2ನೇ ಹಂತದ ಮೆಟ್ರೊ ಕಾಮಗಾರಿಗೆ ಶೀಘ್ರ ಚಾಲನೆ

7

2ನೇ ಹಂತದ ಮೆಟ್ರೊ ಕಾಮಗಾರಿಗೆ ಶೀಘ್ರ ಚಾಲನೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): `ಬೆಂಗಳೂರು ಮೆಟ್ರೊ ರೈಲು ಯೋಜನೆ ಎರಡನೇ ಹಂತವು ಒಟ್ಟಾರೆ 72.09 ಕಿ.ಮೀ. ಉದ್ದದ ಮಾರ್ಗ ಹೊಂದಿರಲಿದ್ದು, 61 ನಿಲ್ದಾಣಗಳು ಬರಲಿವೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ವಿಧಾನ ಪರಿಷತ್ತಿನಲ್ಲಿ ಪ್ರಕಟಿಸಿದರು.ಬಿಜೆಪಿಯ ಡಾ.ಎಂ.ಆರ್. ದೊರೆಸ್ವಾಮಿ ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. `13.79 ಕಿ.ಮೀ. ಉದ್ದ ಸುರಂಗ ಮಾರ್ಗವೇ ಬರಲಿದ್ದು, 12 ನೆಲ ಮಾಳಿಗೆ ನಿಲ್ದಾಣಗಳನ್ನು ಅದು ಒಳಗೊಳ್ಳಲಿದೆ. ಯೋಜನೆಗೆ ರೂ 26,405.14 ಕೋಟಿ ಅಗತ್ಯವಿದ್ದು, ಕೇಂದ್ರ ಸರ್ಕಾರ ಶೇ 20ರಷ್ಟು (5,291.20 ಕೋಟಿ) ಮೊತ್ತ ನೀಡಲಿದೆ. ರಾಜ್ಯ ಸರ್ಕಾರ ಶೇ 34.02ರಷ್ಟು (8,969.02 ಕೋಟಿ) ನೀಡಲಿದ್ದು, ಉಳಿದ ಶೇ 45.98ರಷ್ಟನ್ನು (12, 144.80) ನಿಗಮವು ಸಾಲದ ರೂಪದಲ್ಲಿ ಪಡೆಯಲಿದೆ' ಎಂದು ವಿವರಿಸಿದರು.`ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುಮತಿ ಸಿಕ್ಕೊಡನೆ ಕಾಮಗಾರಿ ಆರಂಭ ಮಾಡಲಾಗುತ್ತದೆ. ಕೆಲಸ ಪೂರ್ಣಗೊಳ್ಳಲು ಐದು ವರ್ಷಗಳ ಕಾಲಾವಕಾಶ ಅಗತ್ಯವಿದೆ' ಎಂದು ಹೇಳಿದರು.`ಪ್ರಾಥಮಿಕ ಕಾರ್ಯಗಳಿಗೆ ರಾಜ್ಯ ಸರ್ಕಾರ ರೂ 400 ಕೋಟಿ ಒದಗಿಸಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಮಾರ್ಗಗಳಲ್ಲಿ ಹಾಳಾದ ರಸ್ತೆಯನ್ನು ದುರಸ್ತಿ ಮಾಡಲು ಈಗಾಗಲೇ ನಿರ್ದೇಶನ ನೀಡಲಾಗಿದೆ' ಎಂದು ತಿಳಿಸಿದರು.ಬಿಡಿಎ ಲೋಪ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದು, ಅದರ ಕಾರ್ಯ ನಿರ್ವಹಣೆಯನ್ನು ಸುಸ್ಥಿತಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಪರಿಷತ್ತಿನ ಸಭಾನಾಯಕ, ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.ಆರ್.ವಿ. ವೆಂಕಟೇಶ್ ಅವರ ಪ್ರಶ್ನೆಗೆ ಅವರು ಉತ್ತರಿಸಿದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಬನಶಂಕರಿ ಆರನೇ ಹಂತ, ಅಂಜಾನಪುರ ಬಡಾವಣೆ, ಜೆ.ಪಿ.ನಗರ, ಸರ್ ಎಂ.ವಿ. ಬಡಾವಣೆ, ನಾಗರಬಾವಿ, ಚಂದ್ರ ಬಡಾವಣೆ ಮತ್ತು ಜ್ಞಾನಭಾರತಿ ಬಡಾವಣೆಗಳಲ್ಲಿ ಭಾಗಶಃ ಮೂಲಸೌಕರ್ಯ ಒದಗಿಸಲಾಗಿದೆ ಎಂದರು.59 ಅಕ್ರಮ ಕಟ್ಟಡ ನೆಲಸಮ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟಾರೆ 59 ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು. ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜ್ ಪ್ರಶ್ನೆಗೆ ಅವರು ಉತ್ತರಿಸಿದರು.

ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದಂತೆ 1,050 ದೂರುಗಳು ಬಿಬಿಎಂಪಿಗೆ ಬಂದಿವೆ. ಇನ್ನುಮುಂದೆ ನಗರದಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾದರೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

11.34 ಲಕ್ಷ ಪ್ರಕರಣ ಬಾಕಿ

ಬೆಂಗಳೂರು: ರಾಜ್ಯದ  ಹೈಕೋರ್ಟ್‌ನಲ್ಲಿ 1.74 ಲಕ್ಷ ಮತ್ತು ಅಧೀನ ನ್ಯಾಯಾಲಯಗಳಲ್ಲಿ 11.34 ಲಕ್ಷ ಪ್ರಕರಣಗಳು ವಿಲೇವಾರಿಗೆ  ಬಾಕಿ ಇವೆ. ಎರಡೂ ಹಂತದ ನ್ಯಾಯಾಲಯಗಳಲ್ಲಿ ಒಟ್ಟು 13.08 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ.

ಜೆಡಿಎಸ್ ಸದಸ್ಯ ಕೆ.ವಿ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ಕಳೆದ ಅಕ್ಟೋಬರ್ 1ಕ್ಕೆ ಕೊನೆಗೊಂಡಂತೆ ಹೈಕೋರ್ಟ್‌ನಲ್ಲಿ 1,58,778 ಸಿವಿಲ್ ಮತ್ತು 15,950 ಕ್ರಿಮಿನಲ್ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಅಧೀನ ನ್ಯಾಯಾಲಯಗಳಲ್ಲಿ 5,74,693 ಸಿವಿಲ್ ಮತ್ತು 5,60,093 ಕ್ರಿಮಿನಲ್ ಅರ್ಜಿಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.ಬಾಕಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸರ್ಕಾರ ಹಾಗೂ ನ್ಯಾಯಾಂಗದ ಕಡೆಯಿಂದ ಹಲವು ಪ್ರಯತ್ನಗಳು ನಡೆಯುತ್ತಿವೆ. ದೀರ್ಘ ಕಾಲದಿಂದ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಪೀಠಗಳನ್ನು ರಚಿಸಲಾಗಿದೆ. ಹೈಕೋರ್ಟ್‌ನಲ್ಲಿ ಲೋಕ ಅದಾಲತ್ ಕೂಡ ನಡೆಸಲಾಗುತ್ತಿದೆ. 65 ವರ್ಷಗಳಿಗಿಂತ ಹೆಚ್ಚು ವಯಸ್ಸಾದ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ಎರಡು ವರ್ಷಗಳ ಅವಧಿಯೊಳಗೆ ವಿಲೇವಾರಿ ಮಾಡಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ವಿವರ ನೀಡಿದ್ದಾರೆ.ಎಲ್ಲ ಹಂತದ ನ್ಯಾಯಾಲಯಗಳಲ್ಲೂ ಜನತಾ ನ್ಯಾಯಾಲಯ ಮತ್ತು ಲೋಕ ಅದಾಲತ್ ಮೂಲಕ ಪ್ರಕರಣಗಳ ತ್ವರಿತ ವಿಲೇವಾರಿಗೆ ಅವಕಾಶ ಒದಗಿಸಲಾಗಿದೆ. ಪ್ರಸಕ್ತ ವರ್ಷದ ಜನವರಿ 1ರಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ 88,796 ಪ್ರಕರಣಗಳು ಜನತಾ ನ್ಯಾಯಾಲಯ ಮತ್ತು ಲೋಕ ಅದಾಲತ್‌ನಲ್ಲಿ ವಿಲೇವಾರಿಯಾಗಿವೆ ಎಂದು ವಿವರಿಸಿದ್ದಾರೆ.ರಾಜ್ಯದಲ್ಲಿ 78 ಜಿಲ್ಲಾ ನ್ಯಾಯಾಧೀಶರು, 55 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು 69 ಸಿವಿಲ್ ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಈಗ ಖಾಲಿ ಇರುವ ಮತ್ತು ಶೀಘ್ರದಲ್ಲಿ ಖಾಲಿ ಆಗಬಹುದಾದ ಹುದ್ದೆಗಳನ್ನು ಗಮನದಲ್ಲಿ ಇರಿಸಿಕೊಂಡು 152 ಸಿವಿಲ್ ನ್ಯಾಯಾಧೀಶರ ನೇಮಕ ಪ್ರಕ್ರಿಯೆ ನಡೆಸಲು ಹೈಕೋರ್ಟ್ ತೀರ್ಮಾನಿಸಿದೆ. 17 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry