ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2012 ಒಲಂಪಿಕ್ಸ್: 53 ದಿನ ಬಾಕಿ

Last Updated 3 ಜೂನ್ 2012, 19:30 IST
ಅಕ್ಷರ ಗಾತ್ರ

ಮಾನವತೆಯ ದಟ್ಟ ಆಶಯಗಳನ್ನು ಹೊಂದಿರುವ  ಒಲಿಂಪಿಕ್ಸ್ ಆಂದೋಲನ ಸಾಕಷ್ಟು ಮಟ್ಟಿಗೆ ಆ ದಿಕ್ಕಿನಲ್ಲಿ ದಾಪುಗಾಲಿಟ್ಟಿದೆ. ಅಮೆರಿಕ, ಚೀನಾ, ರಷ್ಯ ಮುಂತಾದ ಪ್ರಬಲ ದೇಶಗಳು ಒಲಿಂಪಿಕ್ಸ್‌ನಲ್ಲಿಯೂ `ಹಿರಿಯಣ್ಣ~ಗಳಾಗಿರುವುದು ನಿಜ.

ಇಂತಹ ಪ್ರಬಲರು ದೊಡ್ಡ ಸಂಖ್ಯೆಯಲ್ಲಿ ಬಲಿಷ್ಠ ಕ್ರೀಡಾಪಟುಗಳ ತಂಡವನ್ನು ಒಲಿಂಪಿಕ್ಸ್ `ಅಖಾಡ~ದಲ್ಲಿಳಿಸಿ ಪದಕ ಪಟ್ಟಿಯಲ್ಲಿ ಎತ್ತರಕ್ಕೇರುವುದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡಿವೆ. ಆದರೆ ಈ ನಡುವೆ ಜಮೈಕಾ, ಇಥಿಯೋಪಿಯಾದಂತಹ ಪುಟ್ಟ ಬಡ ದೇಶಗಳ ಅಥ್ಲೀಟ್‌ಗಳು ಪ್ರಬಲರಿಗೆ ಸಮಬಲದ ಪೈಪೋಟಿ ನೀಡಿರುವುದನ್ನು ಹೇಗೆ ಮರೆಯಲು ಸಾಧ್ಯ.

ಕೆರಿಬಿಯನ್ ಕಡಲು ಪ್ರದೇಶದಲ್ಲಿರುವ ಗ್ರೆನೆಡಾ ದೇಶದ ಜನಸಂಖ್ಯೆ ಸುಮಾರು ಒಂದು ಲಕ್ಷ ಅಷ್ಟೆ. ಆ ದೇಶದ ರೊಲಾಂಡೆ ಮೋಸೆಸ್ ಬೀಜಿಂಗ್ ಒಲಿಂಪಿಕ್ಸ್‌ನ ಬಾಕ್ಸಿಂಗ್ ವೆಲ್ಟರ್‌ವೇಟ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಬೀಜಿಂಗ್‌ನಲ್ಲಿ ಗ್ರೆನಡಾ ದೇಶದ ತಂಡವೆಂದರೆ ರೊಲಾಂಡೆ ಮಾತ್ರ ! ನಮ್ಮ ನೆರೆಯ ಭೂತಾನ್ ದೇಶವು ಕಳೆದ ಆರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದೆ. ಭೂತಾನ್ ತಂಡವೆಂದರೆ ಒಂದಿಬ್ಬರು ಬಿಲ್ಲುಗಾರರು ಇರುತ್ತಾರಷ್ಟೆ. ಹೀಗೆ ಪ್ರಬಲರು, ದುರ್ಬಲರೆಲ್ಲಾ ಒಗ್ಗೂಡಿ ನಡೆಯುವ ವೇದಿಕೆಯೇ ಒಲಿಂಪಿಕ್ಸ್.

1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಜನಾಂಗವಾದವನ್ನು ಇನ್ನಿಲ್ಲದಂತೆ ಸಮರ್ಥಿಸುತ್ತಿದ್ದ ಹಿಟ್ಲರ್‌ನ ಎದುರಲ್ಲಿಯೇ ಧ್ಯಾನ್‌ಚಂದ್ ನೇತೃತ್ವದ ಭಾರತದ ಹಾಕಿ ತಂಡದವರು 8-1ಗೋಲುಗಳಿಂದ ಜರ್ಮನಿ ತಂಡವನ್ನು ಬಗ್ಗು ಬಡಿದಿದ್ದರು. ಹಿಟ್ಲರ್ ಗಂಟುಮೋರೆ ಹಾಕಿಕೊಂಡು ಎದ್ದು ಹೋಗಿದ್ದನಂತೆ. ಕ್ಯುಬರ್ಟನ್ ಪ್ರತಿಪಾದಿಸಿದ್ದ ಒಲಿಂಪಿಕ್ಸ್‌ನ ಮಾನವತೆಯ ಆಶಯಗಳು ಯಶಸ್ಸು ಕಂಡಿದ್ದು ನಿಜ ತಾನೆ.

                                                ಮರ್ಲಿನ್ ಒಟ್ಟಿ
ಅಥ್ಲೆಟಿಕ್ಸ್ ಲೋಕದಲ್ಲಿ ಮರ್ಲಿನ್ ಒಟ್ಟಿ ಹೆಸರು ಕೇಳದವರು ಅಪರೂಪ. ಇವರು ಒಲಿಂಪಿಕ್ಸ್‌ನ ಕಂಚಿನ ರಾಣಿ ಎಂದೇ ಪ್ರಖ್ಯಾತಿ. ಜಮೈಕಾದಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದ ನಂತರ 1979ರಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾದ ನೆಬ್ರಾಸ್ಕಾ ವಿ.ವಿ. ಸೇರುತ್ತಾರೆ. ಆ ವಿ.ವಿ.ಯ ಅಥ್ಲೆಟಿಕ್ ತಂಡದಲ್ಲಿ ಸ್ಥಾನ ಗಳಿಸಿದ ಇವರು, ವೇಗದ ಓಟದಲ್ಲಿ ಉತ್ತಮ ತರಬೇತಿ ಪಡೆದು ಹುಟ್ಟೂರಿಗೆ ವಾಪಸಾಗುತ್ತಾರೆ.
 
1980ರ ಮಾಸ್ಕೊ ಒಲಿಂಪಿಕ್ಸ್‌ಗೆ ಹೊರಟು ನಿಂತಿದ್ದ ಜಮೈಕಾ ತಂಡದಲ್ಲಿ ಸ್ಥಾನ ಗಳಿಸುತ್ತಾರೆ. ಮಾಸ್ಕೊದಲ್ಲಿ 200ಮೀ. ಓಟದಲ್ಲಿ ಕಂಚಿನ ಪದಕ ಬರುತ್ತದೆ. ನಂತರ ಮರ್ಲಿನ್ ಹಿಂತಿರುಗಿ ನೋಡಿದ್ದೇ ಇಲ್ಲ.

ಲಾಸ್‌ಏಂಜಲೀಸ್‌ನಲ್ಲಿ ನಡೆದ 1984ರ ಒಲಿಂಪಿಕ್ಸ್‌ನಲ್ಲಿ 100ಮೀ. ಮತ್ತು 200ಮೀ. ಓಟಗಳಲ್ಲಿ ಕಂಚಿನ ಪದಕ ಗೆಲ್ಲುತ್ತಾರೆ. 1992ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ಸ್‌ನ 200ಮೀ. ಓಟದಲ್ಲಿ ಮತ್ತೆ ಕಂಚಿನ ಪದಕ ಗೆಲ್ಲುತ್ತಾರೆ. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನ 100ಮೀ. ಮತ್ತು 200ಮೀ. ಓಟಗಳೆರಡರಲ್ಲಿಯೂ ರಜತ ಪದಕ ಗೆದ್ದು ಜಗತ್ತಿನಾದ್ಯಂತ ಸುದ್ದಿಯಾಗುತ್ತಾರೆ. ಏಕೆಂದರೆ 100ಮೀ. ಓಟದಲ್ಲಿ ಇವರು ಕೂದಲೆಳೆಯಷ್ಟು ಅಂತರದಿಂದ ಚಿನ್ನದ ಪದಕ ಕಳೆದುಕೊಳ್ಳುತ್ತಾರೆ. ಮತ್ತೆ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೂ ಪಾಲ್ಗೊಂಡು 100ಮೀ. ಓಟದಲ್ಲಿ ಕಂಚಿನ ಪದಕ ಗಳಿಸುತ್ತಾರೆ.

ಹೀಗೇ ಒಲಿಂಪಿಕ್ಸ್‌ನಲ್ಲಿಯೇ ಒಟ್ಟು 9ಪದಕಗಳನ್ನು ಗೆದ್ದಿರುವ ಅಪರೂಪದ ಸಾಧನೆ ಇವರದು. ಇವರು 1998ರಲ್ಲಿ ಸ್ಲೊವೇನಿಯಾ ದೇಶಕ್ಕೆ ತೆರಳಿ ಅಲ್ಲಿಯೇ ನೆಲೆಸುತ್ತಾರೆ. 2002ರಲ್ಲಿ ಆ ದೇಶದ ಪೌರತ್ವವನ್ನೂ ಪಡೆದು, 2004ರಲ್ಲಿ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸ್ಲೊವೇನಿಯಾವನ್ನು ಪ್ರತಿನಿಧಿಸುತ್ತಾರೆ. ಅಥೆನ್ಸ್‌ನಲ್ಲಿ ಮರ್ಲಿನ್ 200ಮೀ. ಓಟದ ಸೆಮಿಫೈನಲ್ ತಲುಪಿದ್ದು ಕಡಿಮೆ ಸಾಧನೆ ಏನಲ್ಲ. ಆಗ ಅವರಿಗೆ 46 ವರ್ಷ ವಯಸ್ಸಾಗಿತ್ತು.
                                                   ಜಮೈಕಾ
ಅಮೆರಿಕ ಭೂಖಂಡದ ಪೂರ್ವದಲ್ಲಿ ಕೆರಿಬಿಯನ್ ಕಡಲ ನಡುವೆ ಇರುವ ನೂರಾರು ದ್ವೀಪಗಳಲ್ಲಿ ಜಮೈಕಾ ಕೂಡಾ ಒಂದು. ಕೇವಲ 28ಲಕ್ಷ ಜನಸಂಖ್ಯೆ ಇರುವ ಈ ದ್ವೀಪಸ್ತೋಮವು ತನ್ನ ವೇಗದ ಓಟಗಾರರ ಸಾಧನೆಯಿಂದಾಗಿಯೇ ಜಗದ್ವಿಖ್ಯಾತಿ ಪಡೆದಿದೆ. ಕ್ಯೂಬಾದಿಂದ ದಕ್ಷಿಣಕ್ಕೆ 145 ಕಿ.ಮೀ. ದೂರದಲ್ಲಿರುವ ಈ ದ್ವೀಪ ವಿಶ್ವದಾಖಲೆಯ ವೀರ ಉಸೇನ್ ಬೋಲ್ಟ್, ಒಲಿಂಪಿಕ್ `ಬಂಗಾರ~ ಡೊನಾಲ್ಡ್ ಕ್ವೇರ್, ಮರ್ಲಿನ್ ಒಟ್ಟಿ ಸೇರಿದಂತೆ ನೂರಾರು ಅಥ್ಲೀಟ್‌ಗಳ ತವರು.

ಜಮೈಕಾದಲ್ಲಿ 1936ರಲ್ಲಿ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಹುಟ್ಟು ಪಡೆಯಿತಾದರೂ, 1948ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಜಮೈಕಾ ಪಾಲ್ಗೊಂಡಿತ್ತು. ಆಗ ಈ ತಂಡದ ಆರ್ಥರ್ ವಿಂಟ್ ಪುರುಷರ 400ಮೀ. ಓಟದ ಚಿನ್ನ ಗೆದ್ದಿದ್ದರು. ಅಂದಿನಿಂದ ಈವರೆಗೆ ಜಮೈಕಾ ಒಲಿಂಪಿಕ್ಸ್‌ನಲ್ಲಿ 55 ಪದಕಗಳನ್ನು ಗೆದ್ದಿದೆ.
 
1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಪುರುಷರ ಸೈಕ್ಲಿಂಗ್‌ನ ಒಂದು ಕಿ.ಮೀ. ಟೈಮ್ ಟ್ರಯಲ್‌ನ ಪದಕ ಹೊರತು ಪಡಿಸಿದರೆ, ಉಳಿದ 54 ಪದಕಗಳೂ ಅಥ್ಲೆಟಿಕ್ಸ್‌ನಿಂದಲೇ ಬಂದಿವೆ ಎನ್ನುವುದು ಜಮೈಕಾ ಹೆಚ್ಚುಗಾರಿಕೆ.  ಈ ತಂಡ ಬೀಜಿಂಗ್‌ನಲ್ಲಿ 11 ಪದಕ ಗೆದ್ದಿತ್ತು. ಎಲ್ಲವೂ ವೇಗದ ಓಟದಿಂದಲೇ ಬಂದಿದ್ದು.
                                            ಚುಟುಕು
ಮಾಸ್ಕೊದಲ್ಲಿ 1980ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ್ನು ಅಮೆರಿಕ ಬೆಂಬಲಿತ 65 ದೇಶಗಳು ಬಹಿಷ್ಕರಿಸಿದ್ದರಿಂದ, 81ದೇಶಗಳಷ್ಟೇ ಪಾಲ್ಗೊಂಡಿದ್ದವು.
***
ಲಾಸ್‌ಏಂಜಲೀಸ್‌ನಲ್ಲಿ 1984ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ್ನು ಸೋವಿಯತ್ ಒಕ್ಕೂಟವೂ ಸೇರಿದಂತೆ 15 ದೇಶಗಳು ಬಹಿಷ್ಕರಿಸಿದ್ದವು.
***
ಒಲಿಂಪಿಕ್ಸ್ ಆಂದೋಲನವು ಎಲ್ಲಾ ದೇಶಗಳಿಗೂ ಪರಿಣಾಮಕಾರಿಯಾಗಿ ವ್ಯಾಪಿಸುವಂತೆ ಕಾರ್ಯ ನಿರ್ವಹಿಸುತ್ತಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರಾಗಿ ಜಾನ್ ಅಂಟೋನಿಯೊ ಸಮರಾಂಚ್ 1980ರಿಂದ 2001ರವರೆಗೆ ಸೇವೆ ಸಲ್ಲಿಸಿದ್ದರು.
                          ಭಾರತ... ಏನು ಎತ್ತ : ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್  ಭಾರತದ ಅಗ್ರಮಾನ್ಯ ಟೆನಿಸ್ ಆಟಗಾರ. ಇವರು ವಿಂಬಲ್ಡನ್ ಜೂನಿಯರ್ ಮತ್ತು ಯು.ಎಸ್. ಓಪನ್ ಜೂನಿಯರ್ ಪ್ರಶಸ್ತಿಗಳನ್ನು ಗೆದ್ದಿರಬಹುದು. ಎಲ್ಲಾ ಟೆನಿಸ್ ಗ್ರ್ಯಾನ್‌ಪ್ರಿ ಟೂರ್ನಿಗಳಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರಬಹುದು. ಆದರೆ 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಇವರ ಸಾಧನೆ ಅನನ್ಯ.

ಅಟ್ಲಾಂಟಾ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಇವರನ್ನು ಅಲ್ಲಿ ವಿಶ್ವದ ಆಗಿನ ಅಗ್ರಮಾನ್ಯ ಆಟಗಾರ ಆಂಡ್ರಿ ಅಗಾಸ್ಸಿ 7-6, 6-3ರಿಂದ ಸೋಲಿಸಿದರು, ನಿಜ. ಆದರೆ ಪೇಸ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕೆ.ಡಿ.ಜಾಧವ್ ಎಂಬುವವರು ಕಂಚು ಗೆದ್ದ ನಂತರ, ಲಿಯಾಂಡರ್ ಗೆದ್ದ ಪದಕವೇ ಮೊದಲ ವೈಯಕ್ತಿಕ ಸಾಧನೆಯ ಪದಕವಾಗಿತ್ತು. ಹೀಗಾಗಿ ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಅದೊಂದು ವಿಶೇಷ ಘಟನೆಯೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT