ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕುಸಿತ

Last Updated 16 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ರಾಮನಗರ: ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷ ಲೀಟರ್ ಹಾಲು ಉತ್ಪಾದನೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ. ಮಂಜುನಾಥ್ ತಿಳಿಸಿದರು.

ಬೆಂಗಳೂರು ಹಾಲು ಒಕ್ಕೂಟ ಮತ್ತು ಎಂ. ಗೋಪಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮಂಗಳವಾರ ಏರ್ಪಡಿಸಿದ್ದ ‘ಪಶು ಆರೋಗ್ಯ ತಪಾಸಣೆ ಬರಡು ರಾಸುಗಳ ಶಿಬಿರ ಮತ್ತು ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 9.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು.ಆದರೆ ಬೇಸಿಗೆ ಆರಂಭದ ಕಾಲದಲ್ಲಿಯೇ ಎರಡು ಲಕ್ಷ ಲೀಟರ್ ಪೂರೈಕೆ ಕಡಿಮೆಯಾಗಿದ್ದು, ಇದರಿಂದ ಒಕ್ಕೂಟ ವ್ಯಾಪ್ತಿಯಲ್ಲಿ 7.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ನೀರಿನ ಕೊರತೆ ಹಾಗೂ ಮೇವಿನ ಕೊರತೆಯಿಂದ ಹಾಲು ಉತ್ಪಾದನೆ ಕುಸಿದಿದೆ.ಹಾಗಾಗಿ ತುಮಕೂರು ಪ್ರದೇಶದಿಂದ ನಿತ್ಯ 70 ಸಾವಿರ ಲೀಟರ್ ಹಾಲನ್ನು ಹೆಚ್ಚಿನ ಬೆಲೆಗೆ ಖರೀದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ರೈತರಿಂದ ಬರುವ ಲಾಭವನ್ನು ಒಕ್ಕೂಟ ಇಟ್ಟುಕೊಳ್ಳದೆ ರೈತರಿಗೆ ನೀಡುತ್ತಿದೆ.ಸರ್ಕಾರ ಹಾಲಿನ ಬೆಲೆಯನ್ನು ಎರಡು ರೂಪಾಯಿ ಹೆಚ್ಚಿಸಿದೆ. ಅದೂ ಕೂಡ ನೇರವಾಗಿ ಹಾಲು ಉತ್ಪಾದಕರಿಗೆ ಸೇರಲಿದೆ.ಬುಧವಾರದಿಂದಲೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ಹೇಳಿದರು.ಇವುಗಳ ಜತೆಗೆ ಸಹಕಾರ ಸಂಘಗಳ ಸದಸ್ಯರಿಗೆ ಹಲವು ಬಗೆಯ ಸೇವಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.ಜೀವ ವಿಮಾ ಸೌಲಭ್ಯ ಕೂಡ ಶೀಘ್ರದಲ್ಲಿಯೇ ಜಾರಿಯಾಗಲಿದೆ ಎಂದರು.

ಹಾಲು ಸಹಕಾರ ಸಂಘಗಳು ಉತ್ತಮ ಗುಣಮಟ್ಟದ ಹಾಲು ಖರೀದಿಸಬೇಕು.ಇಲ್ಲದಿದ್ದರೆ ಈ ಸಹಕಾರ ಸಂಘಗಳಿಗೆ ಸಂಚಕಾರ ಎದುರಾಗಬಹುದು. ಈ ನಿಟ್ಟಿನಲ್ಲಿ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರು ಎಚ್ಚರದಿಂದ ಕಾರ್ಯ ನಿರ್ವಹಿಸುವಂತೆ ಅವರು ಸೂಚಿಸಿದರು.

ಸಹಕಾರ ಸಂಘಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು.ಒಂದು ವೇಳೆ ಇಲ್ಲಿ ರಾಜಕೀಯ ಆವರಿಸಿದರೆ ಸಂಘಗಳು ಮುಳುಗಿ ಹೋಗುತ್ತವೆ.ಆದ್ದರಿಂದ ಸಂಘಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಇಡುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎಲ್.ಚಂದ್ರು ಮಾತನಾಡಿ, ‘ರಾಜಕಾರಣ ಮಾಡದೇ ಸಹಕಾರ ಸಂಘಗಳನ್ನು ಬೆಳೆಸಬೇಕು. ಅದಕ್ಕೆ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ಸಂಬಂಧಿಸಿದ ಇಲಾಖೆಗಳಿಂದ ದೊರೆಯಬೇಕು’ ಎಂದು ಹೇಳಿದರು.

ಬಮೂಲ್ ನಿರ್ದೇಶಕ ಪಿ. ನಾಗರಾಜ್ ಮಾತನಾಡಿ, ಮುಂದಿನ ಎರಡು ವರ್ಷದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 25 ರೂಪಾಯಿ ಬೆಲೆ ದೊರೆಯುವ ಸೌಭಾಗ್ಯ ಇದೆ.ಆದರೆ ಈ ನಿಟ್ಟಿನಲ್ಲಿ ಉತ್ಪಾದಕರಿಂದ ಸರ್ಕಾರಕ್ಕೆ ಬೇಡಿಕೆಗಳೇ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.

ಬೇರೆ ರಾಜ್ಯಗಳಲ್ಲಿ ಹಾಲಿನ ದರವನ್ನು ನಮ್ಮ ರಾಜ್ಯದ ಹಾಲಿನ ದರಕ್ಕೆ ಹೋಲಿಕೆ ಮಾಡಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವ ಅಗತ್ಯ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರಿಗೆ ಇನ್ನಷ್ಟು ನೆರವು ಒದಗಿ ಬರಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಮತ್ತು ಸಹಕಾರ ಕ್ಷೇತ್ರದ ಪ್ರಗತಿಗೆ ಕಾರಣಕರ್ತರಾಗಿರುವ ಸಹಕಾರ ಸಚಿವರಿಗೆ ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸುವ ಉದ್ದೇಶ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಒಕ್ಕೂಟದ ವ್ಯ್ಖವಸ್ಥಾಪಕ ನಿರ್ದೇಶಕ ಡಾ. ಎಂ.ಲಕ್ಷ್ಮಣ ರೆಡ್ಡಿ, ಗೋಪಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಭವಾನಿ ಕುಮಾರ್, ರಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ಬಿಲ್ಲೇದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್.ಆನಂದ್, ಚೌಕಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೆಂಕಟಾಚಲರೆಡ್ಡಿ, ಎಂ. ಗೋಪಹಳ್ಳಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಬಿ.ಗಂಗಾಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT