ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಲಕ್ಷ ರೈತರಿಗೆ ರೂ6,700 ಕೋಟಿ ಸಾಲ ಗುರಿ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳ ಮೂಲಕ ರಾಜ್ಯದ 20 ಲಕ್ಷ ರೈತರಿಗೆ ಒಟ್ಟು ರೂ6,700 ಕೋಟಿ ಸಾಲ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ಬ್ಯಾಂಕಿನ ವಾರ್ಷಿಕ ಸಾಧನೆಗಳು, ಕಾರ್ಯಚಟುವಟಿಕೆಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, `ಇದುವರೆಗೆ 16.46 ಲಕ್ಷ ರೈತರಿಗೆ ರೂ 5874 ಕೋಟಿ ಸಾಲ ನೀಡಲಾಗಿದೆ.

ಮಾರ್ಚ್ 31ರೊಳಗೆ ಗುರಿ ಮೀರುವ ವಿಶ್ವಾಸವಿದೆ~ ಎಂದರು.ಎರಡು ವರ್ಷಗಳ ಹಿಂದೆ 8 ಲಕ್ಷ ರೈತರಿಗೆ ಕೃಷಿ ಸಾಲ ನೀಡಲಾಗುತ್ತಿತ್ತು. 2010ರಿಂದ ಹೊಸದಾಗಿ 9 ಲಕ್ಷ ರೈತರಿಗೆ ಸಾಲ ನೀಡಲಾಗಿದೆ. ಮುಂದಿನ ಆರು ತಿಂಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹೊಸ ರೈತರಿಗೆ ಕೃಷಿ ಸಾಲ ನೀಡಲಾಗುವುದು~ ಎಂದು ಅವರು ಹೇಳಿದರು.

`ರಾಜ್ಯ ಸರ್ಕಾರದ ತೀರ್ಮಾನದಂತೆ ಬೆಳೆ ಸಾಲ ಮನ್ನಾ ಮಾಡಿದ್ದು, ಅದರಿಂದ 16 ಲಕ್ಷ ರೈತರಿಗೆ ಅನುಕೂಲವಾಗಿದೆ. ಮನ್ನಾ ಆದ ಅಸಲು ರೂ3,480 ಕೋಟಿ ಮತ್ತು ಬಡ್ಡಿ ರೂ 500 ಕೋಟಿ. ಇಷ್ಟೂ ಹಣವನ್ನು ರಾಜ್ಯ ಸರ್ಕಾರ ಬ್ಯಾಂಕಿಗೆ ತುಂಬಿಕೊಡುತ್ತದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
`ಇದುವರೆಗೆ 1.95 ಲಕ್ಷ ಸ್ವಸಹಾಯ ಗುಂಪುಗಳನ್ನು ರಚಿಸಿ, ರೂ2,074 ಕೋಟಿ ಸಾಲ ವಿತರಿಸಲಾಗಿದೆ.

ಮಾರ್ಚ್ ಅಂತ್ಯದೊಳಗೆ ಸ್ವಸಹಾಯ ಗುಂಪುಗಳ ಸಂಖ್ಯೆಯನ್ನು 2.11 ಲಕ್ಷಕ್ಕೆ ಏರಿಸಿ, ರೂ 2,690 ಕೋಟಿ ಸಾಲ ನೀಡಲಾಗುವುದು. 2015ರಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ ವರ್ಷಾಚರಣೆ ವೇಳೆಗೆ 4.75 ಲಕ್ಷ ಗುಂಪುಗಳನ್ನು ರಚಿಸಿ, ಅವುಗಳಿಗೆ ರೂ4,690 ಕೋಟಿ ಸಾಲ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ~ ಎಂದು ಅವರು ತಿಳಿಸಿದರು.

`ಜಂಟಿ ಬಾಧ್ಯತಾ ಕಾರ್ಯಕ್ರಮದಡಿ ಮಾರ್ಚ್ ತಿಂಗಳವರೆಗೆ ಒಟ್ಟು 25 ಸಾವಿರ ಕುಶಲಕರ್ಮಿಗಳ ಸ್ವಸಹಾಯ ಗುಂಪುಗಳನ್ನು ರಚಿಸಿ, ರೂ175 ಕೋಟಿ ಸಾಲ ನೀಡಲು ಉದ್ದೇಶಿಸಲಾಗಿದೆ. 2012- 13ರ ಸಾಲಿನಲ್ಲಿ ಬ್ಯಾಂಕಿನ ಶಾಖೆಗಳ ಮೂಲಕ ರೂ 685 ಕೋಟಿ ಕೃಷಿಯೇತರ ಸಾಲ ನೀಡಲಾಗುವುದು~ ಎಂದು ಅವರು ಹೇಳಿದರು.

ರೂ16 ಕೋಟಿ ಹೆಚ್ಚು ಲಾಭ: `ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಬ್ಯಾಂಕು ರೂ61.41 ಕೋಟಿ ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ ಗಳಿಸಿದ್ದ ಲಾಭ ರೂ45.59 ಕೋಟಿ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ100 ಕೋಟಿ ಲಾಭ ಗಳಿಸುವ ಗುರಿ ಇದೆ~ ಎಂದು ಅವರು ತಿಳಿಸಿದರು.

`ಕೃಷಿ ಮತ್ತು ಕೃಷಿಯೇತರ ಸಾಲದ ವಸೂಲಾತಿ ಪ್ರಮಾಣ ಶೇಕಡಾ 98ರಷ್ಟಿದೆ. ಸ್ವಸಹಾಯ ಗುಂಪುಗಳ ಸಾಲ ವಸೂಲಾತಿ ಪ್ರಮಾಣ ಶೇ 95ರಷ್ಟಿದೆ. ಬ್ಯಾಂಕಿನ ಕಾರ್ಯನಿರ್ವಹಿಸದ ಆಸ್ತಿಯ (ಎನ್‌ಪಿಎ) ಪ್ರಮಾಣ ಶೇ 3ಕ್ಕಿಂತ ಕಡಿಮೆ ಇದೆ~ ಎಂದು ಅವರು ವಿವರಿಸಿದರು. ಬ್ಯಾಂಕಿನ ನಿರ್ದೇಶಕ ಸಿದ್ದರಾಜು, ವ್ಯವಸ್ಥಾಪಕ ನಿರ್ದೇಶಕ ಕೆ.ಎಚ್.ಅಶ್ವತ್ಥನಾರಾಯಣಗೌಡ ಮೊದಲಾದವರು ಉಪಸ್ಥಿತರಿದ್ದರು.

ವರ್ಷಾಂತ್ಯಕ್ಕೆ ಕೋರ್ ಬ್ಯಾಂಕಿಂಗ್
ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಎಲ್ಲ 40 ಶಾಖೆಗಳಲ್ಲಿ ಡಿಸೆಂಬರ್ ಅಂತ್ಯದೊಳಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಾಗಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.
`ಚೆಕ್‌ನ ಚಿತ್ರವನ್ನು ಆನ್‌ಲೈನ್‌ನಲ್ಲಿ ಕಳುಹಿಸುವ ಮೂಲಕ ಚೆಕ್ ನಗದೀಕರಣ ವ್ಯವಸ್ಥೆಯನ್ನು (ಸಿಟಿಎಸ್) ಈಗಾಗಲೇ ಜಾರಿಗೊಳಿಸಲಾಗಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಸಿದ್ಧತೆಗಳು ನಡೆದಿವೆ.

ಮಾರ್ಚ್ 31ರೊಳಗೆ ಎಲ್ಲ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು ಕೋರ್ ಬ್ಯಾಂಕಿಂಗ್ ಸೇವೆ ಆರಂಭಿಸಲಿವೆ~ ಎಂದು ಅವರು ಹೇಳಿದರು.`ಪ್ರಧಾನ ಕಚೇರಿ, ವಿಧಾನಸೌಧ, ಶಾಸಕರ ಭವನ, ಬಹುಮಹಡಿ ಕಟ್ಟಡ ಶಾಖೆ, ಬಸವೇಶ್ವನಗರ ಶಾಖೆಗಳಲ್ಲಿ ಸದ್ಯದಲ್ಲೇ ಎಟಿಎಂಗಳನ್ನು ತೆರೆಯಲಾಗುವುದು~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT