2013 ನಾಲ್ಕು ಮೀಟರ್ ಕಾರಿನ ವರ್ಷ

7

2013 ನಾಲ್ಕು ಮೀಟರ್ ಕಾರಿನ ವರ್ಷ

Published:
Updated:
2013 ನಾಲ್ಕು ಮೀಟರ್ ಕಾರಿನ ವರ್ಷ

ಭಾರತದ ಕಾರು ಮಾರುಕಟ್ಟೆ ಕಳೆದ ಮೂರು ವರ್ಷಗಳಿಗೆ ಹೋಲಿಸಿದಲ್ಲಿ 2012ರಿಂದ ಈಚೆಗೆ ಇಳಿಕೆಯ ಹಾದಿಯಲ್ಲಿ ಸಾಗುತ್ತಿದೆ. ಹೀಗಾಗಿ 2013ರಲ್ಲಿ ಇದರ ಪ್ರಗತಿ ಕೇವಲ ಶೇ. 1ರಿಂದ 3ರಷ್ಟು ಮಾತ್ರ ಎಂದು ಮಾರುಕಟ್ಟೆ ಪಂಡಿತರು ಲೆಕ್ಕ ಹಾಕಿದ್ದಾರೆ.



ಇಂಧನ ಬೆಲೆ, ಕಾರು ಸಾಲದ ಮೇಲಿನ ಬಡ್ಡಿ ದರ ಹಾಗೂ ಬಿಡಿ ಭಾಗಗಳು ದುಬಾರಿಯಾದ್ದರಿಂದ ಕಾರುಗಳ ಬೆಲೆಯಲ್ಲಿ ಏರಿಕೆ ಇತ್ಯಾದಿಗಳಿಂದಾಗಿ ಹೆಚ್ಚು ಸಂಖ್ಯೆಯ ಕಾರುಗಳು ರಸ್ತೆಗೆ ಇಳಿಯದಿದ್ದರೂ, ಮಾರುಕಟ್ಟೆಗೆ ಪ್ರವೇಶಿಸಲಿರುವ ಹೊಸ ಬಗೆಯ ಕಾರುಗಳು ಈ ವರ್ಷದ ಕಾರು ಖರೀದಿದಾರರನ್ನು ಬಹುವಾಗಿ ಆಕರ್ಷಿಸಲಿದೆ.

ಎಸ್‌ಯುವಿ ಹಾಗೂ ಎಂಪಿವಿ ಕಾರುಬಾರು

ಕಾರು ಮಾರಾಟ ಕುಸಿತ ಕಂಡರೂ ಅದನ್ನು ಸುಳ್ಳಾಗಿಸುವಂತೆ ಏರಿಕೆಯ ಹಾದಿಯಲ್ಲಿರುವುದು ಎಸ್‌ಯುವಿ/ ಎಂಪಿವಿಗಳು. ಈ ವರ್ಷವೂ ಈ ಬಗೆಯ ಕಾರುಗಳ ಮಾರಾಟ ಪ್ರಗತಿ ಶೇ 50ರಷ್ಟಿರಲಿದೆ. ಈ ಮೂಲಕ ಭಾರತದಲ್ಲಿ ಎಸ್‌ಯುವಿ/ ಎಂಪಿವಿ ಪರ್ವ ಮುಂದುವರಿಯಲಿದೆ. ಕೇವಲ ಪಟ್ಟಣ ಪ್ರದೇಶದವರು ಮಾತ್ರವಲ್ಲದೆ ಇದೀಗ ಗ್ರಾಮೀಣ ಭಾಗದ ಕಾರು ಕೊಳ್ಳುಗರೂ ಸಹ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಸ್‌ನತ್ತ ಆಕರ್ಷಿತರಾಗುತ್ತಿರುವುದು ವಿಶೇಷ. ಅಧಿಕ ಗ್ರೌಂಡ್ ಕ್ಲಿಯರೆನ್ಸ್, ಅತ್ಯುತ್ತಮ ರಸ್ತೆ ಹಿಡಿತ ಹಾಗೂ ಇತರ ಮಾದರಿಯ ಕಾರು (ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್)ಗಳಿಗೆ ಹೋಲಿಸಿದಲ್ಲಿ ತುಸು ಹೆಚ್ಚು ಸುರಕ್ಷಿತ ಎಂಬ ಕೆಲವು ಕಾರಣಗಳು ಇವುಗಳ ಮಾರಾಟ ಪ್ರಗತಿಗೆ ಕಾರಣ.



ರಿನಾಲ್ಟ್ ಡಸ್ಟರ್, ಮಾರುತಿ ಎರ್ಟಿಗ ಹಾಗೂ ಮಹೀಂದ್ರ ಕ್ವಾಂಟೊ ಎಂಬ ಕಡಿಮೆ ಬೆಲೆಯ ಯುಟಿಲಿಟಿ ವಾಹನಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಈ ವಿಭಾಗದ ಕಾರುಗಳ ಮಾರಾಟದಲ್ಲಿ ಸಾಕಷ್ಟು ಪ್ರಗತಿ ಕಂಡುಬರುತ್ತಿದೆ. ಇದೇ ಪ್ರಗತಿ 2013ರಲ್ಲೂ ಮುಂದುವರಿಯಲಿದೆ. ಈ ವರ್ಷ ಫೆಬ್ರುವರಿಯಲ್ಲಿ ಫೋರ್ಡ್ ಎಕೊಸ್ಪೋರ್ಟ್ಸ್ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಲಿದೆ. ಜತೆಗೆ ನಿಸ್ಸಾನ್ ಕೂಡಾ ಡಸ್ಟರ್ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ (ನಿಸ್ಸಾನ್ ಹಾಗೂ ರಿನಾಲ್ಟ್ ಕಂಪೆನಿಗಳು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ಪರಸ್ಪರ ಹಂಚಿಕೊಳ್ಳುವುದರ ಒಪ್ಪಂದದಲ್ಲಿ ಕಾರ್ಯನಿರ್ವಹಿಸುತ್ತಿವೆ). ಜತೆಗೆ ಮಾರುತಿ ತನ್ನ ಬಹು ನಿರೀಕ್ಷಿತ ಎಸ್‌ಯುವಿ ಎಕ್ಸ್ ಆಲ್ಫ  ಕಾರಿನ ಬಿಡುಗಡೆ ಈ ವರ್ಷದ ಅಂತ್ಯದ ವೇಳೆಗೆ ಆಗಬಹುದಾಗಿದೆ. ಇದರೊಂದಿಗೆ ಹ್ಯುಂಡೈ ಸಾಂಟಾ ಫೇ, ಹೊಸ ಮಾದರಿಯ ಹೊಂಡಾ ಸಿಆರ್‌ವಿ ಹಾಗೂ ಮಹೀಂದ್ರಾ ಕಂಪೆನಿಯ ಸಾಂಗ್ಯೊಂಗ್ ಕೊರ್ನಾಡೊ ಕೂಡಾ ಮಾರುಕಟ್ಟೆ ಪ್ರವೇಶಿಸಲಿದೆ. ಇದರೊಂದಿಗೆ ಟಾಟಾ ಕೂಡಾ ಮಾರುತಿ ಎರ್ಟಿಗ ಹಾಗೂ ಮಹೀಂದ್ರಾ ಕ್ವಾಂಟೊಗೆ ಸ್ಪರ್ಧೆಯೊಡ್ಡಲು ಎಂಪಿವಿ ಒಂದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

`ಕೈಗೆಟಕುವ ಬೆಲೆ'ಗೆ ವಿಲಾಸಿ ಕಾರುಗಳು

ಭಾರತದಲ್ಲಿ ಭಾರೀ ಅಲ್ಲದಿದ್ದರೂ ತಕ್ಕಮಟ್ಟಿನ ಮಾರಾಟ ಪ್ರಗತಿ ದಾಖಲಿಸಿದ ಮತ್ತೊಂದು ವಿಭಾಗವೆಂದರೆ ವಿಲಾಸಿ ಕಾರುಗಳು. ಮರ್ಸಿಡೀಸ್ ಬೆಂಜ್, ಬಿಎಂಡಬ್ಲೂ ಹಾಗೂ ಆಡಿ ಕಂಪೆನಿಯ ಕಾರುಗಳು ಇದೀಗ ದುಬಾರಿ ಕಾರುಗಳ ತಯಾರಿಕೆ ಮಾತ್ರವಲ್ಲ 20 ಲಕ್ಷ ರೂಪಾಯಿಗಳಿಗೆ ಲಭ್ಯವಾಗುವಂತೆ ಆರಂಭಿಕ ಹಂತದ ಕಾರುಗಳ ತಯಾರಿಕೆಯತ್ತ ತಮ್ಮ ಚಿತ್ತ ಹರಿಸಿವೆ. ಮರ್ಸಿಡೀಸ್ ಬೆಂಜ್ ತನ್ನ ಎ-ಕ್ಲಾಸ್ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಮೂಲಕ ಮತ್ತಷ್ಟು ಭಾರತೀಯರನ್ನು ಸೆಳೆಯುವ ಪ್ರಯತ್ನ ನಡೆಸಿದೆ.



ಇದರೊಂದಿಗೆ ಬಿಎಂಡಬ್ಲೂ ತನ್ನ 3 ಸಿರೀಸ್ ಹಾಗೂ ಎಕ್ಸ್1 ನಂತರ ಕಡಿಮೆ ಬೆಲೆಯ ಹೊಸ ಬಗೆಯ 1-ಸಿರೀಸ್ ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ವಿಲಾಸಿ ಕಾರು ತಯಾರಿಕಾ ಕಂಪೆನಿ ಆಡಿ ಕೂಡಾ ಎ3 ಶ್ರೇಣಿಯ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಲಿದೆ. ಇತ್ತೀಚೆಗೆ ಮರ್ಸಿಡೀಸ್ ಬಿ-ಕ್ಲಾಸ್ ಸ್ಪೋರ್ಟ್ಸ್ ಟೂರರ್ ಎಂಬ ಸಣ್ಣ ಕಾರನ್ನು 21.5 ಲಕ್ಷ ರೂಪಾಯಿಗೆ ನೀಡುವ ಮೂಲಕ ಅತಿ ಕಡಿಮೆ ಬೆಲೆಗೆ ಮರ್ಸಿಡೀಸ್ ಲಭ್ಯವಾಗುವಂತೆ ಮಾಡಿತ್ತು. ಈ ಮೂಲಕ ವಿಲಾಸಿ ಕಾರು ತಯಾರಕರು ಕಡಿಮೆ ಬೆಲೆಯ ಕಾರುಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ತಮ್ಮ ಗ್ರಾಹಕರ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿವೆ.

ನಾಲ್ಕು ಮೀಟರ್ ಉದ್ದದ ಸಣ್ಣ ಕಾರು

ನಾಲ್ಕು ಮೀಟರ್ ಉದ್ದನೆಯ ಕಾರುಗಳಿಗೆ ಅಬಕಾರಿ ತೆರಿಗೆ ಕಡಿತಗೊಳಿಸಿದ್ದರಿಂದ ಉತ್ತೇಜಿತಗೊಂಡಿರುವ ಕಾರು ತಯಾರಕರು 2013ರಲ್ಲಿ ಈ ವಿಭಾಗದ ಕಾರುಗಳ ತಯಾರಿಕೆಯತ್ತ ಹೆಚ್ಚು ಉತ್ಸುಕರಾಗಿದ್ದಾರೆ. ನಾಲ್ಕು ಮೀಟರ್ ಅಥವಾ ಅದಕ್ಕಿಂತ ಕಡಿಮೆ ಉದ್ದವಿರುವ 1.2 ಲೀಟರ್ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ ಪೆಟ್ರೋಲ್ ಕಾರು ಮತ್ತು 1.5 ಲೀ. ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮೇಲೆ ಶೇ. 24ರಷ್ಟು ತೆರಿಗೆಯ ಬದಲಾಗಿ ಶೇ. 12ಕ್ಕೆ ಇಳಿಸಿರುವುದೇ ಇದಕ್ಕೆ ಕಾರಣ. ಈ ವಿಭಾಗದಲ್ಲಿ ಇದೀಗ ಭಾರೀ ಕುತೂಹಲ ಹುಟ್ಟಿಸಿರುವುದು ಹೊಂಡಾ ಅಮೇಜ್. ಏಪ್ರಿಲ್ ತಿಂಗಳ ವೇಳೆಗೆ ಭಾರತದ ರಸ್ತೆಗಿಳಿಯಲಿರುವ ಅಮೇಜ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಜತೆಗೆ ಮಹೀಂದ್ರಾ ಸುಧಾರಿತ ವೆರಿಟೊ ಕಾರನ್ನು ನಾಲ್ಕು ಮೀಟರ್ ಉದ್ದಕ್ಕೆ ಇಳಿಸುವುದರ ಜತೆಗೆ ಟಾಟಾ ಇಂಡಿಗೊ ಇಸಿಎಸ್ ಹಾಗೂ ಮಾರುತಿ ಡಿಸೈರ್‌ಗಿಂತಲೂ ಕಡಿಮೆ ಬೆಲೆ ನಿಗದಿಪಡಿಸುವ ಮೂಲಕ ಸ್ಪರ್ಧೆಗೆ ಸಿದ್ಧಗೊಂಡಿದೆ.



ಹೊಂಡಾ ಅಮೇಜ್‌ನ ಸ್ಪರ್ಧೆಯನ್ನು ಪ್ರಭಲವಾಗಿ ಎದುರಿಸುವ ಸಲುವಾಗಿ ಮಾರುತಿ ಕೂಡಾ ತನ್ನ ಡಿಸೈರ್‌ಗೆ ನೂತನ ಸ್ಪರ್ಶ ನೀಡಲು ಸಜ್ಜಾಗಿದೆ. ಜತೆಗೆ ಟಾಟಾ ತನ್ನ ಮಾಂಜಾ ಕಾರನ್ನು ನಾಲ್ಕು ಮೀಟರ್ ಉದ್ದಕ್ಕೆ ಇಳಿಸಿ ಜತೆಗೆ ಇಂಡಿಕಾ ಸಣ್ಣಕಾರನ್ನು ನಾಲ್ಕು ಮೀಟರ್‌ಗಳಿಗೆ ವಿಸ್ತರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸುದ್ದಿ ಇದೆ.

ಡೀಸೆಲ್ ಹ್ಯಾಚ್‌ಬ್ಯಾಕ್

ಡೀಸೆಲ್ ಬೆಲೆ ಹಂತಹಂತವಾಗಿ ಒಟ್ಟು ಹತ್ತು ರೂಪಾಯಿ ಏರಿಸುವ ಕುರಿತು ಕೇಂದ್ರ ಇಂಧನ ಇಲಾಖೆ ಪ್ರಸ್ತಾವನೆ ಸಲ್ಲಿಸಿದರೂ 2013ರಲ್ಲಿ ಡೀಸೆಲ್ ಕಾರುಗಳೇ ಅತಿ ಹೆಚ್ಚು ಮಾರಾಟವಾಗಬಹುದಾದ ಕಾರು ಎಂದು ಪಂಡಿತರು ಲೆಕ್ಕ ಹಾಕಿದ್ದಾರೆ. ಕಳೆದ ವರ್ಷ ಒಟ್ಟಾರೆ ಶೇ 47ರಷ್ಟು ಡೀಸೆಲ್ ಕಾರುಗಳು ಮಾರುಕಟ್ಟೆ ಪಾಲಾದರೆ, ಈ ವರ್ಷ ಇದು ಶೇ 58ಕ್ಕೆ ಏರಬಹುದು ಎಂಬ ಅಂದಾಜಿದೆ. ಇದಕ್ಕೆ ಬಹು ಮುಖ್ಯ ಕಾರಣ, ಡೀಸೆಲ್ ಕಾರುಗಳ ಬೇಡಿಕೆ ದಿನೇ ದಿನೇ ಏರುತ್ತಿರುವುದರಿಂದ ಕಡಿಮೆ ಬೆಲೆಯ ಆರಂಭಿಕ ಶ್ರೇಣಿ ಕಾರುಗಳಲ್ಲೂ ಡೀಸೆಲ್ ಎಂಜಿನ್ ಅಳವಡಿಸುವ ಕುರಿತು ಕಾರು ತಯಾರಿಕಾ ಕಂಪೆನಿಗಳು ಯೋಜನೆ ರೂಪಿಸಿರುವುದು.



ಸದ್ಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಡೀಸೆಲ್ ಕಾರುಗಳೆಂದರೆ ಷವರ್ಲೆ ಬೀಟ್ ಹಾಗೂ ಟಾಟಾ ಇಂಡಿಕಾ. ಇದೇ ಬೆಲೆಗೆ ಡೀಸೆಲ್ ಕಾರುಗಳನ್ನು ನೀಡಲು ಇತರ ಕಂಪೆನಿಗಳೂ ತುದಿಗಾಲಿನಲ್ಲಿ ನಿಂತಿವೆ. ಮಾರುತಿ ಕಂಪೆನಿಯು 1 ಲೀ. ಸಾಮರ್ಥ್ಯದ ಮೂರು ಸಿಲೆಂಡರ್ ಡೀಸೆಲ್ ಎಂಜಿನ್ ಅನ್ನು ತನ್ನ `ವ್ಯಾಗನ್-ಆರ್' ನಲ್ಲಿ ಅಳವಡಿಸುವುದರ ಜತೆಗೆ ಆರಂಭಿಕ ಶ್ರೇಣಿಯ ಇತರ ಎರಡು ಕಾರುಗಳಲ್ಲೂ ಇದೇ ಪ್ರಯೋಗಕ್ಕೆ ಮುಂದಾಗಿದೆ. ಜತೆಗೆ ಯುಟಿಲಿಟಿ ವಾಹನಗಳಲ್ಲೂ ಇಂಥದ್ದೇ ಪ್ರಯೋಗಕ್ಕೆ ಸಜ್ಜಾಗಿದೆ. ಇದರೊಂದಿಗೆ ಹ್ಯುಂಡೈ ಕಂಪೆನಿಯೂ ತನ್ನ ಐ10 ಸಣ್ಣಕಾರಿಗೆ ಹೊಸ ಸ್ಪರ್ಶ ನೀಡುವುದರ ಜತೆಗೆ 1.1ಲೀ. ಸಾಮರ್ಥ್ಯದ ಡೀಸೆಲ್ ಎಂಜಿನ್ ಕೂರಿಸಲಿದೆ. ಟಾಟಾ ಕಂಪೆನಿಯೂ ಸಹ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ನ್ಯಾನೊ ಕಾರಿಗೆ ಮೂರು ಸಿಲೆಂಡರ್ ಡೀಸೆಲ್ ಎಂಜಿನ್ ಅಳವಡಿಸುವುದರ ಕುರಿತು ಪ್ರಯೋಗ ನಡೆಸಿದೆ. ಆದರೆ ಇದರ ಬಿಡುಗಡೆಯ ದಿನಾಂಕವನ್ನು ಕಂಪೆನಿ ಇನ್ನೂ ಘೋಷಿಸಬೇಕಿದೆ. ಹೊಂಡಾ ಕೂಡಾ ಅಮೇಜ್‌ಗೆ ಅಳವಡಿಸಿದ ಡೀಸೆಲ್ ಎಂಜಿನ್ ಅನ್ನು ತನ್ನ ಸಣ್ಣ ಕಾರಾದ ಬ್ರಿಯೋ, ಜಾಸ್ ಹಾಗೂ ಸಿಟಿಗೂ ಅಳವಡಿಸುವತ್ತ ಚಿಂತನೆ ನಡೆಸಿದೆ.

ಪರ್ಯಾಯ ಇಂಧನ ವಾಹನ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಮುಖಿಯಾಗುತ್ತಿರುವ ಈ ಹಂತದಲ್ಲಿ ಪರ್ಯಾಯ ಇಂಧನದಿಂದ ಚಲಿಸುವ ಕಾರುಗಳ ಅಭಿವೃದ್ಧಿಯಲ್ಲಿ ಕೆಲವು ಕಂಪೆನಿಗಳು ತಲ್ಲೆನವಾಗಿವೆ. ಹೊಂಡಾ ಈಗಾಗಲೇ ತನ್ನ ಸಿಟಿ ಮಾದರಿಯ ಕಾರುಗಳಲ್ಲಿ ಸಿಎನ್‌ಜಿ ಎಂಜಿನ್ ಅಳವಡಿಸಿದೆ. ಇದರ ಜತೆಗೆ ತನ್ನ ಇತರ ಮಾದರಿಯ ಕಾರುಗಳಲ್ಲೂ ಸಿಎನ್‌ಜಿ ಎಂಜಿನ್ ಅಳವಡಿಸುವುದಾಗಿ ಘೋಷಿಸಿದೆ. ಹ್ಯುಂಡೈ ತನ್ನ ಐ10 ಹಾಗೂ ಇಯಾನ್ ಮಾದರಿ ಕಾರುಗಳಿಗೆ ಎಲ್‌ಪಿಜಿ ಕಿಟ್ ಅಳವಡಿಸುವುದಾಗಿ ಹೇಳಿದೆ. ಮಾರುತಿ ಈಗಾಗಲೇ ತನ್ನ ಆಲ್ಟೊ ಹಾಗೂ ವ್ಯಾಗನ್ ಆರ್ ಮಾದರಿಯ ಕಾರುಗಳಲ್ಲಿ ಸಿಎನ್‌ಜಿ ಅಳವಡಿಸಿಕೊಂಡಿದೆ.



ಇದರೊಂದಿಗೆ ರೇವಾ ಕಂಪೆನಿಯನ್ನು ಖರೀದಿಸಿದ ಮೇಲೆ ಮಹೀಂದ್ರಾ ಇ20 ಮಾದರಿಯ ಬ್ಯಾಟರಿ ಚಾಲಿತ ಕಾರನ್ನು ಬಿಡುಗಡೆ ಮಾಡಲಿದೆ. ಹೊಸ ನೋಟ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಇದು ಪರ್ಯಾಯ ಇಂಧನ ವಾಹನಗಳ ಅಭಿವೃದ್ಧಿಗೆ ಹೊಸ ಮೈಲಿಗಲ್ಲು.

 







 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry