20 ವರ್ಷದಿಂದ ಟೊಪ್ಪಿ ಮಾರುವುದೇ ಕೆಲಸ!

7

20 ವರ್ಷದಿಂದ ಟೊಪ್ಪಿ ಮಾರುವುದೇ ಕೆಲಸ!

Published:
Updated:

ಮಂಗಳೂರು: ಇಲ್ಲೊಬ್ಬ ಕಾರ್ಯಕರ್ತನಿಗೆ ಕಾಂಗ್ರೆಸ್‌ನ್ನು ಹೊಗಳಿ ಅಟ್ಟಕ್ಕೇರಿಸುವುದು ಮಾತ್ರ ಕೆಲಸವಲ್ಲ. ಈತ ಜೈಕಾರಗಳನ್ನೂ ಹಾಕುವುದಿಲ್ಲ. ಯಾವುದೇ ಪಕ್ಷದ ಸಮಾವೇಶಗಳೆಂದರೆ ಬಿಸಿಲು, ದೂಳಿನ ಸಂತೆ. ಜನಸಂತೆ ಇಲ್ಲಿ ದಣಿದು ಬಸವಳಿಯುವುದೂ ಸಹಜ. ಈ ಸುಸ್ತಾಗುವ ಜೀವಗಳಿಗೆ ಕೊಂಚವಾದರೂ ನೆರಳು ನೀಡುವ ವಿಶಿಷ್ಟ ವ್ಯಕ್ತಿ ಇವ.ಈತ ಅಶ್ರಫ್ ಮಹಮ್ಮದ್. ಕೇರಳದ ಕಲ್ಲಿಕೋಟೆಯ ಈಗ ಮಂಗಳೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಬಂದಿದ್ದ. ಕಳೆದ 20 ವರ್ಷಗಳಿಂದ ಈತ ಕಾಂಗ್ರೆಸ್‌ನ ಕಾರ್ಯಕರ್ತನೂ ಹೌದು. ಕೈಯಲ್ಲಿ ದೊಡ್ಡ ಬುಟ್ಟಿ, ಅದರ ತುಂಬಾ ಟೊಪ್ಪಿ. ಈ ಟೊಪ್ಪಿಗಳೆಲ್ಲಾ ಕಾಂಗ್ರೆಸ್‌ನ ಸಮಾವೇಶ ನೋಡಲೆಂದು ಬಂದವರಿಗೆ ಮಾರಿದ. ಬುಟ್ಟಿಯಲ್ಲಿದ್ದ 200 ಟೊಪ್ಪಿಗಳನ್ನು ಕೇವಲ ಗಂಟೆಯೊಂದರಲ್ಲೇ ನೆರೆದಿದ್ದವರಿಗೆ ನೀಡಿ ತಂಪನ್ನೆರೆದ.ಆದರೆ ಹಣ ಮಾಡುವುದು ಇವರ ಉದ್ದೇಶ ಅಲ್ಲವೇ ಅಲ್ಲ. 10 ರೂಪಾಯಿಗೆ ಟೊಪ್ಪಿ ಮಾರಿದರೆ ಯಾವ ಲಾಭವೂ ಇಲ್ಲ. ಸ್ವತಃ ದರ್ಜಿಯಾಗಿರುವ ಈತ ನಾಲ್ಕು ದಿನಗಳ ಹಿಂದೆಯಷ್ಟೇ ಟೊಪ್ಪಿ ಹೊಲಿದಿದ್ದಾರೆ. ಕೇರಳದ ಈ ಅಶ್ರಫ್‌ಗೆ ಬಟ್ಟೆ ಹೊಲಿಯುವುದೇ ಕೆಲಸ. ಕಾಂಗ್ರೆಸ್‌ನ ಸಮಾವೇಶ ಎಲ್ಲೇ ಆಗಲಿ. ಅಲ್ಲಿ ಹೋಗಿ ಟೊಪ್ಪಿಗಳನ್ನು ಮಾರುತ್ತಾರಂತೆ. ಕಳೆದ 20 ವರ್ಷಗಳಲ್ಲಿ ಸಾವಿರಾರು ಟೊಪ್ಪಿಗಳನ್ನು ಸಮಾವೇಶಗಳಲ್ಲೇ ಮಾರಿದ್ದಾರೆ.`ಹೊಲಿದ ಟೊಪ್ಪಿಗಳನ್ನು ನಾನು ಅಂಗಡಿಯಲ್ಲಿ ಮಾರುವುದೇ ಇಲ್ಲ. ಏನಿದ್ದರೂ ಸಮಾವೇಶದಲ್ಲೇ ಮಾರುವುದು. ಜೀವನಕ್ಕಾಗಿ ದರ್ಜಿ ವೃತ್ತಿಯನ್ನೇ ನಂಬಿದ್ದೇನೆ. ಕೈತುಂಬಾ ಕೆಲಸವೂ ಇದೆ. ಆದರೆ ಕಾಂಗ್ರೆಸ್ ಸಮಾವೇಶಕ್ಕೆ ಹೋಗಿ ಟೊಪ್ಪಿ ಮಾರುವುದನ್ನು ಮಾತ್ರ ಬಿಡುವುದಿಲ್ಲ~ ಎಂದು ಮುಗುಳ್ನಗುತ್ತಾರೆ ಅಶ್ರಫ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry