ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2014ರ ವೇಳೆಗೆ ನೀರಿನ ಸಮಸ್ಯೆ ಅಂತ್ಯ

Last Updated 11 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದು ನನ್ನ ಜವಾಬ್ದಾರಿ. 2014ರ ಒಳಗಾಗಿ ಜಿಲ್ಲೆಗೆ ನೀರು ಹರಿಯುವಂತೆ ಮಾಡುತ್ತೇನೆ. ಈ ಕ್ಷೇತ್ರದ ಸಂಸದನಾಗಿರುವ ನಾನು ನನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ’ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ತಿಳಿಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬುಧವಾರ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಜನರ ನೀರಿನ ಬವಣೆಯನ್ನು ನೀಗಿಸುವ ಭರವಸೆ ನನಗಿದೆ. 2014ರ ಒಳಗಾಗಿ ನೀರಿನ ಸಮಸ್ಯೆ ಬಗೆಹರಿಯರಿಯಲಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗುವ ನೀರಾವರಿ ಯೋಜನೆಯ ವಿವರಣೆಯನ್ನು ಸದ್ಯಕ್ಕೆ ನೀಡುವುದಿಲ್ಲ’ ಎಂದರು.

ಎತ್ತಿನಹೊಳೆ ಜಲಾಶಯದಿಂದ ಸುಮಾರು 8 ಟಿಎಂಸಿ ನೀರನ್ನು ಜಿಲ್ಲೆಯಲ್ಲಿ ಹರಿಸುವ ಬಗ್ಗೆ ಮಾತುಕತೆ ಮುಂದುವರೆದಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಕೂಡ ಆಸಕ್ತಿ ತೋರಿದ್ದು, ಯೋಜನೆಯ ಅನುಷ್ಠಾನಕ್ಕೆ ಸುಮಾರು 8 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. ಯೋಜನೆಗೆ ತಗುಲುವ ಹಣವನ್ನು ಬಜೆಟ್‌ನಲ್ಲಿ ಮೀಸಲಿಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ತಿಳಿಸಿದರು.

ಹಲವು ವರ್ಷಗಳಿಂದ ಜಿಲ್ಲೆಯ ಜನರು ನೀರಾವರಿಗಾಗಿ ಹೋರಾಟ ಮಾಡುತ್ತಿರುವ ಅಂಶ ಗೊತ್ತಿದೆ. ಬೇರೆ  ಸ್ವರೂಪದ ಹೋರಾಟ, ಪ್ರತಿಭಟನೆಗಳನ್ನು ಕೈಗೊಂಡಿದ್ದಾರೆ. ಹೋರಾಟವನ್ನು ತೀವ್ರಗೊಳಿಸಲು ಇದೇ ತಿಂಗಳು 14ರಂದು ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಲಾಗಿದೆ. ಈ ಎಲ್ಲ ಸಂಗತಿಗಳು ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.

ಪಶ್ವಿಮ ಘಟ್ಟದಿಂದ ನೀರು ಹರಿಸಬಹುದು ಮತ್ತು ಜಿಲ್ಲೆಯ ನೀರಿನ ಕೊರತೆಯನ್ನು ಬಗೆಹರಿಸಬಹುದು ಎಂದು ನೀರಾವರಿ ತಜ್ಞ ಡಾ. ಪರಮಶಿವಯ್ಯ ಅವರು ನೀಡಿದ ವರದಿ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಆದರೆ ಈ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಲು ಆಗುವುದಿಲ್ಲ. ಎಲ್ಲರ ಮನವೊಲಿಸಿ, ತಂತ್ರಜ್ಞಾನ ಬಳಕೆ ಮಾಡಿ ಯೋಜನೆಯನ್ನು ಅನುಷ್ಠಾನ ಕಷ್ಟಸಾಧ್ಯ. ಈ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಹಲವು ವರ್ಷಗಳು ಬೇಕಾಗುತ್ತವೆ ಮತ್ತು ಸುಮಾರು 80 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

‘ಡಾ. ಪರಮಶಿವಯ್ಯ ಅವರ ವರದಿ ಜಾರಿಗೊಳಿಸಲು ಕೆಲವರು ಒತ್ತಾಯ, ಒತ್ತಡ ಹೇರುತ್ತಿದ್ದಾರೆ. ಬಗೆ ಬಗೆಯ ತಂತ್ರ-ಪ್ರತಿತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಅವರು ತಮ್ಮ ಹೋರಾಟ ಮುಂದುವರೆಸಲಿ. ಆದರೆ ನಾನು 2014ರ ಒಳಗೆ ಎತ್ತಿನ ಹೊಳೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಿ, ಜಿಲ್ಲೆಯ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

‘ಕೃಷಿ ಬಜೆಟ್; ಆತುರದ ನಿರ್ಣಯ’
ಚಿಕ್ಕಬಳ್ಳಾಪುರ:  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರಕ್ಕಾಗಿ ಕೃಷಿ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಇದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಕೃಷಿ ಚಟುವಟಿಕೆಗೆ ಅಗತ್ಯ ಪ್ರೋತ್ಸಾಹ ದೊರೆಯುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
‘ರೈತರ ಸಮಸ್ಯೆಗಳನ್ನು ಆಳವಾಗಿ ತಿಳಿದುಕೊಳ್ಳದೇ ಮತ್ತು ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸದೇ ಯಡಿಯೂರಪ್ಪ ಅವರು ಆತುರದ ನಿರ್ಣಯ ತೆಗೆದುಕೊಂಡಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಿಂದ ಕೃಷಿಕರಿಗೆ ಪ್ರಯೋಜನವಾಗುತ್ತದೆ ಎಂಬುದರ ಬಗ್ಗೆ ಭರವಸೆಯಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT