20ರಂದು ಬಿಬಿಎಂಪಿ ಬಜೆಟ್

ಬುಧವಾರ, ಜೂಲೈ 17, 2019
30 °C
ಸರ್ಕಾರದಿಂದ ಒಪ್ಪಿಗೆ: ಕೌನ್ಸಿಲ್ ಸಭೆ ಕರೆದ ಮೇಯರ್

20ರಂದು ಬಿಬಿಎಂಪಿ ಬಜೆಟ್

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 2013-14ನೇ ಸಾಲಿನ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಮಂಗಳವಾರ ಅನುಮತಿ ನೀಡಿದೆ. ಮೇಯರ್ ಡಿ.ವೆಂಕಟೇಶಮೂರ್ತಿ ಇದೇ 20ರಂದು ಬಜೆಟ್ ಮಂಡನೆ ಮಾಡಲಿದ್ದಾರೆ.ರಾಜ್ಯ ಸರ್ಕಾರದಿಂದ ಅನುಮತಿ ಪತ್ರ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಮೇಯರ್, ಕೌನ್ಸಿಲ್ ಕಾರ್ಯದರ್ಶಿಗಳಿಗೆ ಪತ್ರ ಬರೆದು ಇದೇ 20ರಂದು ಬೆಳಿಗ್ಗೆ 11ಕ್ಕೆ ಸಭೆ ಕರೆಯುವಂತೆ ಸೂಚನೆ ನೀಡಿದ್ದಾರೆ.ಹೊಸ ಮೇಯರ್ ಆಯ್ಕೆಯಾಗದ ಕಾರಣ ನೂತನ ಸ್ಥಾಯಿ ಸಮಿತಿಗಳು ಸಹ ರಚನೆಯಾಗಿಲ್ಲ. ಹೊಸ ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಗತಿಸಿದರೂ ಇನ್ನೂ ಬಜೆಟ್ ಮಂಡನೆಯಾಗಿಲ್ಲ.ಬಿಬಿಎಂಪಿ ಸಭೆಯಲ್ಲಿ ಅನುಮೋದನೆ ಆಗಿರುವಂತೆ ಲೇಖಾನುದಾನದಲ್ಲಿ ಶೇ 30ರಷ್ಟು ತುರ್ತು ವೆಚ್ಚಗಳನ್ನು ಮಾತ್ರ ಮಾಡಲಾಗುತ್ತಿದೆ. ಯಾವುದೇ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಜೆಟ್ ಮಂಡನೆಗೆ ಅವಕಾಶ ನೀಡಬೇಕು ಎಂದು ಬಿಬಿಎಂಪಿ ಆಯಕ್ತರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಅಧಿನಿಯಮ-1976ರ ಕಲಂ 166-170ರಲ್ಲಿ ತಿಳಿಸಲಾದಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಬಜೆಟ್ ಸಿದ್ಧಪಡಿಸಿ, ಕೌನ್ಸಿಲ್‌ನಲ್ಲಿ ಮಂಡಿಸುವ ಮೂಲಕ ಅನುಮೋದನೆ ಪಡೆಯಬೇಕು. ಆರ್ಥಿಕ ವರ್ಷ ಆರಂಭವಾಗಲು ಮೂರು ವಾರ ಮುನ್ನವೇ ಸರ್ಕಾರದ ಅನುಮತಿಗೆ ಅಂಗೀಕೃತ ಬಜೆಟ್ ಪ್ರತಿಯನ್ನು ಕಳುಹಿಸಿಕೊಡಬೇಕು.ಮೇಯರ್ ಮೀಸಲಾತಿ ವಿವಾದ ಹೈಕೋರ್ಟ್‌ನಲ್ಲಿ ಇರುವುದರಿಂದ ಮೇಯರ್ ಆಯ್ಕೆ ಪ್ರಕ್ರಿಯೆ ಇದುವರೆಗೆ ನಡೆದಿಲ್ಲ. ಹೀಗಾಗಿ ಹೊಸ ಸ್ಥಾಯಿ ಸಮಿತಿಗಳು ಸಹ ರಚನೆಯಾಗಿಲ್ಲ. ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಅಧಿನಿಯಮ -1976ರ ಕಲಂ 10 (2)ರ ಪ್ರಕಾರ, ಹೊಸ ಮೇಯರ್ ಆಯ್ಕೆ ಆಗುವವರೆಗೆ ಹಿಂದಿನ ಮೇಯರ್ ಅಧಿಕಾರಿದಲ್ಲಿ ಮುಂದುವರಿಯಲಿದ್ದಾರೆ. ಕೌನ್ಸಿಲ್ ಸಭೆ ಕರೆಯಲು ಅವರಿಗೆ ಅವಕಾಶ ಇಲ್ಲ ಎಂಬುದನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಾಗಿ ಹಾಲಿ ಮೇಯರ್ ಅವರಿಗೆ ಬಜೆಟ್ ಮಂಡಿಸಲು ಅವಕಾಶ ನೀಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.ಮಳೆಗಾಲ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಿ ಅಧಿಕ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾದರೆ ತುರ್ತು ಕಾಮಗಾರಿ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ದೈನಂದಿನ ಸೇವೆಗಳನ್ನು ಒದಗಿಸಲು ಸಹ ಕಷ್ಟವಾಗುತ್ತದೆ.ಹೀಗಾಗಿ ಇದೊಂದು ವಿಶೇಷ ಸಂದಿಗ್ದ ಪರಿಸ್ಥಿತಿ ಎಂದು ಪರಿಗಣಿಸಿ, ಯಾವುದೇ ಊಹಾತ್ಮಕ ಆದಾಯ/ಸಂಪನ್ಮೂಲ ಗಮನದಲ್ಲಿ ಇಟ್ಟುಕೊಳ್ಳದೆ ಹಿಂದಿನ ಸಾಲಿನ ಆದಾಯ, ಸಂಪನ್ಮೂಲಗಳ ಆಧಾರದ ಮೇಲೆ ವಾಸ್ತವಾಂಶ ಹೊಂದಿದ ಬಜೆಟ್ ಮಂಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.ಮೇಯರ್ ಕೌನ್ಸಿಲ್ ಸಭೆ ಕರೆದು ಬಜೆಟ್ ಮಂಡಿಸಿ, ಅನುಮೋದನೆ ಪಡೆಯಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry