2009-10 ರ ಉದ್ಯೋಗ ಖಾತರಿ ಬಾಕಿ ಬಿಲ್ :ಇನ್ನೂ ವರದಿ ಇಲ್ಲ

7

2009-10 ರ ಉದ್ಯೋಗ ಖಾತರಿ ಬಾಕಿ ಬಿಲ್ :ಇನ್ನೂ ವರದಿ ಇಲ್ಲ

Published:
Updated:

ಯಾದಗಿರಿ: ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 2009-10 ರ ಉದ್ಯೋಗ ಖಾತರಿ ಕಾಮಗಾರಿಗಳ ವೇತನಕ್ಕಾಗಿ ಕಾದು ಕುಳಿತಿದ್ದ ಕೂಲಿಕಾರರ ಆತಂಕ ನಿವಾರಣೆಗೆ ಇನ್ನೂ ಕಾಲ ಕೂಡಿ ಬರುತ್ತಿಲ್ಲ. ಪರಿಶೀಲನೆಗೆ ನೇಮಕ ಮಾಡಿರುವ ಮೂರನೇ ತಂಡಗಳು ಇನ್ನೂ ವರದಿ ನೀಡದೇ ಇರುವುದು ಇಷ್ಟೆಲ್ಲ ತೊಂದರೆಗೆ ಕಾರಣವಾಗಿದೆ.2009-10 ರಲ್ಲಿ ನಡೆದ ಉದ್ಯೋಗ ಖಾತರಿ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸುಮಾರು ರೂ.126 ಕೋಟಿ ಮೊತ್ತದ ಕಾಮಗಾರಿಗಳ ಬಿಲ್‌ಗಳ ಪಾವತಿಯನ್ನು ತಡೆ ಹಿಡಿಯಲಾಗಿತ್ತು. ವಿವಿಧ ಸಂಘಟನೆಗಳು, ರಾಜಕೀಯ ಪ್ರತಿನಿಧಿಗಳು, ಕೂಲಿಕಾರರ ನಿರಂತರ ಒತ್ತಾಯಗಳ ಹಿನ್ನೆಲೆಯಲ್ಲಿ ಇದಕ್ಕೊಂದು ಪರಿಹಾರ ಕಲ್ಪಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.

 

ಮೂರನೇ ತಂಡಗಳನ್ನು ನೇಮಕ ಮಾಡಿ, ಅವುಗಳ ಮೂಲಕ ನಿಜವಾಗಿಯೂ ಆಗಿರುವ ಕಾಮಗಾರಿಗಳ ಬಗ್ಗೆ ದೃಢೀಕರಣ ಪಡೆದು, ನಂತರ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದೆ.ಸರ್ಕಾರದಿಂದಲೇ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಸರ್ಕಾರೇತರ ಸಂಸ್ಥೆಗಳನ್ನು ಮೂರನೇ ತಂಡಗಳಾಗಿ ನೇಮಕ ಮಾಡಲಾಗಿತ್ತು. ಜಿಲ್ಲೆಯ ಮೂರು ತಾಲ್ಲೂಕುಗಳ ಕಾಮಗಾರಿ ಪರಿಶೀಲನೆಯನ್ನು ಮೂರು ಎನ್‌ಜಿಒಗಳಿಗೆ ನೀಡಲಾಗಿದೆ. ಕಾಮಗಾರಿಗಳ ಖುದ್ದು ಪರಿಶೀಲನೆ ಮಾಡಿ, ನಿಜವಾಗಿಯೂ ಆಗಿರುವ ಕಾಮಗಾರಿಗಳ ವರದಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಜ.31 ರೊಳಗಾಗಿ ಎಲ್ಲ ಎನ್‌ಜಿಒಗಳು ವರದಿ ನೀಡಬೇಕು ಎಂದು ಹೇಳಲಾಗಿತ್ತಾದರೂ, ಫೆ.25 ಬಂದರೂ ಇದುವರೆಗೆ ಯಾವುದೇ ಎನ್‌ಜಿಒಗಳು ವರದಿಯನ್ನೇ ಸಲ್ಲಿಸಿಲ್ಲ.ಅತೃಪ್ತಿ: ಇನ್ನೊಂದೆಡೆ ಅವ್ಯವಹಾರವನ್ನು ಪತ್ತೆ ಮಾಡಲು ನೇಮಕ ಮಾಡಿರುವ ಮೂರನೇ ತಂಡಗಳ ಕಾರ್ಯವೈಖರಿಯ ಬಗ್ಗೆಯೂ ಅತೃಪ್ತಿ ವ್ಯಕ್ತವಾಗುತ್ತಿವೆ. ಮೂರನೇ ತಂಡಗಳು ಸಮರ್ಪಕವಾಗಿ ಪರಿಶೀಲನೆ ಮಾಡುತ್ತಿಲ್ಲ. ಕುಳಿತಲ್ಲಿಯೇ ವರದಿ ತಯಾರಿಸಿ, ಕೊಡುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ.ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿದ್ದು, ಮೂರನೇ ತಂಡದ ವರದಿಯ ಬಗ್ಗೆ ತನಿಖೆ ನಡೆಸಲು ನಾಲ್ಕನೇ ತಂಡವನ್ನು ರಚಿಸುವ ಅವಶ್ಯಕತೆ ಬರಬಹುದು ಎಂಬ ಆತಂಕವನ್ನು ಬಹುತೇಕ ಸದಸ್ಯರು ವ್ಯಕ್ತಪಡಿಸಿದ್ದಾರೆ.ಮೂರನೇ ತಂಡದವರು ಕಾಮಗಾರಿ ಆಗಿರುವ ಸ್ಥಳಗಳಿಗೆ ಹೋಗಿ, ಪರಿಶೀಲನೆ ಮಾಡುತ್ತಿಲ್ಲ. ಕುಳಿತಲ್ಲಿಯೇ ವರದಿ ತಯಾರಿಸುತ್ತಿದ್ದಾರೆ. ಸುಮಾರು ರೂ.126 ಕೋಟಿಯಷ್ಟು ಮೊತ್ತದ ಕಾಮಗಾರಿಗಳು ಆಗಿವೆ ಎಂದು ಮೊದಲಿನ ವರದಿಯಿಂದ ತಿಳಿದು ಬಂದಿದೆ. ಇಷ್ಟೊಂದು ಮೊತ್ತದ ಕಾಮಗಾರಿಗಳನ್ನು ಒಂದೊಂದಾಗಿ ಪರಿಶೀಲನೆ ಮಾಡದೇ, ಕೇವಲ ಫೋಟೋಗಳ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗುತ್ತಿದೆ. ಇಂತಹ ವರದಿಯಿಂದ ನಿಜವಾಗಿಯೂ ಕಾರ್ಯನಿರ್ವಹಿಸಿದ ಕೂಲಿಕಾರರಿಗೆ ಅನ್ಯಾಯವಾಗುವುದು ನಿಶ್ಚಿತ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನುಮೇಗೌಡ ಮರಕಲ್, ದೇವರಾಜ ನಾಯಕ, ಸದಸ್ಯರಾದ ಸಿದ್ಧನಗೌಡ ಪೊಲೀಸ್ ಪಾಟೀಲ, ನಾಗನಗೌಡ ಸುಬೇದಾರ, ಬಸವರಾಜ ಖಂಡ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.ರೂ.50 ಲಕ್ಷ ಮೊತ್ತದ ಕಾಮಗಾರಿಗಳು ನಡೆದಿರುವ ಗ್ರಾಮ ಪಂಚಾಯಿತಿಯಲ್ಲಿ ಒಂದು ಕೋಟಿ ಮೊತ್ತದ ಕಾಮಗಾರಿಗಳನ್ನು ಸೇರಿಸಲಾಗುತ್ತಿದೆ. ಮೂರನೇ ತಂಡದಿಂದಲೂ ಸಾಕಷ್ಟು ಅವ್ಯವಹಾರ ಆಗುತ್ತಿದೆ. ಸರ್ಕಾರ ನೇಮಕ ಮಾಡಿರುವ ಮೂರನೇ ತಂಡಗಳೇ ಈ ರೀತಿಯ ಅವ್ಯವಹಾರಕ್ಕೆ ಮುಂದಾದರೆ, ಬಡಜನರ ರಕ್ಷಣೆ ಮಾಡುವವರಾದರೂ ಯಾರು ಎಂಬ ಪ್ರಶ್ನೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯರು ಕೇಳುತ್ತಿದ್ದಾರೆ.ಅವ್ಯವಹಾರಕ್ಕೆ ಆಸ್ಪದವಿಲ್ಲ: ಇನ್ನೊಂದೆಡೆ 2009-10 ರಲ್ಲಿ ಆಗಿರುವ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಪರಿಶೀಲನೆಗೆ ನೇಮಕ ಆಗಿರುವ ಮೂರನೇ ತಂಡಗಳಿಂದ ಅವ್ಯವಹಾರ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಅವ್ಯವಹಾರಕ್ಕೆ ಆಸ್ಪದ ನೀಡುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.2009-10 ರಲ್ಲಿ ಆಗಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿಸುವ ಬಗ್ಗೆ ಒತ್ತಾಯಗಳು ಬಂದ ಹಿನ್ನೆಲೆಯಲ್ಲಿ ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ, ಆಗಿರುವ ಕಾಮಗಾರಿಗಳ ಬಗ್ಗೆ ವರದಿ ತರಿಸಿಕೊಳ್ಳಲಾಗಿತ್ತು. ಈ ವರದಿಯ ಆಧಾರದ ಮೇಲೆಯೇ ರೂ.126 ಕೋಟಿ ಬಾಕಿ ಇದೆ ಎಂದು ಅಂದಾಜು ಮಾಡಲಾಗಿದೆ. ಸದ್ಯಕ್ಕೆ ಮೂರನೇ ತಂಡದ ಪರಿಶೀಲನೆ ನಡೆಸಲಾಗುತ್ತಿದೆ.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಮೊದಲು ನೀಡಿದ್ದ ವರದಿಯಲ್ಲಿನ ಕಾಮಗಾರಿಗಳನ್ನು ಹೊರತುಪಡಿಸಿ, ಮೂರನೇ ತಂಡದ ವರದಿಯಲ್ಲಿ ಬೇರೆ ಕಾಮಗಾರಿಗಳಿದ್ದರೆ, ಅದಕ್ಕೆ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಪ್ರಭಾರ ಸಿಇಒ ಬಿ.ವಿ. ಭೋಸಲೆ ಸಭೆಯಲ್ಲಿಯೇ ಸ್ಪಷ್ಟಪಡಿಸಿದ್ದಾರೆ.ಒಂದೆಡೆ ಮೂರನೇ ತಂಡಗಳು ವರದಿ ನೀಡುವುದರಲ್ಲಿ ವಿಳಂಬ ಮಾಡುತ್ತಿದ್ದು, ಇನ್ನೊಂದೆಡೆ ಹೆಚ್ಚಿನ ಮೊತ್ತದ ಕಾಮಗಾರಿಗಳು ಸೇರಿದ್ದಲ್ಲಿ, ಕ್ರಮ ಎದುರಿಸುವ ಭೀತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಲ್ಲಿ ಉಂಟಾಗಿದೆ.2009-10 ರಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಮಾಡಿರುವ ಕೂಲಿಕಾರರು, ಮೂರನೇ ತಂಡಗಳ ನೇಮಕದಿಂದ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈಗಲಾದರೂ ಕೂಲಿ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಇದುವರೆಗೆ ಮೂರನೇ ತಂಡಗಳು ವರದಿಯನ್ನೇ ನೀಡದೇ ಇರುವುದು ಹಾಗೂ ಮೂರನೇ ತಂಡಗಳ ಕಾರ್ಯವೈಖರಿಯ ಮೇಲೆ ಸಂದೇಹ ಉಂಟಾಗಿರುವುದರಿಂದ ಮತ್ತೊಮ್ಮೆ ನಿರಾಸೆ ಅನುಭವಿಸುವಂತಾಗಿದೆ ಎಂದು ಕೂಲಿಕಾರರು ಹೇಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry