ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ಬಡ ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ

Last Updated 8 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಂತ ಸಂಕೀರ್ಣವಾದ ಅಂಗಾಂಗ ಊನ ಸಮಸ್ಯೆಗಳಿಂದ ತೊಳಲಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ 14 ವರ್ಷದೊಳಗಿನ 200 ಮಂದಿ ಬಡ ಮಕ್ಕಳಿಗೆ ಈ ವರ್ಷವೂ `ಸ್ಪರ್ಶ್ ವಚನ~ ಯೋಜನೆಯಡಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಲು ಸ್ಪರ್ಶ್ ಆಸ್ಪತ್ರೆ ಪ್ರತಿಷ್ಠಾನ ನಿರ್ಧರಿಸಿದೆ.

ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಪಾಟೀಲ್, `ಈ ತಿಂಗಳ 16ರಿಂದ 18ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಸ್ಪರ್ಶ್ ಆಸ್ಪತ್ರೆಯಲ್ಲಿ ಮಕ್ಕಳ ತಪಾಸಣೆ ನಡೆಸಲಾಗುತ್ತದೆ. ಅರ್ಹ ಮಕ್ಕಳಿಗೆ ಅಕ್ಟೋಬರ್ 17ರಿಂದ 23ರವರೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗುತ್ತದೆ~ ಎಂದು ಹೇಳಿದರು.

`ಅತ್ಯಂತ ಸಂಕೀರ್ಣವಾದ ಹಾಗೂ ಶಸ್ತ್ರ ಚಿಕಿತ್ಸೆ ನಂತರ ಭರವಸೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬಹುದಾದಂತಹ ಬಡ ಮಕ್ಕಳನ್ನು ಮಾತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಂದು ವೇಳೆ ಆಯ್ಕೆಯಾಗದ ಮಕ್ಕಳ ಪೋಷಕರು ಬೇಸರ ಪಡುವ ಅಗತ್ಯವಿಲ್ಲ. ಮುಂದಿನ ವರ್ಷಗಳಲ್ಲಿಯೂ ತಪಾಸಣೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ~ ಎಂದರು.

`ಸಾಮಾನ್ಯ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆ ನೆರವೇರಿಸಲು ಸಾಧ್ಯವಾಗದ ಹಾಗೂ ಅತ್ಯಂತ ಕಡು ಬಡ ಮಕ್ಕಳನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಂಗ್ಲೆಂಡ್‌ನ 16 ಮಂದಿ ಸೇರಿದಂತೆ ಒಟ್ಟು 30 ಮಂದಿ ತಜ್ಞ ವೈದ್ಯರ ತಂಡವು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಲಿದೆ. ಸಾಮಾನ್ಯ ಚಿಕಿತ್ಸೆ ಕೂಡ ಪಡೆಯಲು ಸಾಧ್ಯವಾಗದಂತಹ ಬಡ ಮಕ್ಕಳಿಗೆ ವಿಶ್ವದ ಹೆಸರುವಾಸಿ ತಜ್ಞ ವೈದ್ಯರ ತಂಡದ ಮೂಲಕ ಶಸ್ತ್ರ ಚಿಕಿತ್ಸೆ ಸೌಲಭ್ಯ ಕಲ್ಪಿಸುವುದು `ಸ್ಪರ್ಶ್ ವಚನ~ದ ವಿಶೇಷವಾಗಿದೆ~ ಎಂದು ಅವರು ತಿಳಿಸಿದರು.

`200 ಮಕ್ಕಳ ಶಸ್ತ್ರ ಚಿಕಿತ್ಸೆಗಾಗಿ ತಜ್ಞ ವೈದ್ಯರ ಖರ್ಚು- ವೆಚ್ಚ ಸೇರಿ ಸುಮಾರು ಎಂಟು ಕೋಟಿ ರೂಪಾಯಿಗಳಷ್ಟು ಖರ್ಚಾಗಲಿದೆ. ಈ ಉದ್ದೇಶಕ್ಕಾಗಿ ಪ್ರತಿಷ್ಠಾನ 1.5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಶಿಬಿರಕ್ಕಾಗಿ ದಾನಿಗಳು ಹಾಗೂ ಪ್ರಾಯೋಜಕತ್ವ ನೀಡಲಿರುವ ಸಂಸ್ಥೆಗಳಿಂದಲೂ ನೆರವು ನಿರೀಕ್ಷಿಸಲಾಗುತ್ತಿದೆ~ ಎಂದರು.

`ಪ್ರಾಯೋಜಕ ಸಂಸ್ಥೆಗಳು ಒಂದು ಮಗುವಿನ ಶಸ್ತ್ರ ಚಿಕಿತ್ಸೆಗೆ 30ರಿಂದ 80 ಸಾವಿರ ರೂಪಾಯಿ ಹಾಗೂ ಇಡೀ ದಿನದ ಶಿಬಿರಕ್ಕಾಗಿ 20 ಲಕ್ಷ ರೂಪಾಯಿಗಳವರೆಗೆ ನೆರವು ನೀಡಬಹುದು. ಸಹಾಯಹಸ್ತ ಚಾಚಲಿರುವ ಸಂಸ್ಥೆಗಳಿಗೆ ಐಟಿ ಕಾಯ್ದೆಯಡಿ `80 ಜಿ~ ವಿನಾಯಿತಿ ಸೌಲಭ್ಯ ದೊರೆಯಲಿದೆ~ ಎಂದು ವಿವರಿಸಿದರು.

ಇದೇ 16ರಿಂದ ನಡೆಯಲಿರುವ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಡಾ. ಮಮತಾ ಪಾಟೀಲ್ ಅವರನ್ನು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯೊಳಗೆ ಮೊಬೈಲ್ ಸಂಖ್ಯೆ: 98454-77435 ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT