ಸೋಮವಾರ, ಜೂನ್ 14, 2021
21 °C

2000 ಮನೆ ವಿತರಣೆಗೆ ಅಟ್ಟೂರ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಬಸವ ವಸತಿ ಯೋಜನೆಯ 2 ಸಾವಿರ ಮತ್ತು ಅಂಬೇಡ್ಕರ ಯೋಜನೆಯ 71 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಸಲಹೆ ಕೊಟ್ಟರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

 

ವಿಧಾನಸಭಾ ಕ್ಷೇತ್ರದಲ್ಲಿನ 26 ಪಂಚಾಯಿತಿಗಳಿಗೆ ಸಮನಾಗಿ ಮನೆಗಳನ್ನು ಹಂಚಬೇಕು ಎಂದರು.

ಬೇಸಿಗೆ ಇರುವುದರಿಂದ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.ನಿಷ್ಕಾಳಜಿತನ ವಹಿಸಿದರೆ ಸಹಿಸಲಾಗುವುದಿಲ್ಲ ಎಂದರು. ಅಪೂರ್ಣವಾಗಿರುವ ಅಂಗನವಾಡಿ ಹಾಗೂ ಇತರೆ ಕಟ್ಟಡಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಅಧಿಕಾರಿಗಳು ಜನರಿಗೆ ಮತ್ತು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ಕೊಡಬಾರದು. ಸಭೆಯಲ್ಲಿ ಬರೀ ವರದಿ ಒಪ್ಪಿಸಿದರೆ ಸಾಲದು ಕೆಲಸ ಮಾಡಬೇಕು ಎಂದರು.ಕಿಟ್ಟಾ ಮತ್ತು ಗಡಿಗೌಡಗಾಂವದಲ್ಲಿ ಸರ್ಕಾರದಿಂದ ಮಂಜೂರಾದ ನಿವೇಷನಗಳ ಹಕ್ಕುಪತ್ರಗಳು ಬಂದಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಬಸವರಾಜ ಚಿರಡೆ ತಿಳಿಸಿದರು. ಸರ್ಕಾರದ ಯೋಜನೆಯಲ್ಲಿ ನಿವೇಷನ ಕೊಡುವುದಕ್ಕಾಗಿ ತಾಲ್ಲೂಕಿನ 13 ಗ್ರಾಮಗಳಲ್ಲಿ ಜಮೀನು ಮಂಜೂರಾಗಿದ್ದು ತಹಸೀಲ್ದಾರರು ಸ್ಥಳ ಗುರುತಿಸಿ ಕೊಡಬೇಕಾಗಿದೆ.ಕಳೆದ ಸಾಲಿನಲ್ಲಿ ಮಂಜೂರಾದ ಬಸವ ವಸತಿ ಯೋಜನೆಯ 2443 ಮನೆಗಳಲ್ಲಿ ಕೇವಲ 101 ಮನೆಗಳ ನಿರ್ಮಾಣವಾಗಿದೆ. ಬ್ಯಾಂಕುಗಳಲ್ಲಿ ಅಕೌಂಟ್ ತೆಗೆಯದ ಕಾರಣ ಕೆಲವರಿಗೆ ಮನೆಗಳ ಹಣ ಪಾವತಿಸಲಾಗಿಲ್ಲ ಎಂದು ತಿಳಿಸಿದರು.

 

ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ಸಂಧ್ಯಾಸುರಕ್ಷಾ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 40 ಸಾವಿರ ಜನರಿಗೆ ವೇತನ ಮಂಜೂರಾಗಿತ್ತು. ಆದರೆ ಸರ್ಕಾರದ ಆದೇಶದ ಅನ್ವಯ ಪರಿಶೀಲನೆ ನಡೆಸಿ ಅರ್ಹರಲ್ಲದ 10 ಸಾವಿರ ಜನರ ಮಂಜೂರಾತಿ ರದ್ದುಗೊಳಿಸಲಾಗಿದೆ.

 

ಸರಿಯಾದ ವಿಳಾಸ ಇಲ್ಲದ್ದರಿಂದ 3 ಸಾವಿರ ಜನರಿಗೆ ವೇತನ ಕೊಡುವುದನ್ನು ನಿಲ್ಲಿಸಲಾಗಿದೆ. ಒಂದುವೇಳೆ ಯಾರಿಗಾದರೂ ಅನ್ಯಾಯವಾದರೆ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.ತಹಸೀಲ್ದಾರ ಶಿವರಾಜ ಹಲಬರ್ಗೆಯವರು ವೃದ್ಧಾಪ್ಯವೇತನ, ಅಂಗವಿಕಲರ ವೇತನಕ್ಕಾಗಿ ಅರ್ಹ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು.

 

ಜಿಲ್ಲಾ ಪಂಚಾಯಿತಿ ಉಪ ವಿಭಾಗದಿಂದ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಕೆಲ ಸದಸ್ಯರು ದೂರಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರೆ, ಉಪಾಧ್ಯಕ್ಷೆ ಗೀತಾ ಅಂಬಾದಾಸ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಂತೋಷಮ್ಮ ಕೌಡಾಳೆ, ಸದಸ್ಯರಾದ ಚಂದ್ರಶೇಖರ ಪಾಟೀಲ, ಸಂಗೀತಾ ಪಾಟೀಲ, ಲತಾ ಹಾರಕೂಡೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.