20 ಬಾಲಕಾರ್ಮಿಕರಿಗೆ ಮುಕ್ತಿ

7

20 ಬಾಲಕಾರ್ಮಿಕರಿಗೆ ಮುಕ್ತಿ

Published:
Updated:

ಕೊಪ್ಪಳ: ಜಿಲ್ಲಾ ಮಕ್ಕಳ ರಕ್ಷಣಾ ಯೋಜನಾ ತಂಡವು ಬಾಲ ಕಾರ್ಮಿಕ ಕೋಶ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ನೆರವಿನಿಂದ ನಗರದ ವಿವಿಧೆಡೆ ಶನಿವಾರ ಹಠಾತ್ ದಾಳಿ ನಡೆಸಿ, 20 ಬಾಲಕಾರ್ಮಿಕ ಮಕ್ಕಳನ್ನು ದುಡಿತದಿಂದ ವಿಮುಕ್ತಿಗೊಳಿಸಲಾಗಿದೆ.ತಂಡವು ನಗರದ ಬಸ್‌ನಿಲ್ದಾಣ, ಗಡಿಯಾರ ಕಂಬದ ಹತ್ತಿರ, ಗವಿಶ್ರೀ ನಗರ, ಹಸನ್ ರಸ್ತೆ, ಬನ್ನಿಕಟ್ಟೆ ರಸ್ತೆ, ರೈಲ್ವೆ ನಿಲ್ದಾಣ ಮೊದಲಾದ ಕಡೆ ದಾಳಿ ನಡೆಸಿ, 14 ವರ್ಷದೊಳಗಿನ ಒಟ್ಟು 20 ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿದೆ.20 ಮಕ್ಕಳ ಪೈಕಿ 5 ಮಕ್ಕಳು ಭಾಗ್ಯನಗರದವರಾಗಿದ್ದು, ಭಿಕ್ಷಾಟನೆ ನಡೆಸುತ್ತಿದ್ದರು. ಆಟೋ ಕ್ಲೀನರ್, ಚಹಾ ಅಂಗಡಿ, ಗ್ಯಾರೇಜ್, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಮಕ್ಕಳನ್ನು ಪತ್ತೆ ಹಚ್ಚಿ, ಅವರನ್ನು ದುಡಿತದಿಂದ ಬಿಡುಗಡೆಗೊಳಿಸಲಾಗಿದೆ.ಮಕ್ಕಳು ಬಿಸರಳ್ಳಿ, ಬಹದ್ದೂರಬಂಡಿ, ಹಿರೇಸಿಂದೋಗಿ, ಹೂವಿನಾಳ, ವಿಜಯನಗರ, ಗಾಂಧಿನಗರ ಪ್ರದೇಶದವರಾಗಿದ್ದಾರೆ. ಕೆಲಸದಿಂದ ಬಿಡುಗಡೆಗೊಳಿಸಿದ ಎಲ್ಲಾ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಯಿತು, ಮಕ್ಕಳ ಪಾಲಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಕ್ಕಳನ್ನು ದುಡಿತಕ್ಕೆ ಕಳುಹಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರವನ್ನು ಪಡೆಯಲಾಗಿದೆ.ಅಲ್ಲದೇ, ಎಲ್ಲ ಮಕ್ಕಳನ್ನು ಆಯಾ ಪ್ರದೇಶದ ಸರ್ಕಾರಿ ಶಾಲೆಗೆ ದಾಖಲಿಸಲು ಕ್ರಮ ಜರುಗಿಸಲಾಗಿದೆ.  ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಸಂಯೋಜಕ ಹರೀಶ್ ದಾಳಿಯ ನೇತೃತ್ವ ವಹಿಸಿದ್ದರೆ, ಸಹ ಸಂಯೋಜಕರಾದ ಶಿವರಾಮ್ ನಾಯಕ್, ಹುಸೇನ್ ಪೀರ್, ಮಹೇಶ್, ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಜಿಲ್ಲಾ ಬಾಲಕಾರ್ಮಿಕ ಕೋಶದ ಕ್ಷೇತ್ರಾಧಿಕಾರಿ ವೀರಣ್ಣ ಕುಂಬಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಯುನಿಸೆಫ್ ಕಚೇರಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry