ಶನಿವಾರ, ಮೇ 21, 2022
22 °C

2 ಜಿ ಹಗರಣ: ಪಿಎಸಿ ತನಿಖೆ ಕೈಬಿಡುವುದು ಸೂಕ್ತ- ಅಧ್ಯಕ್ಷ ಚಾಕೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಗರಣದ ಬಗೆಗಿನ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ನೇಮಿಸಿರುವುದರಿಂದ  ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ (ಪಿಎಸಿ) ತನಿಖೆಯನ್ನು ಕೈಬಿಡುವುದು ಸೂಕ್ತ ಎಂದು ಜೆಪಿಸಿ ಅಧ್ಯಕ್ಷ ಪಿ.ಸಿ.ಚಾಕೊ ಹೇಳಿದ್ದಾರೆ.

ಇದೇ ವೇಳೆ 1998-2008ರ ಅವಧಿಯಲ್ಲಿ ದೂರಸಂಪರ್ಕ ನೀತಿ ನಿರೂಪಣೆಯಲ್ಲಿ ಭಾಗಿಯಾಗಿದ್ದ ಏಳೆಂಟು  ಮಾಜಿ ಸಚಿವರು ಜೆಪಿಸಿಯಲ್ಲೂ ಇರುವುದರಿಂದ ತನಿಖೆಯ ಆಶಯಕ್ಕೆ ಭಂಗವಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಇದನ್ನು ಸ್ಪೀಕರ್ ಮೀರಾ ಕುಮಾರ್ ಅವರ ಗಮನಕ್ಕೆ ತರಲಾಗುವುದು ಎಂದರು.

ಈ ಬಗ್ಗೆ ಸ್ಪೀಕರ್ ಅವರು ನಿರ್ಣಯ ಕೈಗೊಳ್ಳಬಹುದೇ ಹೊರತು ಜೆಪಿಸಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಜೆಪಿಸಿಯ ಮೊತ್ತಮೊದಲ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ನಾಯಕರೂ ಆದ ಸಂಸದ ಚಾಕೊ ಅಭಿಪ್ರಾಯಪಟ್ಟರು.ಒಂದೇ ಹಗರಣದ ಬಗ್ಗೆ ಪಿಎಸಿ ಹಾಗೂ ಜೆಪಿಸಿಯಿಂದ ನಡೆಯಲಿರುವ ಸಮಾನಾಂತರ ತನಿಖೆಗಳನ್ನು ತಡೆಹಿಡಿಯುವುದು ಸೂಕ್ತ. ಎರಡೂ ಸಮಿತಿಗಳ ಅಂತಿಮ ವರದಿಗಳು ಒಂದೇ ರೀತಿ ಇರಬಹುದು ಅಥವಾ ಭಿನ್ನವಾಗಿಯೂ ಇರಬಹುದು ಎಂದು ಅವರು ಅಭಿಪ್ರಾಯಪಟ್ಟರು. ಆದರೆ, ಎರಡೂ ಸಮಿತಿಗಳ ತನಿಖಾ ಆಶಯಗಳ ನಡುವೆ ಯಾವುದೇ ಸಂಘರ್ಷವಿಲ್ಲ ಎಂದೂ ಅವರು ಒತ್ತಿ ಹೇಳಿದರು.

ಪಿಎಸಿಗೆ ಹೆಚ್ಚಿನ ಅಧಿಕಾರ- ಜೋಷಿ

ಇದೇ ವೇಳೆ ಪಿಎಸಿ ಮುಖ್ಯಸ್ಥರಾದ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿ ಅವರು, ರಾಷ್ಟ್ರದ ಬೊಕ್ಕಸಕ್ಕೆ ಹಾನಿ ತರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವ ಹೆಚ್ಚಿನ ಅಧಿಕಾರ ಪಿಎಸಿಗೆ ಇದೆ. ಆದರೆ ಜೆಪಿಸಿ, ನಿಗದಿತ ಸಮಯದೊಳಗೆ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ತನಿಖೆ ನಡೆಸುವ ಆದೇಶಾತ್ಮಕ ಸಮಿತಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಎರಡೂ ಸಮಿತಿಗಳ ಆಶಯಗಳಲ್ಲಿ ಯಾವುದೇ ಸಂಘರ್ಷ ಇಲ್ಲ ಸಮರ್ಥಿಸಿಕೊಂಡ ಜೋಷಿ, ಏಪ್ರಿಲ್‌ನಲ್ಲಿ ವರದಿ ಸಲ್ಲಿಸುವ ನಿಟ್ಟಿನಲ್ಲಿ ಪಿಎಸಿ ಕಾರ್ಯನಿರತವಾಗಿದೆ ಎಂದರು.ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.