ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2012ರ ಮಾರ್ಚ್‌ಗೆ ನಿರ್ಮಾಣ ಕಾರ್ಯ ಪೂರ್ಣ

Last Updated 19 ಜನವರಿ 2011, 20:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂದಿನ ವರ್ಷದ ವೇಳೆಗೆ ದೂರು-ದುಮ್ಮಾನ ಹೇಳಿಕೊಳ್ಳಲು ಮತ್ತು ಸರ್ಕಾರಿ ಕೆಲಸ-ಕಾರ್ಯ ಪೂರೈಸಿಕೊಳ್ಳಲು ನಗರದಿಂದ ದೂರವಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಬೇಕಿಲ್ಲ. ನಗರದ ಒಂದೊಂದು ದಿಕ್ಕುಗಳಲ್ಲಿರುವ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಸುತ್ತು ಹಾಕಬೇಕಿಲ್ಲ.

ದೂರದೂರದಲ್ಲಿರುವ ಕಚೇರಿಗಳಿಗೆ ಹೋಗಿ ಅಧಿಕಾರಿಗಳನ್ನು ಕಾಯುತ್ತ ಇತರ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿಕೊಂಡು ಸಮಯ ವ್ಯಯ ಮಾಡಬೇಕಿಲ್ಲ. ಸಚಿವರ ಮತ್ತು ಸಂಸದರ ಕಚೇರಿಗಳನ್ನು ಹುಡುಕುತ್ತ ಹೋಗಬೇಕಿಲ್ಲ.

ಕಾರಣ: ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳ ಕಚೇರಿಯು ಒಂದೇ ಸೂರಿನಲ್ಲಿ ಬರಲಿವೆ. ಶಿಡ್ಲಘಟ್ಟ ರಸ್ತೆಯ ಅಣಕನೂರು ಗ್ರಾಮದ ಬಳಿ ಜಿಲ್ಲಾಧಿಕಾರಿಗಳ ಕಚೇರಿಯ ಬೃಹತ್ ಕಟ್ಟಡ ಅಸ್ತಿತ್ವಕ್ಕೆ ಬರಲಿದೆ.

ಸುಮಾರು 19 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.
 
ಚಿಕ್ಕಬಳ್ಳಾಪುರದ ಹಳೆಯ ಬಸ್ ನಿಲ್ದಾಣದಿಂದ ಮೂರು ಕಿ.ಮೀ ದೂರದಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು, ಶೇ. 20ರಷ್ಟು ಕಾರ್ಯ ಪೂರ್ಣಗೊಂಡಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗಳಿಗಿಂತ ಭಿನ್ನವಾಗಿ ನಿರ್ಮಿಸುವ ಉದ್ದೇಶ ಹೊಂದಿರುವ ವಿನ್ಯಾಸಕಾರರು ಮತ್ತು ನಿರ್ಮಾಣಕಾರರು ಕಟ್ಟಡಕ್ಕೆ ಬೇರೆಯದ್ದೇ ರೂಪ ನೀಡುವ ಪ್ರಯತ್ನ ನಡೆಸಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದ್ದು, ನಿರ್ಮಾಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಲು ನಿರ್ಮಾಣಕಾರರು ಪಣತೊಟ್ಟಿದ್ದಾರೆ.

ನೆಲ ಮಹಡಿ ಸೇರಿದಂತೆ ಒಟ್ಟು ಮೂರು ಮಹಡಿಗಳ ಈ ಕಟ್ಟಡದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳ ಜೊತೆಗೆ ಸಭಾಂಗಣಗಳನ್ನು ಕೂಡ ಒಳಗೊಳ್ಳಲಿದೆ. ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ತಲಾ ಒಂದೊಂದು ಸಭಾಂಗಣಗಳಿದ್ದರೆ, ನೆಲ ಮಹಡಿ ಮತ್ತು ಎರಡನೇ ಮಹಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ದೇವಿಪ್ರಸಾದ್ ಕನ್ಸ್‌ಟ್ರಕ್ಷನ್ಸ್ ಸಂಸ್ಥೆ ವಹಿಸಿಕೊಂಡಿದ್ದು, ನಿರ್ಮಾಣ ಕಾಮಗಾರಿ ನಡೆದಿದೆ.

‘ಒಟ್ಟು 19 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. 18 ತಿಂಗಳ ಅವಧಿಯಲ್ಲಿ ನಿರ್ಮಿಸಲು ಕಾಲಾವಕಾಶ ನೀಡಲಾಗಿದೆ. ಮುಂದಿನ ವರ್ಷ ಮಾರ್ಚ್ 26ಕ್ಕೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಿದ್ದೇವೆ. ಸಣ್ಣಪುಟ್ಟ ಅಡಚಣೆಗಳು ಎದುರಾದರೂ ನಿರ್ಮಾಣ ಕಾರ್ಯದ ನಿಗದಿತ ಗುರಿಯನ್ನು ಮುಟ್ಟುವ ವಿಶ್ವಾಸವಿದೆ’ ಎಂದು ನಿರ್ಮಾಣ ಯೋಜನಾ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಷ್ಟ್ರಪತಿ ಭವನ ಮಾದರಿಯ ಜಿಲ್ಲಾಧಿಕಾರಿಗಳ ಕಚೇರಿ
ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿಗೆ ನೂತನ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ಸಾರ್ವಜನಿಕರು ಒಂದೇ ಸೂರಿನಲ್ಲಿ ವಿವಿಧ ಇಲಾಖೆಗಳ ಕಚೇರಿಗಳನ್ನು ಸಂಪರ್ಕಿಸಬಹುದು. ಈ ಉದ್ದೇಶದಿಂದ ಬೃಹತ್ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದರು.

ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿರುವ ಕಚೇರಿಗಳು:
ನೆಲಮಹಡಿ: ಜಿಲ್ಲಾ ಪಂಚಾಯಿತಿ ಮತ್ತು ಸಂಬಂಧಪಟ್ಟ ಕಚೇರಿಗಳು, ಅತಿಗಣ್ಯರ ವಿಶ್ರಾಂತಿ ಕೊಠಡಿ, ಕಾರ್ಮಿಕ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ನಗರ ಸರ್ವೇಕ್ಷಣಾ ಇಲಾಖೆ, ಜಿಲ್ಲಾ ಖಜಾನೆ, ವಾರ್ತಾ ಇಲಾಖೆ, ಬ್ಯಾಂಕ್, ಅಂಚೆ ಕಚೇರಿ, ಹವಾಮಾನ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕಿರು ಸಭಾಂಗಣ.

ಮೊದಲನೇ ಮಹಡಿ: ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಸಂಬಂಧಪಟ್ಟ ಕಚೇರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಸಂಸದರ ಕಚೇರಿ, ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ, ವಿಕೋಪ ನಿರ್ವಹಣಾ ಘಟಕ, ಹಿರಿಯರ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚುನಾವಣಾ ಕಚೇರಿ, ವಾಣಿಜ್ಯ ಮತ್ತು ಕೈಗಾರಿಕೆಗಳ ಕಚೇರಿ, ಸಾಂಖ್ಯಿಕ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಗ್ರಾಹಕರ ಪರಿಹಾರ ವೇದಿಕೆ.

ಎರಡನೇ ಮಹಡಿ: ಉದ್ಯೋಗ ಮತ್ತು ತರಬೇತಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಕಾರ ಸಂಘ, ಪಶು ಸಂಗೋಪನೆ ಇಲಾಖೆ, ಗಣಿಗಾರಿಕೆ ಮತ್ತು ಭೂ ವಿಜ್ಞಾನ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಣ್ಣ ಉಳಿತಾಯ ಇಲಾಖೆ, ತೋಟಗಾರಿಕೆ, ರೇಷ್ಮೆ, ಕರ್ನಾಟಕ ಗೃಹ ಮಂಡಳಿ ಮತ್ತು ಸಮಾಜ ಕಲ್ಯಾಣ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT