ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2013ರ ಬಸವ ಜಯಂತಿ ರಾಷ್ಟ್ರವ್ಯಾಪಿಯಾಗಲಿ

Last Updated 8 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಗದಗ: 2013ರ ಬಸವ ಜಯಂತಿಯನ್ನು ರಾಷ್ಟ್ರವ್ಯಾಪಿ ಆಚರಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಗದುಗಿನಲ್ಲಿ ಸೋಮವಾರ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ ‘ಶಿವಾನುಭವ; ವಿಚಾರ-ಆಚಾರ-ಪ್ರಚಾರ’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂದಿನ ಎರಡು ವರ್ಷಕ್ಕೆ ಬಸವ ಜಯಂತಿ ಆಚರಣೆ ಪ್ರಾರಂಭವಾಗಿ ನೂರು ವರ್ಷಗಳು ಆಗುತ್ತವೆ. ಆದ್ದರಿಂದ ಇಡೀ ರಾಷ್ಟ್ರದಾದ್ಯಂತ ಬಸವ ಜಯಂತಿಯನ್ನು ಆಚರಣೆ ಮಾಡಿದರೆ ಶತಮಾನೋತ್ಸವಕ್ಕೊಂದು ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯ ಪ್ರವೃತ್ತವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಬಸವ ಸಮಿತಿ ಹಾಗೂ ಎಲ್ಲ ಬಸವ ತತ್ವ ಸಂಘಟನೆಗಳು ಒತ್ತಡ ತರಬೇಕು ಎಂದು ಅವರು ತಿಳಿಸಿದರು.

ಬಸವ ತತ್ವಗಳು ಸಮರ್ಪಕವಾಗಿ ಪ್ರಚಾರವಾಗಬೇಕಾದರೆ ನಾಡಿನಲ್ಲಿ ಇರುವ ಎಲ್ಲ ಬಸವ ಸಂಘಟನೆಗಳು ಒಂದೇ ವೇದಿಕೆಯಡಿಯಲ್ಲಿ ಬರುವ ಅವಶ್ಯಕತೆ ಇದೆ. ಒಂದು ಒಕ್ಕೂಟವನ್ನು ರಚನೆ ಮಾಡಿಕೊಂಡು ವರ್ಷಕ್ಕೊಂದು ಮಹಾ ಅಧಿವೇಶನ ನಡೆಸುವಂತಾಗಬೇಕು. ಆ ಸಮಾರಂಭದಲ್ಲಿ ಉಪನ್ಯಾಸಕ್ಕಿಂತ ಹೆಚ್ಚಾಗಿ ಚರ್ಚಾ ಗೋಷ್ಠಿಗಳು ಆಗಬೇಕು. ಯಾರನ್ನು ಮೂದಲಿಸದೆ, ನಿಂದಿಸದೇ 12ನೇ ಶತಮಾನದ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಅಧಿವೇಶನವನ್ನು ಮಾದರಿಯಾಗಿ ಇಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳ ಬೇಕು ಎಂದು ಜತ್ತಿ ಅವರು ತಮ್ಮ ವಿಚಾರಧಾರೆಯನ್ನು ಪ್ರತಿಪಾದಿಸಿದರು.

ಬಸವಣ್ಣನನ್ನು ಎಲ್ಲರೂ ಒಂದೊಂದು ರೀತಿ ಕರೆದಿದ್ದಾರೆ. ಸಾಹಿತಿ, ವಚನಕಾರ, ಜಗಜ್ಯೋತಿ, ಲೋಕೋದ್ಧಾರಕ, ಮಹಾಮಹಿಮ ಎಂದೆಲ್ಲ ಬಣ್ಣಿಸಿದ್ದಾರೆ. ಆದರೆ ರಾಷ್ಟ್ರಕವಿ ಕುವೆಂಪು ಮಾತ್ರ ಬಸವಣ್ಣನನ್ನು ‘ಆಧ್ಯಾತ್ಮ ಕ್ರಾಂತಿವೀರ’ ಎಂದು ಬಣ್ಣಿಸಿದ್ದಾರೆ. ಕುವೆಂಪು ಅವರ ಈ ವರ್ಣನೆಯನ್ನು ಬಸವಣ್ಣನನ್ನು ಅನುಸರಿಸುವ ಎಲ್ಲರೂ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಡಾ. ಮಹಾಂತ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಡಾ. ಎಸ್.ಶಿವರಾಜಪ್ಪ, ಡಾ.ಸಿ.ಎಂ.ಕುಂದಗೋಳ, ಸಿದ್ದರಾಮಪ್ಪ ಬಾಲಪ್ಪಗೋಳ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT