ಶನಿವಾರ, ಮೇ 15, 2021
23 °C

2 ದಿನಗಳಲ್ಲಿ ನೀರಿನ ಸಮಸ್ಯೆಗೆ ಇತಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಇನ್ನೆರಡು ದಿನಗಳಲ್ಲಿ ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಶುಕ್ರವಾರ ತಿಳಿಸಿದರು.ಸರ್ಕಾರಿ ಅತಿಥಿ ಗೃಹದಲ್ಲಿ ಅಧಿಕಾರಗಳ ಜೊತೆ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಎರಡು ತಿಂಗಳ ಮಟ್ಟಿಗೆ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯ ಪಡೆಯು ಪ್ರತಿನಿತ್ಯ ಸಂಜೆ 7 ಗಂಟೆಗೆ ಸಭೆ ಸೇರಿ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತದೆ.ಕುಡಿಯುವ ನೀರು ಕುರಿತು ಸಾರ್ವಜನಿಕರು ದೂರು ನೀಡಿದ ದಿನವೇ ಪರಿಹಾರ ಕೊಡಬೇಕು. ಇನ್ನೆರಡು ದಿನಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ದೂರು ಇಲ್ಲದಂತೆ ನೋಡಿಕೊಳ್ಳಲಾಗುವುದು~ ಎಂದರು.`ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನಗರದ ಕುಡಿಯುವ ನೀರಿಗಾಗಿ 1ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಅಲ್ಲದೆ ನಗರದ ಮೂವರು ಶಾಸಕರಿಂದ ಅನುದಾನವನ್ನು ಕೇಳುತ್ತೇನೆ. ಹೊಸದಾಗಿ ಬೋರ್‌ವೆಲ್ ಕೊರೆಸಲು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ. ಆದರೆ ಅನಿವಾರ್ಯ ಅನಿಸಿದರೆ ಹೊಸ ಬೋರ್‌ವೆಲ್ ಕೊರೆಸಲಾಗುವುದು~ ಎಂದರು.ಶೀಘ್ರದಲ್ಲೇ ವೇಳಾಪಟ್ಟಿ: `ಮೂರ‌್ನಾಲ್ಕು ದಿನಗಳು ಕಳೆದ ನಂತರ ನಾನು ಖುದ್ದಾಗಿ ಸಾರ್ವಜನಿಕರೊಂದಿಗೆ ದೂರವಾಣಿ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ. ಈ ಸಂದರ್ಭದಲ್ಲಿ ಕಾರ್ಯ ಪಡೆಯ ಅಧಿಕಾರಿಗಳೂ ಇರುತ್ತಾರೆ. ಈ ವೇಳೆಗೆ ನಗರದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಒಂದೂ ದೂರು ಬರದಂತೆ ನೋಡಿಕೊಳ್ಳಲಾ ಗುವುದು. ಶೀಘ್ರದಲ್ಲೆ ಯಾವ ವಾರ್ಡ್, ಯಾವ ಪ್ರದೇಶಕ್ಕೆ ಎಷ್ಟು ಗಂಟೆಗೆ ನೀರು ಬಿಡಲಾಗುತ್ತದೆ ಎನ್ನುವ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. 24/7 ಸೇವೆಯಲ್ಲಿರುವ ಅಧಿಕಾರಿಗಳ ತಮ್ಮ ಮೊಬೈಲ್‌ಗೆ ಬರುವ ಕರೆಗಳನ್ನು ಸ್ವೀಕರಿಸಬೇಕು. ಇಲ್ಲದೇ ಹೋದರೆ ಕ್ರಮ ಜರುಗಿಸಲಾಗುವುದು~ ಎಂದರು.ಜುಲೈಗೆ ಕಬಿನಿ ನೀರು: `ಕಬಿನಿ ನದಿಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಜೂನ್‌ನಲ್ಲಿ ಪೂರ್ಣಗೊಳ್ಳಲಿದ್ದು, ಜುಲೈ ತಿಂಗಳಿಂದ ನೀರು ಪೂರೈಸಲಾಗುವುದು. ರೈತರು ಪರಿಹಾರಕ್ಕಾಗಿ ಕೋರ್ಟ್‌ಗೆ ಹೋದ ಕಾರಣ ಯೋಜನೆ ಅನುಷ್ಠಾನ ವಿಳಂಬವಾಯಿತು. ಮುಂದಿನ ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಇಲ್ಲವಾ ಗುತ್ತದೆ~ ಎಂದು ಭರವಸೆ ನೀಡಿದರು.ಗೊಂದಲ ಬೇಕಿಲ್ಲ: `ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಮತ್ತು ಜಸ್ಕೊ ನಡುವೆ ಹೊಂದಾಣಿಕೆ ಇಲ್ಲದೇ ಗೊಂದಲ ಉಂಟಾಗಿದೆ. ಇದು ಬಗೆಹರಿಯಲೇಬೇಕು. ಇವರಿಬ್ಬರ ನಡುವಿನ ಕಚ್ಚಾಟದಿಂದ ನಗರದ ಜನತೆ ನೀರಿಲ್ಲದೆ ಪರಿತಪಿಸು ವಂತಾಗಿದೆ. ವಾಲ್ವ್‌ಮನ್ ಸಂಘದವರೊಂದಿಗೆ ಮಾತನಾಡಿದ್ದೇನೆ. ಅವರಿಗೆ ನಗರಕ್ಕೆ ನೀರು ಸರಬರಾಜು ಮಾಡಿದ ಅನುಭವವಿದೆ. ಕೆಆರ್‌ಎಸ್‌ನಲ್ಲಿ 67 ಅಡಿ ನೀರು ಇದ್ದಾಗಲೇ ನಗರಕ್ಕೆ ಕೊರತೆಯಾಗದಂತೆ ನೀರು ಪೂರೈಸಲಾಗಿದೆ. ಈಗ 95 ಅಡಿಗಳಷ್ಟು ನೀರಿದೆ. ಆದ್ದರಿಂದ ಸಮಸ್ಯೆ ಉದ್ಭವಿಸ ಲೇಬಾರದು~ ಎಂದ ಅವರು, `ಜಸ್ಕೊ ತನ್ನ ಕಾರ್ಯ ವನ್ನು ಪೂರ್ಣಗೊಳಿಸದೇ ಯಾವುದೇ ಕಾರಣಕ್ಕೂ ನಗರದಿಂದ ಹೊರಕ್ಕೆ ಹೋಗಲು ಬಿಡುವುದಿಲ್ಲ~ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಉಪ ಮೇಯರ್ ಎಂ.ಜೆ. ರವಿಕುಮಾರ್,ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಡಾ.ಸಿ.ಜಿ. ಬೆಟಸೂರಮಠ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.