ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಸಾವಿರ ಲಂಚ ಪಡೆದ ಬಿಡಿಎ ಸಿಬ್ಬಂದಿ ಬಂಧನ

Last Updated 21 ಡಿಸೆಂಬರ್ 2012, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪರಿಹಾರ ಧನ ಮಂಜೂರು ಮಾಡುವುದಕ್ಕೆ ಸಂಬಂಧಿಸಿದ ಕಡತವನ್ನು ಉಪ ಆಯುಕ್ತರಿಗೆ ಮಂಡಿಸಲು 20,000 ರೂಪಾಯಿ ಲಂಚ ಪಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿಷಯ ನಿರ್ವಾಹಕ ರಂಗಸ್ವಾಮಿ ಅವರನ್ನು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿಳೇಕಹಳ್ಳಿಯಲ್ಲಿ ವಾಜಿದ್ ಪಾಷಾ ಎಂಬುವರ 16 ಗುಂಟೆ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಈ ಸಂಬಂಧ ಭೂಮಿಯ ಮಾಲೀಕರಿಗೆ ತಕ್ಷಣ ಪರಿಹಾರ ಧನ ವಿತರಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ರಂಗಸ್ವಾಮಿ ಅವರನ್ನು ಭೇಟಿ ಮಾಡಿದ್ದ ಪಾಷಾ, ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಪರಿಹಾರ ಧನ ಮಂಜೂರು ಮಾಡುವ ಕಡತವನ್ನು ಬಿಡಿಎ ಉಪ ಆಯುಕ್ತರಿಗೆ ಮಂಡಿಸಲು ರೂ 50,000 ಲಂಚ ನೀಡುವಂತೆ ರಂಗಸ್ವಾಮಿ ಬೇಡಿಕೆ ಇಟ್ಟಿದ್ದರು. ಇಬ್ಬರ ನಡುವೆ ನಂತರ ಮಾತುಕತೆ ನಡೆದಿತ್ತು. 20,000 ರೂಪಾಯಿ ನೀಡಿದರೆ ಕಡತ ಮಂಡಿಸುವುದಾಗಿ ಆರೋಪಿ ಒಪ್ಪಿಕೊಂಡಿದ್ದರು. ಪಾಷಾ ಈ ಕುರಿತು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಯ ಸೂಚನೆಯಂತೆ ಪಾಷಾ ಶುಕ್ರವಾರ ಬಿಡಿಎ ಕಚೇರಿಗೆ ಹೋಗಿ ರೂ 20,000 ನೀಡಿದರು. ತಕ್ಷಣವೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ರಂಗಸ್ವಾಮಿ ಅವರನ್ನು ಬಂಧಿಸಿದರು. ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ ಬಳಿಕ ಆರೋಪಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಯು.ಪಿ.ಶಿವರಾಮರೆಡ್ಡಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್. ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.
ಆರೋಪಿ ನ್ಯಾಯಾಂಗ ವಶಕ್ಕೆ

ಪಟಾಲಮ್ಮಲೇಔಟ್‌ನಲ್ಲಿ 15 ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಬಂಧಿತನಾಗಿರುವ ಆರೋಪಿ ಅಶ್ವತ್ಥ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಬಾಲಕಿಯನ್ನು ಬುಧವಾರ ಸಂಜೆ ವೈದೇಹಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಬಳಿಕ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿಲಾಯಿತು. ಪ್ರಾಥಮಿಕ ಚಿಕಿತ್ಸೆ ನಂತರ ನಿಮ್ಹಾನ್ಸ್ ವೈದ್ಯರ ಶಿಫಾರಸಿನಂತೆ ಬಾಲಕಿಯನ್ನು ಮಡಿವಾಳದಲ್ಲಿರುವ ಬಾಲಮಂದಿರಕ್ಕೆ ವರ್ಗಾಯಿಸಲಾಗಿದೆ. ವೈದ್ಯಕೀಯ ಪರೀಕ್ಷೆ ವರದಿ ಭಾನುವಾರ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯುತ್ ಪ್ರವಹಿಸಿ ಯುವಕ ಸಾವು
ಮನೆಯೊಂದಕ್ಕೆ ಕೇಬಲ್ ಎಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಸಾವನ್ನಪ್ಪಿ, ಮತ್ತೊಬ್ಬನಿಗೆ ತೀವ್ರ ಸುಟ್ಟ ಗಾಯಗಳಾಗಿರುವ ಘಟನೆ ಗಿರಿನಗರ ಬಳಿಯ ಶ್ರೀರಂಗನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಶ್ರೀರಂಗನಗರ ನಿವಾಸಿ ರಾಘವೇಂದ್ರ (25) ಮೃತಪಟ್ಟವರು. ಅವರ ಜತೆಯಲ್ಲಿ ಕೇಬಲ್ ಎಳೆಯುವ ಕೆಲಸ ಮಾಡುವ ಪ್ರವೀಣ್ (23) ಎಂಬಾತ ಗಾಯಗೊಂಡ್ದ್ದಿದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT