ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014ಕ್ಕೆ ಸಂಭ್ರಮ, ಸಡಗರದ ಸ್ವಾಗತ

ಹೊಸ ಕನಸು, ನಿರೀಕ್ಷೆ, ಆಶಯದೊಂದಿಗೆ ಶುಭಾಶಯ ವಿನಿಮಯ...
Last Updated 1 ಜನವರಿ 2014, 6:02 IST
ಅಕ್ಷರ ಗಾತ್ರ

ದಾವಣಗೆರೆ: ಹೊಸ ವರ್ಷದ ಶುಭಾಶಯಗಳು...
ನಗರದಲ್ಲಿ ಮಧ್ಯರಾತ್ರಿ ಕೇಳಿ ಬಂದ, ಹರಿದಾಡಿದ ಹಾಗೂ ವಿನಿಮಯವಾದ ಆಶಯವಿದು. ಇದರೊಂದಿಗೆ ನಗರ ಹಾಗೂ ಜಿಲ್ಲೆಯಲ್ಲಿ ಹೊಸ ವರ್ಷ 2014ನ್ನು ಹೊಸ ಕನಸುಗಳು, ನಿರೀಕ್ಷೆ, ಆಶಯಗಳೊಂದಿಗೆ ಸಂಭ್ರಮ, ಸಡಗರದಿಂದ ಸ್ವಾಗತಿಸಲಾಯಿತು.

ಗಡಿಯಾರದ ಮುಳ್ಳು ಮಧ್ಯರಾತ್ರಿ 12ಕ್ಕೆ ಕಾಲಿಡುತ್ತಿದ್ದಂತೆಯೇ ಹಾಗೂ ಮಂಗಳವಾರ ಮುಗಿದು ಬುಧವಾರಕ್ಕೆ ಜಾರುತ್ತಿದ್ದಂತೆಯೇ, ಪಟಾಕಿಗಳನ್ನು ಸಿಡಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು. ಸಿಳ್ಳೆ, ಕೇಕೆ, ಚಪ್ಪಾಳೆ, ಹರ್ಷೋದ್ಗಾರಗಳು ಮುಗಿಲು ಮುಟ್ಟಿದವು.

ಬಹಳಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದ ‘ಆ’ ಸಮಯ ಬರುತ್ತಿದ್ದಂತೆಯೇ ಯುವಕರು ಅಲ್ಲಲ್ಲಿ ಗುಂಪು ಗುಂಪಾಗಿ ಸೇರಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಡಾವಣೆಗಳಲ್ಲಿ, ಮಹಿಳೆಯರು ಮತ್ತು ಮಕ್ಕಳು ನೆರೆ–ಹೊರೆಯವರಿಗೆ ಶುಭಾಶಯ ಕೋರುತ್ತಿದ್ದುದು ಸಾಮಾನ್ಯವಾಗಿತ್ತು.

ಮೊಬೈಲ್‌ಗಳಲ್ಲಿ ಎಸ್‌ಎಂಎಸ್‌ಗಳು ಹರಿದಾಡತೊಡಗಿದವು. ಒಮ್ಮೆಲೆ ಭಾರಿ ಪ್ರಮಾಣದಲ್ಲಿ ಸಂದೇಶಗಳು ರವಾನೆ ಆಗುತ್ತಿದ್ದುದ್ದರಿಂದ ನೆಟ್‌ವರ್ಕ್ ‘ಜಾಮ್’ ಆಗುತ್ತಿತ್ತು. ಇದರಿಂದಾಗಿ ಆತ್ಮೀಯರಿಗೆ ಸರಿಯಾದ ಸಮಯಕ್ಕೆ `ಸಂದೇಶ' ಕಳುಹಿಸಲಾಗಲಿಲ್ಲವಲ್ಲ ಎಂಬ ಚಡಪಡಿಕೆ ಹಲವರದಾಗಿತ್ತು. ಕೆಲವರು, ಮೊಬೈಲ್ ಅಥವಾ ಸ್ಥಿರ ದೂರವಾಣಿ ಕರೆ ಮಾಡಿ ಶುಭಾಶಯ ವಿನಿಯಮ ಮಾಡಿಕೊಂಡರು.

ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಕಟ್ಟಿಕೊಂಡಿರುವ ಜಾಯ್‌ ಈವೆಂಟ್ಸ್‌ ವತಿಯಿಂದ ‘ಹೊಸ... ಹರುಷ... 2014’ ನಡೆಯಿತು. ಸಂಗೀತ ಕಾರ್ಯಕ್ರಮ, ಫ್ಯಾಷನ್‌ ಷೋ, ಹಾಸ್ಯ ಕಾರ್ಯಕ್ರಮ, ನೃತ್ಯ ಪ್ರದರ್ಶನ, ಡಿಜೆ ಮ್ಯೂಸಿಕ್‌ ಗೇಮ್ಸ್‌, ಕೇಕ್‌ ಉತ್ಸವ ಮೊದಲಾದ ಕಾರ್ಯಕ್ರಮಗಳು ನಡೆದವು. ಹಲವು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮದಲ್ಲಿ ಮಿಂದೆದ್ದರು.

ಅಲ್ಲಲ್ಲಿ, ಯುವಕರು ಮೊಬೈಲ್‌ಗಳಲ್ಲಿ ಕನ್ನಡ, ಹಿಂದಿ ಚಿತ್ರದ ಗೀತೆಗಳನ್ನು ಹಾಕಿ ಸಂಭ್ರಮಿಸಿದರು. ಇತ್ತೀಚಿನ ಜನಪ್ರಿಯ ಗೀತೆಗಳು ಅಲ್ಲಲ್ಲಿ ಕೇಳಿಬಂದವು. ಯುವಕರು ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಾ ರಸ್ತೆಯಲ್ಲಿ ಸಿಕ್ಕಿದವರಿಗೆಲ್ಲಾ ಶುಭಾಶಯ ಹೇಳುತ್ತಿದ್ದರು.

ನಗರದ ಬೇಕರಿಗಳಲ್ಲಿ ಹಲವು ವಿಧದ ಕೇಕ್‌ಗಳ ಮಾರಾಟ ಭರ್ಜರಿಯಾಗಿಯೇ ನಡೆಯಿತು. ಮಕ್ಕಳು ಕೇಕ್ ತೆಗೆದುಕೊಂಡು ಹೋಗಿ, ರಾತ್ರಿ ತಮ್ಮ ಬಡಾವಣೆಯಲ್ಲಿ ಕತ್ತರಿಸಿ ಹಂಚಿ ತಿಂದು ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂದಿರುವ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ ಸೇರಿದಂತೆ ಬಹುತೇಕ ಮದ್ಯದ ಅಂಗಡಿಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪಾನಪ್ರಿಯರ ‘ದಂಡು’ ಸಾಮಾನ್ಯವಾಗಿತ್ತು.

ಕೆಲವರು, ಹೊರ ವಲಯದ ಹೋಟೆಲ್‌ಗಳಲ್ಲಿ ಕುಟುಂಬ ಸಮೇತ ಬಂದು ಹೊಸ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾದರು. ಹೊಸ ವರ್ಷಾಚರಣೆ ಅಂಗವಾಗಿ, ಹೋಟೆಲ್‌ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಬಗೆಬಗೆಯ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿತ್ತು.

ನಗರದ ದಾವಣಗೆರೆ ಕ್ಲಬ್‌ನಲ್ಲಿ ಹೊಸ ವರ್ಷದ ಅಂಗವಾಗಿ ‘ಡಾಕ್ಲಾ– ನೃತ್ಯ, ಸಂಗೀತ ಮೊದಲಾದ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳು ನಡೆದವು. ಇದೇ ವೇಳೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. 

ವಿವಿಧ ಕಾಲೇಜುಗಳ ಹಾಸ್ಟೆಲ್‌ಗಳ ಬಳಿ ವಿದ್ಯಾರ್ಥಿ,- ವಿದ್ಯಾರ್ಥಿನಿಯರು ವಿವಿಧ ‘ಕಾರ್ಯಕ್ರಮಗಳ’ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT