2 ವಾರ ವಿಚಾರಣೆ ಮುಂದೂಡಿದ ಹೈಕೋರ್ಟ್

7
ಜಯಾ ಆಸ್ತಿ ಪ್ರಕರಣ: ಎಸ್‌ಎಸ್‌ಪಿ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ

2 ವಾರ ವಿಚಾರಣೆ ಮುಂದೂಡಿದ ಹೈಕೋರ್ಟ್

Published:
Updated:
2 ವಾರ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು (ಪಿಟಿಐ): ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಎಸ್‌ಪಿ) ಭವಾನಿ ಸಿಂಗ್ ಅವರ ನೇಮಕ ಪ್ರಶ್ನಿಸಿ ಡಿಎಂಕೆ ಮುಖಂಡ ಕೆ ಅನ್ಬಳಗನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಎರಡು ವಾರಗಳ ಕಾಲ ಮುಂದೂಡಿದೆ.

ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕ ಕರ್ತವ್ಯದಿಂದ ಸಿಂಗ್ ಅವರನ್ನು ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿರುವ ಕ್ರಮ ಪ್ರಶ್ನಿಸಿ ಜಯಲಲಿತಾ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಕಾರಣ, ಅನ್ಬಳಗನ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರು ಮುಂದೂಡಿದರು.

  ಸಿಂಗ್ ಅವರನ್ನು ಪ್ರಕರಣದ ಎಸ್‌ಎಸ್‌ಪಿ ಸ್ಥಾನದಿಂದ ಬಿಡುಗಡೆಗೊಳಿಸಿರುವ ಕರ್ನಾಟಕ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 13 ರಂದು ಕಾಯ್ದಿರಿಸಿದ್ದು, ಅನ್ಬಳಗನ್ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಹುರಳಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಬಹುದು ಎಂದು ಜಯಲಲಿತಾ ಪರ ವಕೀಲರು ವಾದ ಮಂಡಿಸಿದರು.

ಆದರೆ ಇದಕ್ಕೆ ಪ್ರತಿಯಾಗಿ,  ಸಿಂಗ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವ ಕ್ರಮವನ್ನು ಜಯಲಲಿತಾ ಹಾಗೂ ಪ್ರಕರಣದ ಇತರ ಆರೋಪಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವ ಕಾರಣ, ವಿಚಾರಣೆಯನ್ನು ಯಾವುದೇ ದಿನಕ್ಕೆ ಮುಂದೂಡಬಹುದು ಎಂದು ಅನ್ಬಳಗನ್ ಪರ ವಕೀಲರು  ವಾದಿಸಿದರು.

1991ರಿಂದ 1996ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಯಲಲಿತಾ ಅವರು 66.65 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿರುವ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದ ತನಿಖೆಯನ್ನು ಇಲ್ಲಿನ ವಿಶೇಷ ನ್ಯಾಯಾಲಯವೊಂದು ವಿಚಾರಣೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry