ಶುಕ್ರವಾರ, ಮೇ 27, 2022
21 °C

2003ರಲ್ಲಿನ ತಂಡಕ್ಕೆ ಹೋಲಿಕೆ: ಗಂಗೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಈ ಬಾರಿಯ ವಿಶ್ವಕಪ್‌ಗಾಗಿ ರಚಿಸಿರುವ ಹದಿನೈದು ಸದಸ್ಯರ ಅಂತಿಮ ತಂಡವು 2003ರಲ್ಲಿ ಆಡಿದ್ದ ತಂಡಕ್ಕೆ ಹೋಲಿಕೆ ಆಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.ಆಗಲೂ ವಿಶ್ವಕಪ್‌ಗೆ ಮುನ್ನ ತಂಡವು ಯಶಸ್ಸಿನ ಹಾದಿಯಲ್ಲಿ ಸಾಗಿ ಉನ್ನತ ಮನೋಬಲವನ್ನು ಹೊಂದಿತ್ತು. ಈಗೂ ಅಂಥದೇ ಉತ್ಸಾಹದ ವಾತಾವರಣ ಇದೆ ಎಂದು ಅವರು ತಿಳಿಸಿದರು.

ದೇಸಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿಲ್ಲ: ಐಪಿಎಲ್ ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಯಾವುದೇ ತಂಡವು ಕೊಳ್ಳದಿರುವ ಕಾರಣ ದೇಸಿ ಕ್ರಿಕೆಟ್‌ಗೂ ತಾವು ವಿದಾಯ ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಂಗೂಲಿ ಅಲ್ಲಗಳೆದಿದ್ದಾರೆ.ತಮ್ಮ ಹೇಳಿಕೆಗೆ ತಪ್ಪು ಅರ್ಥ ನೀಡಲಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆಡುವ ಆಸೆಯನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಅವಕಾಶ ಸಿಗುತ್ತದೆಂದು ನಂಬಿದ್ದೇನೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.‘ಕಳೆದ ರಾತ್ರಿ ಹಾಗೂ ಇಂದು ಬೆಳಿಗ್ಗೆ ಟೆಲಿವಿಷನ್ ಮತ್ತು ಪತ್ರಿಕೆಗಳಲ್ಲಿನ ವರದಿಗಳನ್ನು ಓದಿ ಆಘಾತವಾಯಿತು. ನನ್ನ ಹೇಳಿಕೆಯನ್ನು ತಿರುಚಿದ ರೀತಿಯ ಬಗ್ಗೆಯೂ ಅಚ್ಚರಿಗೊಂಡೆ’ ಎಂದು ಹೇಳಿದರು.‘ನಾನು ಅಂದಿದ್ದೇ ಬೇರೆ; ಅರ್ಥ ಮಾಡಿಕೊಂಡಿದ್ದೇ ಬೇರೆ’ ಎಂದ ದಾದಾ ‘ಐಪಿಎಲ್‌ನಲ್ಲಿ ಅವಕಾಶ ಸಿಗದಿದ್ದರೆ ರಣಜಿ ಪಂದ್ಯಗಳಲ್ಲಿ ಆಡುವುದಿಲ್ಲ. ರಣಜಿಯಲ್ಲಿ ಆಡುವುದು ಐಪಿಎಲ್ ಪಂದ್ಯಗಳಿಗಾಗಿ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಲು ಎಂದು ನಾನು ಹೇಳಿದ್ದೆ. ಆದರೆ ಅದನ್ನು ತಪ್ಪಾಗಿ ತಿಳಿದುಕೊಂಡು ದೇಸಿ ಕ್ರಿಕೆಟ್‌ನಿಂದಲೇ ನಿವೃತ್ತಿ ಹೊಂದಿದ್ದೇನೆ ಎಂದು ವರದಿ ಮಾಡಲಾಗಿದೆ. ಅದಕ್ಕಾಗಿಯೇ ಸಂದರ್ಶನ ನೀಡಿದ್ದ ಮಾಧ್ಯಮಕ್ಕೆ ಕಳೆದ ರಾತ್ರಿಯೇ ಸ್ಪಷ್ಟವಾದ ಉತ್ತರವನ್ನು ನೀಡಿ ಪ್ರಕಟಣೆ ಕಳುಹಿಸಿದ್ದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.