ಭಾನುವಾರ, ಮೇ 22, 2022
28 °C

2 ಲಕ್ಷ ಕುಟುಂಬಗಳಿಗೆ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾಂಡಾ, ಗೋಮಾಳ, ಗೊಲ್ಲರಹಟ್ಟಿ, ರೆವಿನ್ಯೂ ಜಾಗದ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಸುಮಾರು ಎರಡು ಲಕ್ಷ ಕುಟುಂಬಗಳಿಗೆ ಇಂದಿರಾ-ಬಸವ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಇಲ್ಲಿ ತಿಳಿಸಿದರು.ಇದೇ 28ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರತಿಯೊಂದು ಮನೆಗೆ ರೂ 60 ಸಾವಿರ ವೆಚ್ಚವಾಗಲಿದ್ದು, ಫಲಾನುಭವಿ ಹತ್ತು ಸಾವಿರ ರೂಪಾಯಿ ನೀಡಬೇಕು. ಉಳಿದ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಆಶ್ರಯ, ಅಂಬೇಡ್ಕರ್ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಮುಂದಿನ ಮಾರ್ಚ್ ಒಳಗೆ 50 ಸಾವಿರ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಈಗಾಗಲೇ ಮೂರು ಲಕ್ಷ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಡುವೆ ಸಮನ್ವಯ ಇಲ್ಲದ ಕಾರಣ ಮನೆಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ದೀಪಾವಳಿ ನಂತರ ಮೂರೂ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು. ಯಾವ ಹಳ್ಳಿಗೆ ಎಷ್ಟು ಮನೆ ಮಂಜೂರಾಗಿದೆ, ಎಷ್ಟು ನಿರ್ಮಾಣವಾಗಿವೆ ಎಂದು ಪರಿಶೀಲಿಸುವುದಕ್ಕಾಗಿ ತಹಸೀಲ್ದಾರ್ ನೇತೃತ್ವದಲ್ಲಿ 15 ದಿನಗಳ ಒಳಗೆ ಕಾರ್ಯಪಡೆ ರಚಿಸಲಾಗುವುದು ಎಂದು ಹೇಳಿದರು.`ನವೆಂಬರ್ 15ರೊಳಗೆ ಎಲ್ಲ ಸಮಸ್ಯೆ ಇತ್ಯರ್ಥ~

ಬೆಂಗಳೂರು: `ಮುಖಂಡರಲ್ಲಿನ ವೈರುಧ್ಯ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಬೇಸರವಾಗಿದೆ. ಶನಿ ಕಾಟದಿಂದ ಪಕ್ಷದಲ್ಲಿ ಸಮಸ್ಯೆಗಳು ತಲೆದೋರಿವೆ. ನವೆಂಬರ್ 15ರ ಒಳಗೆ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ~ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.`ನಮ್ಮ ಪಕ್ಷದಲ್ಲಿ ಅಷ್ಟೇ ಅಲ್ಲ, ಬೇರೆ ಪಕ್ಷಗಳಲ್ಲೂ ಇದೇ ರೀತಿ ಸಮಸ್ಯೆಗಳಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಚರ್ಚೆ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತಾರೆ. ಮುಖಂಡರೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ. ನ.15ರಿಂದ ಪಕ್ಷಕ್ಕೆ ಶುಕ್ರದೆಸೆ ಆರಂಭವಾಗಲಿದೆ~ ಎಂದರು.`ಯಾರೋ ಒಬ್ಬರು ದೂರು ಕೊಟ್ಟ ಮಾತ್ರಕ್ಕೆ ತನಿಖೆಗೆ ಆದೇಶ ನೀಡಿ ಎಫ್‌ಐಆರ್ ದಾಖಲಿಸುವುದರಿಂದ 30 ವರ್ಷದ ದುಡಿಮೆ ನೀರಿಗೆ ಹಾಕಿದಂತಾಗುತ್ತದೆ. 40-50 ವರ್ಷಗಳಿಂದ ಡಿನೋಟಿಫಿಕೇಷನ್ ನಡೆಯುತ್ತಲೇ ಇದೆ. ಎಲ್ಲ ಕಡೆಯೂ ಆಗಿದೆ. ಸಣ್ಣ ವಿಷಯವನ್ನೇ ದೊಡ್ಡದಾಗಿ ಮಾಡುವುದರಿಂದ ರಾಜಕೀಯವಾಗಿ ಭವಿಷ್ಯ ಇಲ್ಲದಂತಾಗುತ್ತದೆ~ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.