ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಕೋಟಿ ವ್ಯಾಪಾರಿಗಳಿಗೆ ಸಂಕಷ್ಟ

Last Updated 14 ಜನವರಿ 2012, 18:50 IST
ಅಕ್ಷರ ಗಾತ್ರ

ಬೆಂಗಳೂರು: `ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವುದರಿಂದ ದೇಶದ 20 ಕೋಟಿ ಚಿಲ್ಲರೆ ವ್ಯಾಪಾರಿಗಳು ಬೀದಿಗೆ ಬರಬೇಕಾಗುತ್ತದೆ~ ಎಂದು ರೈತ ಮುಖಂಡ ಪ್ರೊ.ಸಿ.ನರಸಿಂಹಪ್ಪ ಶನಿವಾರ ಇಲ್ಲಿ ಹೇಳಿದರು.

ವಿದ್ಯಮಾನ ವೇದಿಕೆಯು ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ `ಚಿಲ್ಲರೆ ವ್ಯಾಪಾರ ಮತ್ತು ಮಾಲ್ ವಹಿವಾಟು~ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ದೇಶದಲ್ಲಿ 1.40 ಕೋಟಿ ಚಿಲ್ಲರೆ ಅಂಗಡಿಗಳಿವೆ ಎಂಬುದರ ಬಗ್ಗೆ ಕಿಂಚಿತ್ತೂ ಆಲೋಚಿಸದ ಕೇಂದ್ರ ಸರ್ಕಾರ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ. ಅಲ್ಲದೆ, ಇದರಿಂದ ಒಂದು ಕೋಟಿ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳುತ್ತಿದೆ. ಇದೊಂದು ಹುಚ್ಚು ಆಲೋಚನೆ. ಈಗಾಗಲೇ ದೇಶದಲ್ಲಿ 225 ಮಾಲ್‌ಗಳಿದ್ದು, ಚಿಲ್ಲರೆ ವ್ಯಾಪಾರಿಗಳು ಬೇರೆ ಉದ್ಯೋಗದ ದಾರಿ ಹಿಡಿದಿದ್ದಾರೆ~ ಎಂದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಘದ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಎನ್.ಎಸ್. ಶ್ರೀನಿವಾಸಮೂರ್ತಿ ಮಾತನಾಡಿ, `ದೇಶವವನ್ನು ಪರೋಕ್ಷವಾಗಿ ಅನ್ಯರು ಆಳುವ ತಂತ್ರವಿದು. ನಮ್ಮ ದೇಶದ ಮಾರುಕಟ್ಟೆ ಹಾಗೂ ಉತ್ಪಾದನಾ ವ್ಯವಸ್ಥೆ ಉತ್ತಮವಾಗಿದ್ದು, ಇದರ ಲಾಭ ಪಡೆಯಲು ವಿದೇಶಿ ಹೂಡಿಕೆದಾರರು ಮುಂದಾಗಿದ್ದಾರೆ.

ಚಿಲ್ಲರೆ ವಸ್ತುಗಳ ಮಾರಾಟದಿಂದ ಅಧಿಕ ಲಾಭ ಸಿಗುತ್ತದೆ ಎಂಬ ಕಾರಣಕ್ಕೆ ಜನರ ಚೌಕಾಸಿ ಮನೋಭಾವವನ್ನು ಕೊಲ್ಲುವ ಪ್ರಯತ್ನ ನಡೆಯುತ್ತಿದೆ. ಶೇ  40ರಷ್ಟು ಲಾಭವಿಲ್ಲದೆ ಯಾವುದೇ ವಸ್ತುವನ್ನು ಮಾಲ್‌ಗಳಲ್ಲಿ ಮಾರಾಟ ಮಾಡುವುದಿಲ್ಲ. ಇದು ಗ್ರಾಹಕರಿಗಾಗಲಿ, ಸರ್ಕಾರಕ್ಕಾಗಲಿ ತಿಳಿಯುತ್ತಿಲ್ಲ~ ಎಂದರು. 

`ವಿದೇಶಿ ಬಂಡವಾಳ ಹೂಡಿಕೆಯಿಂದ ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಈಗಾಗಲೇ ಆಹಾರ ವಸ್ತುಗಳು ಬೆಳೆಗಾರರಿಂದ ಬಳಕೆದಾರರಿಗೆ ತಲುಪುವ ಪ್ರಕ್ರಿಯೆಯಲ್ಲಿ ಶೇ 30 ರಷ್ಟು ಪೋಲಾಗುತ್ತಿದ್ದು, ಸರ್ಕಾರದ ಈ ಕ್ರಮದಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ~ ಎಂದು ಆತಂಕ ವ್ಯಕ್ತಪಡಿಸಿದರು. ವೇದಿಕೆಯ ಅಧ್ಯಕ್ಷ ಪಿ.ಜಿ.ಆರ್. ಸಿಂದ್ಯ, ಪ್ರಧಾನ ಕಾರ್ಯದರ್ಶಿ ಅಂಜನ್, ಸಂಚಾಲಕ ರಾಜಾ ಶೈಲೇಶಚಂದ್ರ ಗುಪ್ತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT