ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2012ರಲ್ಲೇ ಮಧ್ಯಂತರ ಚುನಾವಣೆ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಸಭೆಗೆ 2012ರಲ್ಲೇ ಮಧ್ಯಂತರ ಚುನಾವಣೆ ನಡೆಯುವುದು ಖಚಿತವಾಗಿದ್ದು, ಕರ್ನಾಟಕದಲ್ಲಿನ ರಾಜಕೀಯ ಅಸ್ಥಿರತೆಗೆ ಈ ವರ್ಷ ತೆರೆ ಬೀಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ವಿವಿಧ ಮುಖಂಡರ ಜೊತೆ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಮೂರೂವರೆ ವರ್ಷಗಳಿಂದ ರಾಜ್ಯವನ್ನು ಕಾಡುತ್ತಿರುವ ರಾಜಕೀಯ ಅಸ್ಥಿರತೆ 2012ರಲ್ಲಿ ಅಂತ್ಯವಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಕುರಿತು ಸಾಮಾನ್ಯ ಜನರಲ್ಲೂ ಸಂಶಯ ವ್ಯಕ್ತವಾಗುತ್ತಿದೆ. ಈ ವರ್ಷ ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ~ ಎಂದರು. ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಸಿದ್ಧತೆ ಆರಂಭಿಸಿದೆ. ಮೊದಲ ಹಂತದಲ್ಲಿ 150 ವಿಧಾನಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಬಿಜೆಪಿಗೆ ವಿದಾಯ ಹೇಳಲು ಜನತೆ ಸಿದ್ಧರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 15,000 ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ನಡೆದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆ ಆರ್ಥಿಕ ದಿವಾಳಿತನದತ್ತ ಸಾಗುತ್ತಿದೆ ಎಂದು ಅಲ್ಲಿನ ಆಯುಕ್ತರೇ ಪ್ರಕಟಿಸಿದರೂ ಸರ್ಕಾರ ಈವರೆಗೂ ಸ್ಪಂದಿಸಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಜನವರಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ನಿಯೋಗ ತೆರಳಲು ಸಿದ್ಧ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಒತ್ತಾಯಿಸಿದ ತಕ್ಷಣ ಏನೂ ಆಗುವುದಿಲ್ಲ. ಬೆಳಗಾವಿ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮ. ಈ ವಿಷಯದಲ್ಲಿ ನಿಯೋಗವೊಂದನ್ನು ಕರೆದೊಯ್ದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೇಲೆ ಒತ್ತಡ ಹೇರಲು ರಾಜ್ಯ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒತ್ತಡ ಚಳವಳಿ: ಬಿಜೆಪಿ ಸರ್ಕಾರ ಕಳೆದ ಮೂರೂವರೆ ವರ್ಷಗಳಿಂದ ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ, ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ನಿವಾರಿಸುವಂತೆ ಒತ್ತಡ ಹೇರುವ ಕೆಲಸವನ್ನು ಪಕ್ಷ ಇದೇ 15ರಿಂದ ಮಾಡಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT