200 ಕ್ವಿಂಟಲ್ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

ಶ್ರೀರಂಗಪಟ್ಟಣ: ಖಾಸಗಿ ಅಕ್ಕಿ ಗಿರಣಿಯ ಮೇಲೆ ದಿಢೀರ್ ದಾಳಿ ನಡೆಸಿರುವ ತಹಶೀಲ್ದಾರ್ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಮಾಡಿದ್ದ ‘ಅನ್ನ ಭಾಗ್ಯ’ ಯೋಜನೆಯ 200 ಕ್ವಿಂಟಲ್ಗೂ ಹೆಚ್ಚು ಅಕ್ಕಿಯನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕಿನ ಕೊಡಿಯಾಲ ಗ್ರಾಮದ ತಮ್ಮೇಗೌಡ (ಸೆಲ್ಮ್ಯಾಕ್ ಮಾಡರ್ನ್ ಬಿನ್ನಿ ಅಕ್ಕಿ ಗಿರಣಿ) ಹೆಸರಿನ ಖಾಸಗಿ ಅಕ್ಕಿ ಗಿರಣಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
‘ಅನ್ನ ಭಾಗ್ಯ’ ಯೋಜನೆಯ ಅಕ್ಕಿ ಚೀಲದಿಂದ ಕೆಳಕ್ಕೆ ಸುರಿದು ಬೇರೆ ಚೀಲಕ್ಕೆ ತುಂಬುವ ವೇಳೆ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ವೃಷಭರಾಜೇಂದ್ರಮೂರ್ತಿ, ಡಿವೈಎಸ್ಪಿ ಗೀತಾ ಪ್ರಸನ್ನ ಇತರರನ್ನು ಒಳಗೊಂಡ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಕ್ಕಿ ಮಾತ್ರವಲ್ಲದೆ, ಸರ್ಕಾರದ ಮುದ್ರೆ ಇದ್ದ 350ಕ್ಕೂ ಹೆಚ್ಚು ಖಾಲಿ ಚೀಲಗಳನ್ನು ಅಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ತಾಲ್ಲೂಕಿನ ತಡಗವಾಡಿ ಗ್ರಾಮದ ಜವರೇಗೌಡ ಎಂಬುವರ ಮಗ ಧನಂಜಯ ಅವರಿಗೆ ಸೇರಿರುವ ಈ ಅಕ್ಕಿ ಗಿರಣಿಯಲ್ಲಿ ‘ಕೆಎಫ್ಸಿಎಸ್ಸಿ ಲಿ., ಆರ್ಆರ್ ಕಾಮನ್ ರೈಸ್’ ಹೆಸರಿನ ಮುದ್ರೆ ಇರುವ 50 ಕೆ.ಜಿ. ಸಂಗ್ರಹ ಸಾಮರ್ಥ್ಯದ ಖಾಲಿ ಚೀಲಗಳು ಪತ್ತೆಯಾಗಿವೆ. ಈ ಚೀಲಗಳಲ್ಲಿದ್ದ ಅಕ್ಕಿಯನ್ನು ಬೇರೆ ಚೀಲಗಳಿಗೆ ವರ್ಗಾಯಿಸುವ ಕೆಲಸ ನಡೆಯುತ್ತಿತ್ತು. ಆದರೆ, ‘ಅನ್ನ ಭಾಗ್ಯ’ ಯೋಜನೆಯ ಅಕ್ಕಿಯನ್ನು ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಈ ಕುರಿತು ಕೂಲಂಕಷ ವಿಚಾರಣೆ ನಡೆಸಲಾಗುವುದು ಎಂದು ದಾಳಿ ನಡೆಸಿರುವ ಅಧಿಕಾರಿಗಳು ತಿಳಿಸಿದ್ದಾರೆ. ಪಾಂಡವಪುರ ಉಪ ವಿಭಾಗಾಧಿಕಾರಿ ಬಿ. ವಾಣಿ, ಮಂಡ್ಯ ತಹಶೀಲ್ದಾರ್ ಡಾ.ಮಮತಾ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಅಕ್ಕಿ ಗಿರಣಿಯಲ್ಲಿದ್ದ ಸಿಬ್ಬಂದಿ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಅಕ್ಕಿ ಗಿರಿಣಿಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಶಪಡಿಸಿಕೊಂಡಿರುವ ಅಕ್ಕಿಯನ್ನು ಆಹಾರ ದಾಸ್ತಾನು ಮಳಿಗೆಯಲ್ಲಿ ಇರಿಸಲು ಲಾರಿಯಲ್ಲಿ ತುಂಬಿ ಸಾಗಿಸಲಾಯಿತು. ‘ಅನ್ನ ಭಾಗ್ಯ’ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ ಗಿರಣಿ ಮಾಲೀಕರ ವಿರುದ್ಧ ಅಗತ್ಯವಸ್ತುಗಳ ಅಕ್ರಮ ದಾಸ್ತಾನು ಮತ್ತು ಮಾರಾಟ ನಿಷೇಧ ಕಾಯ್ದೆ ಅಡಿ (ನಿಯಮ 3 ಮತ್ತು 7)ಪ್ರಕರಣ ದಾಖಲಿಸಲಾಗಿದೆ. ಅಕ್ಕಿಗಿರಣಿ ಮಾಲೀಕ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.