ಮಂಗಳವಾರ, ಮೇ 17, 2022
25 °C

20ಕ್ಕೆ ಸಚಿವರ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ  (ಪಿಟಿಐ): ತರಂಗಾಂತರ ಹರಾಜಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು  20ರಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನೇತೃತ್ವದಲ್ಲಿ ದೂರಸಂಪರ್ಕ ಸಂಬಂಧದ ಪ್ರಮುಖ ಸಚಿವರುಗಳ ತಂಡದ ಸಭೆ ನಡೆಯಲಿದೆ. `ಮುಖರ್ಜಿ ಅವರು ರಾಷ್ಟ್ರಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಲುವಾಗಿ ರಾಜೀನಾಮೆ ನೀಡುವ ಮುನ್ನ ತರಂಗಾಂತರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದ್ದರಿಂದ ಇದು ಅತ್ಯಂತ ಪ್ರಮುಖ ಸಭೆಯಾಗಲಿದೆ~ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಹರಾಜು ಆರಂಭಿಸಬೇಕಾದ ಕನಿಷ್ಠ ದರವನ್ನು ಈ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.ಆಗಸ್ಟ್ 31ರೊಳಗೆ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಸಮಸ್ಯೆಗಳನ್ನೂ ಈ ತಿಂಗಳಿನಲ್ಲಿಯೇ ಪರಿಹರಿಸಬೇಕಾಗಿದೆ ಎಂದೂ ಮೂಲಗಳು ತಿಳಿಸಿವೆ.

ಇದೇ ವೇಳೆ ದೂರಸಂಪರ್ಕ ಸೇವಾ ಸಂಸ್ಥೆಗಳೊಂದಿಗೆ ನಡೆಸಿದ ಸಮಾಲೋಚನೆಯ ಬಳಿಕ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಮೆಗಾಹರ್ಟ್ಸ್ ಒಂದಕ್ಕೆ 3,622 ರೂ  ಹರಾಜು ದರ ನಿಗದಿ ಮಾಡಿದ್ದೆಯಲ್ಲದೆ ಪಾನ್ ಇಂಡಿಯಾ ಕಾರ್ಯಾಚರಣೆಗೆ ಹದಿನೆಂಟು ಸಾವಿರ ಕೋಟಿ ರೂ ದರವನ್ನೂ ನಿಗದಿಪಡಿಸಿತ್ತು. ಇದು 2008ರಲ್ಲಿ ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದಾಗ ನೀಡಿದ್ದ ಮೊತ್ತಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ.ಇಷ್ಟೇ ಅಲ್ಲದೆ ಜೂನ್ 5ರಂದು ನಡೆದ ಸಭೆಯಲ್ಲಿ ಪ್ರತೀ ಹಂತದಲ್ಲಿ 1.25 ಮೆಗಾಹರ್ಟ್ಸ್ ತಂರಂಗಾಂತರಗಳಂತೆ 10 ಮೆಗಾಹರ್ಟ್ಸ್ ತರಂಗಾಂತರಗಳನ್ನು 8 ಹಂತಗಳಲ್ಲಿ ಹರಾಜು ಮಾಡಲು ನಿರ್ಧರಿಸಲಾಗಿತ್ತು.

ಈ ತರಂಗಾಂತರಗಳು ಸಿಗ್ನಲ್‌ಗಳನ್ನು ವರ್ಗಾಯಿಸಲು ಪ್ರಮುಖವಾದ್ದರಿಂದ ತರಂಗಾಂತರಗಳಲ್ಲಿನ ದರ ಹೆಚ್ಚಳದಿಂದ ದೂರಸಂಪರ್ಕ ಸೇವೆಗಳ ದರದಲ್ಲಿಯೂ ಹೆಚ್ಚಳ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.ಹೊಸ ಸಮಿತಿ: ಭಾರತ ಇತರ ರಾಷ್ಟ್ರಗಳೊಂದಿಗೆ ನಡೆಸಿದ ದ್ವಿಪಕ್ಷೀಯ ಒಪ್ಪಂದದಡಿಯಲ್ಲಿ ನಡೆಸಲಾದ ವಿದೇಶಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ವಿಸ್ತರಿತ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ಸರ್ಕಾರ ರಚಿಸಲಿದೆ. ಈ ಕುರಿತು ಹಣಕಾಸು ಸಚಿವಾಲಯ ದೂರಸಂಪರ್ಕ ಸಚಿವಾಲಯಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.ದೂರಸಂಪರ್ಕ ಕಾಯ್ದೆಗೆ ತಿದ್ದುಪಡಿಗೆ ಚಿಂತನೆ: ತಮ್ಮ ದೂರುಗಳಿಗೆ ಸಂಬಂಧಿಸಿ ಗ್ರಾಹಕರಿಗೆ, ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಲು ಸುಲಭ ಸಾಧ್ಯವಾಗುವಂತೆ ಪ್ರಸ್ತುತ ಹಣಕಾಸು ವರ್ಷದಲ್ಲಿ  ಜಾರಿಯಲ್ಲಿರುವ ಭಾರತೀಯ ದೂರಸಂಪರ್ಕ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ.`ಇದು 2012ರ ರಾಷ್ಟ್ರೀಯ ದೂರಸಂಪರ್ಕ ನೀತಿಯ ಪ್ರಮುಖ ಧ್ಯೇಯೋದ್ದೇಶವಾಗಿದ್ದು ಈ ವರ್ಷದ ಕೊನೆಯೊಳಗಾಗಿ ತಿದ್ದುಪಡಿ ತರಲಾಗುವುದು. ಒಂದು ವೇಳೆ ತಿದ್ದುಪಡಿ ಸಾಧ್ಯವಾಗದಿದ್ದಲ್ಲಿ ಮುಂದಿನ ಮಾರ್ಚ್ 13ರೊಳಗೆ ತಿದ್ದುಪಡಿ ಮಾಡಲಾಗುವುದು. ಆದರೆ ತಿದ್ದುಪಡಿಗೆ ಸಚಿವ ಸಂಪುಟ ಅನುಮತಿ ನೀಡಬೇಕಾಗಿದೆ~ ಎಂದು ದೂರಸಂಪರ್ಕ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದರು.ನೆಟ್‌ವರ್ಕ್ ಸೇರಿದಂತೆ ದೂರಸಂಪರ್ಕ ಕಂಪೆನಿಗಳ ಸೇವೆಗೆ ಸಂಬಂಧಿಸಿ  ನಲವತ್ತು ಸಾವಿರಕ್ಕೂ ಹೆಚ್ಚು ದೂರುಗಳು ಇಲಾಖೆಗೆ 2011ರ ಏಪ್ರಿಲ್‌ನಿಂದ ಅಕ್ಟೋಬರ್ 31ರ ಅವಧಿಯಲ್ಲಿ ದೊರೆತಿವೆ ಎಂದು ಅಧಿಕಾರಿ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.