2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಜೆಸಿಂತಾ

7
ಮಾನಸಿಕ ತುಮುಲ, ಖಿನ್ನತೆಯ ಕಾರಣ

2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಜೆಸಿಂತಾ

Published:
Updated:

ಮಂಗಳೂರು: ಲಂಡನ್‌ನಲ್ಲಿ ಇದೇ 7ರಂದು ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಮೂಲದ ನರ್ಸ್ ಜೆಸಿಂತಾ ಸಲ್ಡಾನ ಅವರು ಕಳೆದ ವರ್ಷ ಕ್ರಿಸ್ಮಸ್ ಸಮಯದಲ್ಲಿ ಊರಿಗೆ ಬಂದಿದ್ದಾಗ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಕಳೆದ ಡಿಸೆಂಬರ್‌ನಲ್ಲಿ ಮಂಗಳೂರು ಮತ್ತು ಶಿರ್ವಕ್ಕೆ ಬಂದಿದ್ದ ಜೆಸಿಂತಾ ಅವರು ಡಿಸೆಂಬರ್ 30ರಂದು ಶಂಕಿತ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರು ಗುಣಮುಖರಾಗಿದ್ದರು. ವಾರದ ಬಳಿಕ ಅಂದರೆ ಜನವರಿ 8ರಂದು ಅವರು ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಬಾರಿ ಅವರು `ಬಿದ್ದು ಪೆಟ್ಟಾದ' ಸ್ಥಿತಿಯಲ್ಲಿ ಕಂಡುಬಂದಿದ್ದರು. ತಲೆಗೆ ಏಟು ಬಿದ್ದ ಅವರನ್ನು ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂಬುದನ್ನು ಪುಷ್ಟೀಕರಿಸುವ ಮಾಹಿತಿ `ಪ್ರಜಾವಾಣಿ'ಗೆ ದೊರೆತಿದೆ.ಜೆಸಿಂತಾ ಅವರು ಎರಡನೇ ಬಾರಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ವೈದ್ಯರು ಅವರಲ್ಲಿ ತೀವ್ರ ಸ್ವರೂಪದ `ಖಿನ್ನತೆ'ಯ ಲಕ್ಷಣ ಗುರುತಿಸಿದ್ದರು. ಕೆಲವೊಂದು ಒತ್ತಡಗಳಿಂದ ಅವರು ಬಳಲುತ್ತಿದ್ದರು ಎಂದು ಅಂದಾಜಿಸಿದ್ದರು. ಆದರೆ ಅದಕ್ಕೆ ಕಾರಣ ಏನು ಎಂಬುದು ಗೊತ್ತಾಗಿರಲಿಲ್ಲ.15 ದಿನಗಳಿಂದ ಸರಿಯಾಗಿ ನಿದ್ದೆ ಮಾಡದೆ ಇದ್ದುದರಿಂದ ಅವರು ಎರಡೆರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವೈದ್ಯರು ಭಾವಿಸಿದ್ದರು.

ಸಾಯುವ ನಿರ್ಧಾರ ಮಾಡಿದ್ದ ಜೆಸಿಂತಾ ಅವರ ಮನೋಸ್ಥಿತಿ ಆಗ ಬಹಳ ಭಿನ್ನವಾಗಿತ್ತು. ಕಣ್ಣಿಗೆ ಕಣ್ಣಿಟ್ಟು ಮಾತನಾಡಲು ಕಷ್ಟಪಡುವುದು, ಸೌಹಾರ್ದವಾಗಿ ಇಲ್ಲದಿರುವುದು, ಮಾತುಕತೆಯ ಪ್ರಮಾಣ ಕಡಿಮೆ ಆಗಿರುವುದನ್ನು ವೈದ್ಯರು ಗುರುತಿಸಿದ್ದರು. ಹೀಗಾಗಿ ಅವರು ಮಾನಸಿಕ ಚಿಕಿತ್ಸೆಗೆ ಒಳಪಡುವುದು ಸೂಕ್ತ ಎಂದು ಜನವರಿ 10ರಂದು ವೈದ್ಯರು ಸಲಹೆ ನೀಡಿದ್ದರು.ಮಾನಸಿಕ ಚಿಕಿತ್ಸೆ: ಜೆಸಿಂತಾ ಬಳಿಕ 4 ದಿನ ಇದೇ ಆಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸೆಗೆ ಒಳಗಾಗಿದ್ದರು. ಜನವರಿ 15ರಂದು ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದುವಾಗ `ಸಂತೋಷ'ದ ಭಾವದಲ್ಲಿದ್ದರು ಹಾಗೂ ಅವರ ಮಾನಸಿಕ ತುಮುಲಗಳೂ ನಿಯಂತ್ರಣಕ್ಕೆ ಬಂದಂತೆ ಕಾಣಿಸಿತ್ತು. `ಜೆಸಿಂತಾ ಅವರು ಸ್ವಂತ ಹಾನಿ ಮಾಡಿಕೊಳ್ಳುವ ಮನೋಭಾವ ಹೊಂದಿದ್ದಾರೆ. ಅವರ ಬಗ್ಗೆ ದಿನದ 24 ಗಂಟೆಯೂ ನಿಗಾ ಇಟ್ಟುಕೊಳ್ಳಬೇಕು' ಎಂದು ಅವರನ್ನು ನೋಡಿಕೊಳ್ಳುವವರಿಗೆ ಸಲಹೆ ನೀಡಿದ್ದ ವೈದ್ಯರು 9 ತಿಂಗಳ ಕಾಲ ಔಷಧ ಸೇವನೆಗೆ ಸಲಹೆ ನೀಡಿದ್ದರು. ಅದರಂತೆ ಜೆಸಿಂತಾ ಕಳೆದ ಸೆಪ್ಟೆಂಬರ್‌ವರೆಗೂ ಔಷಧ ಸೇವಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.ಜೆಸಿಂತಾ ಅವರು ತಮ್ಮ ಕುಟುಂಬದ ಸದಸ್ಯರಿಂದ ದೂರವೇ ಇದ್ದರು. ಹೀಗಾಗಿ ಅವರ ಬಗ್ಗೆ ಕುಟುಂಬದ ಸದಸ್ಯರಿಗೆ ಅವರ ಯೋಗಕ್ಷೇಮ ನೋಡಿಕೊಳ್ಳುವುದು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಜೆಸಿಂತಾ ಅವರು ಲಂಡನ್‌ನ ಸ್ಟಾಫ್ ನರ್ಸ್ ಕ್ವಾರ್ಟರ್ಸ್‌ನಲ್ಲಿ ಏಕಾಂಗಿಯಾಗಿ ಇದ್ದರು. ಅವರ ಪತಿ, ಮಕ್ಕಳು  ಬ್ರಿಸ್ಟಲ್‌ನಲ್ಲಿ ನೆಲೆಸಿದ್ದರು.ಆಸ್ಟ್ರೇಲಿಯಾದ ರೇಡಿಯೊ ಡಿ.ಜೆಗಳು ಜೆಸಿಂತಾಗೆ ಹುಸಿ ಕರೆ ಮಾಡಿದ ಬಳಿಕ ಅವರ ಆತ್ಮಹತ್ಯೆ ಮನೋಭಾವ ಮತ್ತೆ ಚುರುಕಾಗಿರಬೇಕು ಎಂಬ ಶಂಕೆ ಇದೆ. ಆದರೆ ಕಳೆದ ವರ್ಷ ಊರಿಗೆ ಬಂದಿದ್ದಾಗ ಅವರು ಎರಡೆರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಖಿನ್ನತೆ ಕಾಣಿಸಿಕೊಳ್ಳಲು ಏನು ಕಾರಣ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry