ಸೋಮವಾರ, ಜನವರಿ 27, 2020
16 °C

2006ರ ಕಾಯ್ದೆ ಏನು ಹೇಳುತ್ತದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಮತ್ತು ಶುಲ್ಕ ನಿಗದಿ ಸಂಬಂಧ 2006ರಲ್ಲಿ ರೂಪಿಸಿದ್ದ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಗೆ ಈಗ ಜೀವ ನೀಡಲಾಗಿದೆ.2006ರಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿದ್ದರೂ, ಇದನ್ನು ಅನುಷ್ಠಾನಗೊಳಿಸಿರಲಿಲ್ಲ. ಇದನ್ನು ತಡೆಹಿಡಿದು ಪರಸ್ಪರ ಮಾತುಕತೆ ಮೂಲಕವೇ ಸರ್ಕಾರ ಮತ್ತು ಖಾಸಗಿ ಕಾಲೇಜುಗಳು ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಒಪ್ಪಂದ ಮಾಡಿಕೊಳ್ಳುತ್ತಿದ್ದವು.ಆದರೆ, 2014–15ನೇ ಸಾಲಿನಿಂದ ಕಾಯ್ದೆ ಜಾರಿಗೆ ಬರಲಿದ್ದು, ಆ ಪ್ರಕಾರ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳು ಒಂದು ಸಿಇಟಿ, ಖಾಸಗಿ ಕಾಲೇಜುಗಳಿಗೆ ಮತ್ತೊಂದು ಸಿಇಟಿ ನಡೆಯಲಿದೆ. ಎರಡಕ್ಕಿಂತ ಹೆಚ್ಚು ಸಿಇಟಿ ನಡೆಸಲು ಅವಕಾಶ ಇಲ್ಲ.ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ಸರ್ಕಾರ ಸಿಇಟಿ ನಡೆಸಲಿದೆ. ಖಾಸಗಿ ಕಾಲೇಜು­ಗಳಲ್ಲಿನ ಸೀಟುಗಳ ಭರ್ತಿಗೆ, ಖಾಸಗಿ ಕಾಲೇಜು­ಗಳೆಲ್ಲ ಸೇರಿ ಪ್ರತ್ಯೇಕ ಸಿಇಟಿ ನಡೆಸಬಹುದು ಅಥವಾ ಸರ್ಕಾರದ ಸಿಇಟಿಯನ್ನೇ ಒಪ್ಪಿ, ಒಂದೇ ಸಿಇಟಿ ನಡೆಸಲು ಸಹಕರಿಸಬಹುದು ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.ಕಾಯ್ದೆ ಪ್ರಕಾರವೇ ಮುಂದಿನ ವರ್ಷದಿಂದ ವೃತ್ತಿಪರ ಕೋರ್ಸ್‌ಗಳ  ಪ್ರವೇಶ ನಡೆಯಲಿದೆ ಎಂದು ಸರ್ಕಾರ ಈಗಾ­ಗಲೇ ಹೇಳಿದೆ. ಆ ಪ್ರಕಾರ ಹೋದರೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಇರುವುದಿಲ್ಲ. ಆ ಕಾಲೇಜುಗಳಲ್ಲಿನ ಎಲ್ಲ ಸೀಟುಗಳು ಕಾಮೆಡ್‌ –ಕೆ ಮೂಲಕವೇ ಭರ್ತಿಯಾಗಲಿವೆ.ಕಾಯ್ದೆ ಪ್ರಕಾರ ಈಗಾಗಲೇ ಶುಲ್ಕ ನಿಗದಿಗೆ ಮತ್ತು ಪ್ರವೇಶ ಮೇಲ್ವಿಚಾರಣೆಗೆ ಎರಡು ಸಮಿತಿಗಳನ್ನು ರಚಿಸಲಾ­ಗಿದ್ದು, ಆ ಸಮಿತಿಗಳು ಕೆಲಸ ಆರಂಭಿಸಿವೆ. ಶುಲ್ಕ ನಿಗದಿ ಸಮಿತಿ ಪ್ರತಿಯೊಂದು ಕಾಲೇಜುಗಳಿಂದ ಸಮಗ್ರವಾದ ಮಾಹಿತಿ­ಯನ್ನು ತರಿಸಿಕೊಂಡು ಮೂಲಸೌಕರ್ಯಗಳ ಆಧಾರದ ಮೇಲೆ ಶುಲ್ಕವನ್ನು ನಿಗದಿ ಮಾಡಲಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಏಕರೂಪದ ಶುಲ್ಕ ಇರುತ್ತದೆ.ಶೇ 50ರಷ್ಟು ಮೀಸಲಾತಿ: ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಶೇ 50ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಿಡಲಾಗುತ್ತದೆ. ಶೇ 15ರಷ್ಟು ಸೀಟುಗಳು ಅನಿವಾಸಿ ಭಾರತೀಯರಿಗೆ ಮತ್ತು ಇನ್ನುಳಿದ ಶೇ 35ರಷ್ಟು ಸೀಟುಗಳು ಸಾಮಾನ್ಯ ವರ್ಗವರಿಗೆ ಮೀಸಲಾಗಿವೆ.

ಪ್ರತಿಕ್ರಿಯಿಸಿ (+)