20ಕ್ಕೂ ಹೆಚ್ಚು ಮನೆಗಳ ಕುಸಿತ, ಬೆಳೆ ಹಾನಿ

7

20ಕ್ಕೂ ಹೆಚ್ಚು ಮನೆಗಳ ಕುಸಿತ, ಬೆಳೆ ಹಾನಿ

Published:
Updated:
20ಕ್ಕೂ ಹೆಚ್ಚು ಮನೆಗಳ ಕುಸಿತ, ಬೆಳೆ ಹಾನಿ

ಹಾವೇರಿ: ಜಿಲ್ಲೆಯಾದ್ಯಂತೆ ಶುಕ್ರವಾರ ರಾತ್ರಿ ಮತ್ತೊಮ್ಮೆ ಮಳೆ ಅಬ್ಬರಿಸಿದೆ. 48 ಗಂಟೆಗಳಲ್ಲಿ ಎರಡು ಬಾರಿ ಬಿದ್ದ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಅಲ್ಲಲ್ಲಿ ಹೊಲಗಳಿಗೆ ನೀರು ನುಗ್ಗಿ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ.

ಜಿಲ್ಲೆಯ ರಾಣೆಬೆನ್ನೂರ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆ ಬಿದ್ದಿದ್ದು, ರಾಣೆಬೆನ್ನೂರ ತಾಲ್ಲೂಕಿನಲ್ಲಿ ಎರಡು ದಿನಗಳಲ್ಲಿ 15 ಮನೆಗಳು ಕುಸಿದಿದ್ದರೆ, ಇದೇ ಪಟ್ಟಣದಲ್ಲಿ 15 ಗುಡಿಸಲುಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲ್ಲೂಕಿನ ಇಂಗಳಗೊಂದಿ ಪ್ಲಾಟ್‌ನಲ್ಲಿ 4 ಮನೆಳು ನೆಲಸಮವಾಗಿವೆ. 20 ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ ಗಾಳಿಯ ರಬಸಕ್ಕೆ ಕಿತ್ತು ಹೋಗಿವೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಎಲ್ಲಿಯೂ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಜಿಲ್ಲೆಯ ಹಾನಗಲ್ಲನಲ್ಲಿ ಶುಕ್ರವಾರ ಮಧ್ಯ ರಾತ್ರಿ ಬಿದ್ದ ಮಳೆಗೆ ಅಲ್ಪ ಹಾನಿಯಾಗಿದ್ದು, ತಾಲ್ಲೂಕಿನ ಬ್ಯಾಗವಾದಿ ಗ್ರಾಮದ ಶಾಂತಪ್ಪ ವೀರಬಸಪ್ಪ ಕೊಪ್ಪದ ಎಂಬುವವರ ಟ್ರ್ಯಾಕ್ಟರ್ ಟ್ರೇಲರ್‌ಗೆ, ಸೋಯಾಬೀನ ಬೀಜಗಳನ್ನು ಸಂಗ್ರಹಿಸಿಟ್ಟಿದ್ದ ಚೀಲಕ್ಕೆ, ಸಿಂಟೆಕ್ಸ ನೀರಿನ ಟ್ಯಾಂಕಿಗೆ ಹಾಗೂ ಕೃಷಿ ಪರಿಕರಗಳಿಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.

ಮಳೆಯಿಂದಾಗಿ ಅಲ್ಲಲ್ಲಿ ಮರಗಳು ನೆಲಕ್ಕುರುಳಿವೆ. ಇದರಿಂದ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹಾವೇರಿ ನಗರದಲ್ಲಿ ರಾತ್ರಿಯಿಂದ ಬೆಳಗಿನ 8 ಗಂಟೆವರೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ 12ರಿಂದ  ಸುಮಾರು ಮೂರ್ನಾಲ್ಕು ಗಂಟೆ ಸುರಿದಿದೆ.

ಮಳೆಯಿಂದಾಗಿ ಹಾವೇರಿ ನಗರದ ಗೂಗಿಕಟ್ಟೆ ಪ್ರದೇಶ ಸಂಪೂರ್ಣ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿತ್ತು. ಮಳೆಯಿಂದಾಗಿ ಚರಂಡಿಯಲಿನ್ಲ ಕೊಳಚೆಯೆಲ್ಲ ರಸ್ತೆ ಮೇಲೆ ಹರಿದಾಡುತ್ತಿದೆ. ನಗರಸಭೆ ನಿರ್ಲಕ್ಷ್ಯಕ್ಕೆ ಮಳೆ ಬಂದ ಸಂದರ್ಭದಲ್ಲಿ ಈ ರೀತಿ ಕೊಳಚೆ ಪ್ರದೇಶ ನಿರ್ಮಾಣವಾಗುತ್ತಿದೆ. ಇದಕ್ಕೆ ಎಂದು ಕೊನೆ ಎಂದು ಸಾರ್ವಜನಿಕರು ಬೇಸರದಿಂದಲೇ ಹೇಳುತ್ತಿದ್ದರು.

ಇನ್ನೂ ನಗರದ ಬಹುತೇಕ ಪ್ರದೇಶಗಳಲ್ಲಿ ಯುಜಿಡಿ ಕಾಮಗಾರಿಗಳು ನಡೆಯುತ್ತಿದ್ದು, ಮಳೆಯಿಂದಾಗಿ ಆ ಪ್ರದೇಶದ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಾಡಾಗಿದ್ದವು. ಈ ರಸ್ತೆಗಳಲ್ಲಿ ಸಂಚರಿಸಲು ಜನ ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ನಗರದ ಗ್ಯಾರೇಜ್‌ವೊಂದಕ್ಕೆ ನೀರು ನುಗ್ಗಿ ಗ್ಯಾರೇಜ್‌ನಲ್ಲಿನ ವಾಹನಗಳು ಹಾಗೂ ಸಾಮಗ್ರಿಗಳು ನೀರಿನಲ್ಲಿಯೇ ನಿಂತಿದ್ದವು. ಜಿಲ್ಲೆಯಾದ್ಯಂತ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯುಂಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry