ಶುಕ್ರವಾರ, ಮೇ 29, 2020
27 °C

2016ರಲ್ಲಿ ಕೆ.ಜಿ. ಅಕ್ಕಿ ಬೆಲೆ ರೂ.120!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘2016ನೇ ಇಸವಿಗೆ ಅಕ್ಕಿ ಬೆಲೆ ಒಂದು ಕೆ.ಜಿ.ಗೆ ರೂ.120 ಆಗಲಿದೆ. ಹೀಗೆಂದು ಹೇಳಿದವರು ಆರ್ಥಿಕ ತಜ್ಞರಲ್ಲ. ಬದಲಿಗೆ ಸಾಮಾನ್ಯ ರೈತ ಎಂದು ಆರ್ಥಿಕ ಚಿಂತಕ ಪ್ರೊ.ಸಿ.ಕೆ.ರೇಣುಕಾರ್ಯ ಅವರು ಹೇಳಿದರು.ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಎನ್.ಟಿ.ಎಂ ಶಾಲಾ ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆಯು ಶುಕ್ರವಾರ ಏರ್ಪಡಿಸಿದ್ದ ಹಾಸ್ಟೆಲ್ ವಾರ್ಡ್‌ನ್ ಪರೀಕ್ಷೆ ಮತ್ತು ಇಂಗ್ಲಿಷ್ ಕಲಿಕೆ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ‘ಪ್ರಸ್ತುತ ಆಹಾರ ಹಣದುಬ್ಬರ-ಕಾರಣಗಳು ಮತ್ತು ಪರಿಹಾರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.‘ನಾನು ಹಾಗೂ ನನ್ನ ಸ್ನೇಹಿತ ಎಚ್.ಡಿ.ಕೋಟೆಯ ಮುಖ್ಯ ರಸ್ತೆಯಲ್ಲಿರುವ ಜಮೀನು ಖರೀದಿಸಲು ಹೋಗಿದ್ದೆವು. ಅಲ್ಲಿರುವ ಒಬ್ಬ ರೈತನನ್ನು ಜಮೀನು ಮಾರಾಟಕ್ಕೆ ಸಿಗುತ್ತದೆಯೇ ಎಂದು ಕೇಳಿದವು. ಆಗ ರೈತ, ಇಲ್ಲ ಸಾರ್.. ನಾನು ಜಮೀನನ್ನು ಮಾರುವುದಿಲ್ಲ. ಎರಡು-ಮೂರು ವರ್ಷಗಳಲ್ಲಿ ಅಕ್ಕಿ ದರ ಕೆ.ಜಿ.ಗೆ ರೂ.120 ಆಗಲಿದೆ ಎಂದು ಹೇಳಿದ. ಬಳಿಕ ಆರ್ಥಿಕ ಲೆಕ್ಕಾಚಾರ ಹಾಕಿ ನೋಡಿದಾಗ ಆತನ ಮಾತಿನಲ್ಲಿ ಸತ್ಯಾಂಶ ಇದೆ ಎಂಬುದು ಗೊತ್ತಾಯಿತು’ ಎಂದು ಹೇಳಿದರು.‘2008ರಿಂದ ಆಹಾರ ಹಣದುಬ್ಬರದ ಸಮಸ್ಯೆ ಇಡೀ ದೇಶವನ್ನು ಕಾಡುತ್ತಿದೆ. ಜನಸಂಖ್ಯೆ ಬೆಳೆಯುತ್ತಿರುವ ಪ್ರಮಾಣದಲ್ಲಿ ಆಹಾರವನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಹಸಿರು ಕ್ರಾಂತಿ ಆದರೂ ಆಹಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೆ, ಸರ್ಕಾರಗಳು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಷ್ಟು ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿಲ್ಲ. ಇನ್ನೊಂದೆಡೆ ನಿರಂತರ ಅರಣ್ಯ ನಾಶ, ಕೃಷಿಯೇತರ ಕೆಲಸಕ್ಕೆ ಕೃಷಿ ಭೂಮಿ ಬಳಕೆ ಹಾಗೂ ನೀರಾವರಿಗೆ ಆದ್ಯತೆ ನೀಡದಿರುವುದು ಆಹಾರ ಹಣದುಬ್ಬರ ಉಂಟಾಗಲು ಕಾರಣವಾಗಿದೆ’ ಎಂದು ವಿಶ್ಲೇಷಿಸಿದರು.‘ಆಹಾರ ಹಣದುಬ್ಬರ ಬಗೆಹರಿಸಲು, ಕೊರತೆ ಇರುವ ಆಹಾರ ಪದಾರ್ಥಗಳ ರಫ್ತನ್ನು ನಿಷೇಧಿಸಬೇಕು. ಆಮದು ಸುಂಕವನ್ನು ಕಡಿತ ಮಾಡಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡುವ ದಲ್ಲಾಳಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಅಂದಾಗ ಮಾತ್ರ ಆಹಾರ ಹಣದುಬ್ಬರ ನಿಯಂತ್ರಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ನಂಜನಗೂಡಿನ ಜೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ಎಂ.ವೀರಯ್ಯ ಅವರು ಬರೆದಿರುವ ‘ಸಾರ್ವಜನಿಕ ಹಣಕಾಸು ಮತ್ತು ಸೂಕ್ಷ್ಮ ಅರ್ಥಶಾಸ್ತ್ರ ಭಾಗ-2’ ಪುಸ್ತಕವನ್ನು ಶಾಸಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಬಿಡುಗಡೆ ಮಾಡಿದರು.ಶಾಸಕ ಎಚ್.ಎಸ್.ಮಹದೇವಪ್ರಸಾದ್, ಮಾಜಿ ಶಾಸಕ ಸಿ.ರಮೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಪ್ರೊ.ಎಂ.ಕೆ.ರಾಮಸ್ವಾಮಿ, ಸೋಮಾನಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎಸ್.ಮಲ್ಲಿಕಾರ್ಜುನಶಾಸ್ತ್ರಿ, ತಿ.ನರಸೀಪುರ ತಾಲ್ಲೂಕಿನ ವಿಜಯ ಡಿ.ಇಡಿ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕ ಪ್ರೊ.ವಿ.ಜಯಪ್ರಕಾಶ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.