2 ಡಿ ಜಲಪಾತ!

7

2 ಡಿ ಜಲಪಾತ!

Published:
Updated:
2 ಡಿ ಜಲಪಾತ!

ಕಣಿವೆಯ ಮೇಲಿಂದ ಧೋ ಎಂದು ಧುಮುಕುವ ನೀರು ಬಂಡೆಯನ್ನು ಮುಟ್ಟಿ ಕೊಂಚ ಹೊತ್ತು ದಣಿವಾರಿಸಿಕೊಂಡು ಮತ್ತೆ ಧೋ ಎಂದು ಧುಮ್ಮಿಕುತ್ತದೆ. ಒಂದೇ ಜಲನಿಧಿಯ ಎರಡು ಆಯಾಮಗಳ ಮನಮೋಹಕ ದೃಶ್ಯವನ್ನು ನೋಡಬೇಕಾದರೆ ಕುಣೆ ಜಲಪಾತಕ್ಕೆ ಹೋಗಲೇಬೇಕು.ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಗೆ ಸೇರಿದ ಈ ಕುಣೆ ಜಲಪಾತ 660 ಅಡಿ ಎತ್ತರದಿಂದ ಧರೆಗಿಳಿಯುತ್ತದೆ. ಹಳೆಯ ಮುಂಬೈ- ಪುಣೆ ರಸ್ತೆಯಲ್ಲಿ ಸಾಗುವಾಗ ಈ ಜಲಪಾತದ ಅಂದವನ್ನು ದೂರದಿಂದ ಸವಿಯುವ ಅವಕಾಶ ಕೂಡ ಇದೆ.ಪುಣೆಯ ಖ್ಯಾತ ಗಿರಿಧಾಮ ಲೊನಾವಳ ಮತ್ತು ಖಂಡಾಲ ಕಣಿವೆ ಪ್ರದೇಶಗಳಲ್ಲಿ ಭೋರ್ಗರೆಯುತ್ತದೆ ಕುಣೆ. ಮೂಲ ನದಿ ಸೃಷ್ಟಿಸಿದ ಈ ಸುಂದರ ಜಲಪಾತವನ್ನು ನೋಡಲು ಪ್ರವಾಸಿಗರ ಹಿಂಡೇ ಬರುತ್ತದೆ. ಗಿರಿಯನ್ನು ಸುತ್ತು ಬಳಸಿ ಸಾಗಿದಂತೆ ಕಾಣುವ ಈ ಜಲಪಾತದ ಅಂದಕ್ಕೆ ಮನಸೋಲದವರೇ ಇಲ್ಲ.ದಟ್ಟ ಹಸಿರು ತುಂಬಿದ ಕಾಡಿನ ನಡುವೆ ಬೆಳ್ನೊರೆಯಂತೆ ಹರಿದು ಸಾಗುವ ಈ ನೀರು ಹಸಿರನ್ನು ಹಸಿರಾಗಿಯೇ ಇರುವಂತೆ ಕಾಯ್ದುಕೊಳ್ಳುತ್ತದೆ. ಖಂಡಾಲ ಗಿರಿಧಾಮಕ್ಕೆ ಭೇಟಿ ನೀಡಿದವರು ಈ ಸುಂದರ ಜಲನಿಧಿಯನ್ನು ನೋಡದಿದ್ದರೆ ಅವರ ಪ್ರವಾಸ ಅಪೂರ್ಣವಾದಂತೆಯೇ ಸರಿ.ವರ್ಷವಿಡೀ ಧುಮ್ಮಿಕ್ಕಿ ಹರಿಯುವ ಈ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ರಸ್ತೆ ಮಾರ್ಗದೊಂದಿಗೆ ಕಾಡಿನ ದಾರಿಯೂ ಇದೆ. ಕಾಡ ದಾರಿಯಲ್ಲಿ ಟ್ರೆಕ್ಕಿಂಗ್ ಮಾಡುತ್ತಾ ಜಲಪಾತದ ದರ್ಶನ ಮಾಡುವುದೇ ಒಂದು ಸೊಬಗು. ಲೊನಾವಳದಿಂದ ಕೇವಲ ಎರಡೂವರೆ ಕಿಮೀ ದೂರ ಇರುವುದರಿಂದ ಅಲ್ಲಿಂದ ನಡೆದು ಹೋದರೂ ಆದೀತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry