ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತು

ಸೈನೈಡ್‌ ಹಂತಕ ಮೋಹನ ಕುಮಾರ್
Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಗಳೂರು: ಸೈನೈಡ್‌ ಬಳಸಿ ಮಹಿಳೆಯರನ್ನು ಕೊಲೆ ಮಾಡುತ್ತಿದ್ದ ಆರೋಪಿ, ಬಂಟ್ವಾಳ ತಾಲ್ಲೂಕಿನ ಕನ್ಯಾನದ ಶಿಕ್ಷಕ ಮೋಹನ ಕುಮಾರ್‌ ವಿರುದ್ಧ ದಾಖಲಾಗಿದ್ದ 20 ಕೊಲೆ ಪ್ರಕರಣಗಳ ಪೈಕಿ ಎರಡು ಕೊಲೆ ಪ್ರಕರಣಗಳು ಸಾಬೀತಾಗಿವೆ.

ಬಂಟ್ವಾಳ ತಾಲ್ಲೂಕಿನ ಬರಿಮಾರು ಗ್ರಾಮದ ಅನಿತಾ (22) ಹಾಗೂ ವಾಮದ ಪದವು ಗ್ರಾಮದ ಲೀಲಾ (32) ಅವರನ್ನು ಮೋಹನ ಕುಮಾರ್‌ ಅಪಹರಿಸಿ, ಬೇರೆ ಜಿಲ್ಲೆಗೆ ಕರೆದೊಯ್ದು ಕೊಲೆ ಮಾಡಿರುವುದು ಹಾಗೂ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿ ರುವುದು ಸಾಂದರ್ಭಿಕ ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದು ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಬಿ.ಕೆ.ನಾಯಿಕ ಅವರು ಮಂಗಳವಾರ ಆದೇಶ ನೀಡಿದರು. ಶಿಕ್ಷೆ ಪ್ರಮಾಣ ಗುರುವಾರ ಪ್ರಕಟಿಸುವ ಸಾಧ್ಯತೆ ಇದೆ.

ಬರಿಮಾರಿನ ಅನಿತಾ ಅವರನ್ನು 2009ರ ಜೂ. 17ರಂದು ಬಿ.ಸಿ. ರೋಡ್‌ ಬಸ್‌ ನಿಲ್ದಾಣದಿಂದ  ಹಾಸನಕ್ಕೆ ಕರೆದೊಯ್ದಿದ್ದ ಮೋಹನ್‌ ಕುಮಾರ್‌, ಅಲ್ಲಿನ  ಲಾಡ್ಜ್‌ನಲ್ಲಿ ಆಕೆಯ ಜತೆ ಲೈಂಗಿಕ ಕ್ರಿಯೆ ನಡೆಸಿದ್ದ. ಮರುದಿನ ಹಾಸನದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಕೆಯನ್ನು ಕರೆತಂದು.  ಸೈನೈಡ್‌ ಗುಳಿಗೆ ನೀಡಿ, ‘ಇದನ್ನು ತಿಂದರೆ, ಗರ್ಭಧಾರಣೆ ಆಗುವುದಿಲ್ಲ’ ಎಂದು ನಂಬಿಸಿದ್ದ. ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಸೈನೈಡ್‌ ನುಂಗಿದ ಅನಿತಾ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಬಳಿಕ ಅಲ್ಲಿಂದ ತೆರಳಿದ್ದ ಮೋಹನ, ಲಾಡ್ಜ್‌ನಲ್ಲಿದ್ದ ಆಕೆಯ ಆಭರಣಗಳೊಂದಿಗೆ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಒಟ್ಟು 49 ಮಂದಿ ಸಾಕ್ಷ್ಯ ಹೇಳಿದ್ದರು. ಅನಿತಾ ಕೊಲೆ ಸಂಬಂಧ ಮೋಹನ್‌ ಕುಮಾರ್‌ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ಸಾಬೀತಾಗಿವೆ.

ಬಂಟ್ವಾಳ ತಾಲ್ಲೂಕಿನ ವಾಮ ದಪದವು ಕೋಡಂಬೆಟ್ಟು ಗ್ರಾಮದ ಲೀಲಾ ಅವರನ್ನು 2005ರ ಸೆ.9ರಂದು ಮೋಹನ ಮೈಸೂರಿಗೆ ಕರೆದೊಯ್ದಿದ್ದ. ಅಲ್ಲಿನ ಲಾಡ್ಜ್‌ನಲ್ಲಿ ಆಕೆಯ ಜತೆ ಉಳಿದುಕೊಂಡಿದ್ದ ಮೋಹನ ಆಕೆಯ ಜತೆಗೂ   ಲೈಂಗಿಕ ಕ್ರಿಯೆ ನಡೆಸಿದ್ದ. ಮರುದಿನ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕರೆತಂದು ಸೈನೈಡ್‌ ಹುಡಿ ನೀಡಿದ್ದ. ಶೌಚಾಲ ಯದಲ್ಲಿ ಸೈನೈಡ್‌ ಸೇವಿಸಿ ಲೀಲಾ ಮೃತಪಟ್ಟಿದ್ದು ಖಚಿತವಾದ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದ ಮೋಹನ ಲಾಡ್ಜ್‌ಗೆ ತೆರಳಿ ಆಕೆಯ ಚಿನ್ನಾಭರ ಣಗಳೊಂದಿಗೆ ಪರಾರಿ ಯಾಗಿದ್ದ. ಲೀಲಾ ಕೊಲೆ ಪ್ರಕರಣದಲ್ಲೂ ಮೋಹನನ ವಿರುದ್ಧ  ದಾಖಲಾಗಿದ್ದ ಪ್ರಕರಣಗಳು ಸಾಬೀತಾಗಿವೆ.

ನೆರವಿಗೆ ಬಂದ ಮಹಿಳೆಯರಿಬ್ಬರ ಸಾಕ್ಷ್ಯ: ಮೋಹನನ ಮೋಹ ಪಾಶಕ್ಕೆ ಬಿದ್ದು, ಆತನ ನೀಡಿದ ಸೈನೈಡ್‌ ನೆಕ್ಕಿದರೂ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದ ಯುವತಿ ಹಾಗೂ ಮೋಹನ ಬಲೆಗೆ ಬೀಳದ ವಿಧವೆಯೊ ಬ್ಬರು ಸ್ವಯಂಪ್ರೇರಿತವಾಗಿ ಸಾಕ್ಷ್ಯ ನುಡಿದಿದ್ದು, ಆರೋಪ ಸಾಬೀತು ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ತೊಕ್ಕೊಟ್ಟಿನ ಚಿನ್ನದ ಮಳಿಗೆಗೆ ಮೋಹನ ಮಾರಾಟ ಮಾಡಿದ್ದ ಅನಿತಾ ಅವರ ಆಭರಣಗಳು ಪತ್ತೆಯಾಗಿದ್ದು,  ಲೀಲಾ ಅವರ ಆಭರಣಗಳು ಮೋಹನನ ಎರಡನೇ ಪತ್ನಿ ಶ್ರೀದೇವಿ ಅವರ ಮನೆಯಲ್ಲಿ ಪತ್ತೆಯಾಗಿದ್ದು ಕೂಡಾ ಈ ಆರೋಪ ಸಾಬೀತಾಗುವುದಕ್ಕೆ ನೆರವಾಗಿದೆ. 

ಪುತ್ತೂರಿನ ಎಎಸ್‌ಪಿಯಾಗಿದ್ದ ಚಂದ್ರಗುಪ್ತ ಹಾಗೂ ಬಂಟ್ವಾಳ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ನಂಜುಂಡೇಗೌಡ ಬರಿಮಾರಿನ ಅನಿತಾ ನಾಪತ್ತೆ ಪ್ರಕರಣ ಸಂಬಂಧ 2009ರ ಅ.21ರಂದು ಮೋಹನ ನನ್ನು ಬಂಧಿಸಿದ್ದರು. 20 ಮಹಿಳೆಯರನ್ನು ಕೊಲೆ ಮಾಡಿದ್ದನ್ನು ಮೋಹನ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದ. ಬಡಕುಟುಂಬದ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಂಡು, ಲೈಂಗಿಕವಾಗಿ ಬಳಸಿಕೊಂಡು ಬಳಿಕ ಸೈನೈಡ್‌ ತಿನ್ನಿಸಿ ಕೊಲೆ ಮಾಡಿದ ಆತನ ಕಾರ್ಯ ತಂತ್ರ ರಾಜ್ಯದಾದ್ಯಂತ ದಿಗ್ಭ್ರಮೆ ಮೂಡಿಸಿತ್ತು.

ಪಶ್ಚಾತಾಪ ಪಡದ ಅಪರಾಧಿ
ನ್ಯಾಯಾಧೀಶ ಬಿ.ಕೆ.ನಾಯಿಕ ಅವರು ಈ ಎರಡೂ ಕೊಲೆ ಪ್ರಕರಣಗಳಲ್ಲಿ 91 ಪುಟದ ಆದೇಶವನ್ನು ಓದುತ್ತಿದ್ದಾಗ ಮೋಹನ ಸ್ವಲ್ಪವೂ ವಿಚಲಿತನಾದಂತೆ ಕಾಣಲಿಲ್ಲ. ಒಂದೆರಡು ಬಾರಿ ತುಟಿ ಕಚ್ಚಿ ಉಗುಳು ನುಂಗಿಕೊಂಡ. ಕೈಯನ್ನು ಹಿಂದಕ್ಕೆ ಕಟ್ಟಿ ನಿಂತಿದ್ದ ಆತ, ಕೈ ಕೈ ಹಿಸುಕುತ್ತಿದ್ದ.

‘ಆದೇಶದ ಬಗ್ಗೆ ಏನಾದರೂ ಪ್ರತಿಕ್ರಿಯಿಸುವುದು ಇದೆಯೋ?’ ಎಂದು ನ್ಯಾಯಾಧೀಶರು ವಿಚಾರಿಸಿ ದಾಗ, ‘ಇಲ್ಲ’ ಎಂದಷ್ಟೇ ಉತ್ತರಿಸಿದ್ದ. ‘ಆರೋಪ ಗಳನ್ನು ಒಪ್ಪಿಕೊಳ್ಳುತ್ತೀಯೋ?’ ಎಂದು ಪ್ರಶ್ನಿಸಿ ದಾಗ, ‘ಇಲ್ಲ, ಈ ಆರೋಪಗಳೆಲ್ಲವೂ ಸುಳ್ಳು’ ಎಂದು ಉತ್ತರಿಸಿದ್ದ. ಆತನ ಮುಖದಲ್ಲಿ ಪಶ್ಚಾತ್ತಾಪ ಲವಲೇಶವೂ ಕಾಣಿಸಲಿಲ್ಲ.

ವಿಚಾರಣೆ ವೇಳೆಯೂ ಮೋಹನ ತನ್ನ ಪರ ವಾದಿಸಲು ವಕೀಲರನ್ನು ನೇಮಿಸಿಕೊಂಡಿರಲಿಲ್ಲ. ಆತನೇ ಕಾನೂನು ಪುಸ್ತಕಗಳನ್ನು  ಓದಿ, ಸಾಕ್ಷ್ಯಗಳ ಪಾಟೀ ಸವಾಲು ನಡೆಸಿದ್ದ.

‘ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಚಿಂತಿಸುತ್ತಿದ್ದೇನೆ’ ಎಂದು ಆತ ಸುದ್ದಿಗಾರರಿಗೆ ತಿಳಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT