು.ಗ್ಯಾಲಪ್ ಸಮೀಕ್ಷಾ ಸಂಸ್ಥೆ ರಾಷ್ಟ್ರದಾದ್ಯಂತ ನಡೆಸಿದ ಸಮಗ್ರ ಸಮೀಕ್ಷೆಯ ಅಧಿಕೃತ ಅಂಕಿಸಂಖ್ಯೆಗಳನ್ನು ಶನಿವಾರ ಬಿಡುಗಡೆ ಮಾಡಿದ್ದು, ಒಬಾಮ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಇದರಿಂದಾಗಿ ಅವರು ರೋಮ್ನಿಗಿಂತ ಒಂದು ಅಂಕ ಮುನ್ನಡೆ ಪಡೆದಿದ್ದಾರೆ. `ಸಿಎನ್‌ಎನ್ ಮತ್ತು ಸಿಬಿಎಸ್~ ನಡೆಸಿದ ಸಮೀಕ್ಷಾ ವರದಿಗಳೂ ಕೂಡ ಒಬಾಮ ಅವರಿಗೆ ಹೆಚ್ಚು ಅಂಕ ನೀಡಿವೆ.

ಗ್ಯಾಲಪ್ ಸಮೀಕ್ಷೆ ಪ್ರಕಾರ, ಒಬಾಮ ಶೇ 51 ಮತ್ತು ರೋಮ್ನಿ ಶೇ 38 ಮತ ಗಳಿಸಿದ್ದಾರೆ.

ಮೊದಲ ಸುತ್ತಿನ ಚರ್ಚೆಯಲ್ಲಿ ರೋಮ್ನಿ ಗೆಲುವು ಸಾಧಿಸಿದ್ದರು.

 ಜ.21ರಂದು ಅಧಿಕಾರ ಸ್ವೀಕಾರ

ನವೆಂಬರ್ 6ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗುವ ಅಮೆರಿಕದ ನೂತನ ಅಧ್ಯಕ್ಷರು ಜನವರಿ 21ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂವಿಧಾನದ ಪ್ರಕಾರ ಜನವರಿ 20ರಂದು ಹೊಸ ಅಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಬೇಕು. ಆದರೆ ಅಂದು ಭಾನುವಾರವಾದ ಕಾರಣ ಸೋಮವಾರಕ್ಕೆ ಸಮಾರಂಭ ಮುಂದೂಡಲಾಗಿದೆ.ಈ ರೀತಿಯ ಅನಿವಾರ್ಯ ಪರಿಸ್ಥಿತಿಯಲ್ಲಿ ಸಂವಿಧಾನದ ನಿಯಮಾವಳಿಗಳನ್ನು ಬದಿಗಿಡುವುದು ಇದೇ ಮೊದಲೇನಲ್ಲ. ಅಮೆರಿಕದ ಇತಿಹಾಸದಲ್ಲಿ ಈ ಹಿಂದೆಯೂ ಏಳು ಬಾರಿ ಪ್ರಮಾಣ ವಚನ ಸ್ವೀಕಾರ ದಿನ ಭಾನುವಾರ ಬಂದ ಕಾರಣ ಮರುದಿನಕ್ಕೆ ಮುಂದೂಡಿದ ನಿದರ್ಶನಗಳಿವೆ. ಜನವರಿ 21 ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಎರಡನೇ ಬಾರಿ ಇದೇ ದಿನ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. 1997ರಲ್ಲಿ ಬಿಲ್ ಕ್ಲಿಂಟನ್ ಕೂಡಾ ಇದೇ ದಿನ ಅಧಿಕಾರ ಸ್ವೀಕರಿಸಿದ್ದರು.2013ರ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಈಗಾಗಲೇ ಸಿದ್ಧತೆ ನಡೆದಿದ್ದು, ಇದಕ್ಕಾಗಿ ಜಂಟಿ ಸಮಿತಿಯೊಂದನ್ನು ರಚಿಸಲಾಗಿದೆ. ಹೊಸ ವೆಬ್‌ಸೈಟ್ ಮತ್ತು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಫೇಸ್‌ಬುಕ್ ಖಾತೆಯನ್ನೂ ತೆರೆಯಲಾಗಿದ್ದು ಎಲ್ಲ ಮಾಹಿತಿ ನೀಡಲಿವೆ.ರೋಮ್ನೀಷಿಯಾ!

ಗರ್ಭನಿರೋಧ, ಕಲ್ಲಿದ್ದಲು, ಸಮಾನ ವೇತನ ಮತ್ತು ತೆರಿಗೆಗಳ ಕುರಿತು ತಮ್ಮ ಈ ಮೊದಲಿನ ನಿಲುವನ್ನು ಬದಲಿಸಿರುವ ರೋಮ್ನಿ ಮತ್ತು ಅವರ ತಂಡವನ್ನು ಒಬಾಮ ವ್ಯಂಗ್ಯಭರಿತ ಮೊನಚು ಪದಗಳಿಂದ ಲೇವಡಿ ಮಾಡಿದ್ದಾರೆ. ಇದಕ್ಕಾಗಿ `ರೋಮ್ನೀಷಿಯಾ~ ಎಂಬ ಹೊಸ ಪದದ ಪ್ರಯೋಗ ಮಾಡಿರುವುದು ಗಮನ ಸೆಳೆದಿದೆ. `ಪದೇ ಪದೇ ತಮ್ಮ ನಿಲುವು ಬದಲಿಸುತ್ತಿರುವ ರೋಮ್ನಿ ಅವರು ರೋಮ್ನೀಷಿಯಾ ಎಂಬ ರೋಗದಿಂದ ಬಳಲುತ್ತಿದ್ದಾರೆ. ಈ ರೋಗದ ಗುಣಲಕ್ಷಣಗಳಾದ ಮರೆಗುಳಿತನ ಅವರಲ್ಲಿ ಕಾಣತೊಡಗಿವೆ. ಒಬಾಮ ಕೇರ್‌ನಿಂದ ಮಾತ್ರ ಅದನ್ನು ಗುಣಪಡಿಸಿ ಮೊದಲಿನ ಸ್ಥಿತಿಗೆ ತರಲು ಸಾಧ್ಯ~ ಎಂದು ಒಬಾಮ ವ್ಯಂಗ್ಯವಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry