7

ತಂತ್ರಜ್ಞಾನದ ‘ಕೃಷಿ’–ಖುಷಿ!

Published:
Updated:
ತಂತ್ರಜ್ಞಾನದ ‘ಕೃಷಿ’–ಖುಷಿ!

ಗಿರೀಶ್ ಬದ್ರಗೊಂಡ ವಿಜಯಪುರದ ಯುವ ಸಂಶೋಧಕರು. ಅವರದು ಕೃಷಿಸ್ನೇಹಿ ಸಂಶೋಧನೆ. ಕೆಲವು ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಅವರು ಕೊಳವೆಬಾವಿ ಕೊರೆಸಿದರು. 380 ಅಡಿ ಆಳ ತೆಗೆದರೂ ನೀರು ಸಿಗಲಿಲ್ಲ. ಆದರೆ, ನೀರು ಸಿಗಲಿಲ್ಲ ಎಂಬ ಚಿಂತೆಗಿಂತ ಗಿರೀಶ್ ಅವರನ್ನು ಹೆಚ್ಚು ಕಾಡಿದ್ದು – ನೀರು ಸಿಗುವುದನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ. ಇದೇ ಪ್ರಶ್ನೆಯ ಬೆನ್ನುಬಿದ್ದ ಅವರು, ಕಂಡುಕೊಂಡಿದ್ದು ‘ಬೋರ್‌ವೆಲ್ ಸ್ಕ್ಯಾನರ್’.

ನೀರಿನ ಸುಳಿವು ಕಂಡುಹಿಡಿಯಲು ಗಿರೀಶ್‌ ‘ಸ್ಕ್ಯಾನರ್‌’ ಕಂಡುಹಿಡಿದರಲ್ಲ– ಇದೊಂದು ಅನ್ವೇಷಣೆ ಮಾತ್ರವಲ್ಲ – ಕೃಷಿಯಲ್ಲಿ ತಮಗೆ ಎದುರಾದ ಸಮಸ್ಯೆಗಳಿಗೆ ತಾವೇ ಪರಿಹಾರ ಹುಡುಕಿಕೊಳ್ಳುವುದು ಗಿರೀಶ್ ಅವರಿಗೆ ಒಂದು ಹವ್ಯಾಸವೇ ಆಗಿಹೋದಂತಿದೆ.

ವಿಜಯಪುರದ ಕೋರವಾರ ಗಿರೀಶ್‌ ಹುಟ್ಟೂರು. ಶಾಲಾದಿನಗಳಿಂದಲೇ ಅವರಿಗೆ ತಂತ್ರಜ್ಞಾನದೆಡೆಗೆ ಅಪಾರ ಒಲವು. ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗಲೇ – ಎಂಜಿನಿಯರಿಂಗ್‌ನಲ್ಲಿದ್ದ ಗೆಳೆಯರಿಗೆ ಅಗತ್ಯವಾದ ಡಿಸೈನ್‌ಗಳು ಹಾಗೂ ಪ್ರಾಜೆಕ್ಟ್‌ಗಳ ಪರಿಕಲ್ಪನೆಗಳಿಗೆ ನೆರವು ನೀಡುತ್ತಿದ್ದವರು.  ಕೈಗೆ ಸಿಗುತ್ತಿದ್ದ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಇಎಫ್‌ಐ ಮ್ಯಾಗಜೀನ್ ಅನ್ನು ತಪ್ಪದೇ ಓದುತ್ತಿದ್ದವರು.  ಗಿರೀಶ್ ಅವರ ಈ ಆಸಕ್ತಿ ಹಿಂದೆ ಅವರ ತಂದೆಯ ಪ್ರೇರಣೆ ಇದೆ. ಗ್ಯಾರೇಜ್‌ನಲ್ಲಿ ಸಣ್ಣ ಮೆಕ್ಯಾನಿಕ್ ಆಗಿದ್ದ ಅವರು, ವಾಹನದ ಶಬ್ದ ಕೇಳಿಸಿಕೊಂಡೇ ಅದರಲ್ಲಿನ ಸಮಸ್ಯೆ ಕಂಡುಹಿಡಿಯುತ್ತಿದ್ದರಂತೆ. ಜೊತೆಗೆ ಕೃಷಿಯನ್ನೂ ಕಸುಬಾಗಿಸಿಕೊಂಡವರು.

ತಂತ್ರಜ್ಞಾನದೆಡೆ ತೀರದ ಆಸಕ್ತಿ ಇದ್ದರೂ ಗಿರೀಶ್ ಅವರಿಗೆ ಓದಲು ಸಾಧ್ಯವಾಗಿರುವುದು ಎಸ್ಸೆಸ್ಸೆಲ್ಸಿವರೆಗೆ ಮಾತ್ರ. ಹಲವು ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಿಗಿತ್ತು. ಆದರೆ ನಡೆಯಬೇಕಾದ ಗುರಿ ಮಾತ್ರ ಬದಲಾಗಿರಲಿಲ್ಲ.

ಕೆಲಸ ಹುಡುಕಿಕೊಂಡು ನಗರಕ್ಕೆ ಬಂದ ಅವರಲ್ಲಿ ಇದ್ದದ್ದು ಕೆಲವೇ ರೂಪಾಯಿಗಳು, ಲ್ಯಾಪ್‌ಟಾಪ್ ಹಾಗೂ ಒಂದು ಜೊತೆ ಬಟ್ಟೆ ಮಾತ್ರ. ಸ್ನೇಹಿತರ ಸಹಾಯದಿಂದ ಪುಟ್ಟ ಕೋಣೆಯಲ್ಲಿ ವಾಸ್ತವ್ಯ ಹೂಡಿದರು. ಕೆಲವೇ ದಿನಗಳಲ್ಲಿ, ತಮ್ಮ ಬಳಿ ಇದ್ದ ಹಳೆ ‘ಡಿಟಿಎಚ್’ ಬಳಸಿಕೊಂಡು ‘ಬ್ಯಾಂಡ್‌ ವಿಡ್ತ್‌’ ಅನ್ನು ಹತ್ತು ಕಿಲೋಮೀಟರ್‌ವರೆಗೂ ವಿಸ್ತರಿಸಿದ್ದರು. ಅದರಿಂದ ಲಾಭ ಗಳಿಸಿ ಅದರಿಂದಲೇ ರೂಮಿನ ಬಾಡಿಗೆ ಭರಿಸಲು ಆರಂಭಿಸಿದರು.­ ತಂತ್ರಜ್ಞಾನದಲ್ಲಿ ದಾರಿಗಳೇನೋ ಸಾಕಷ್ಟಿವೆ. ಆದರೆ ಅದರಿಂದ ನಮ್ಮ ಹಳ್ಳಿಗಳಿಗೆ ಆಗಬಹುದಾದ ಪ್ರಯೋಜನಗಳೇನು? ತಂತ್ರಜ್ಞಾನವನ್ನು ರೈತರ ನೆರವಿಗೆ ಬರುವಂತೆ ಹೇಗೆ ಬಳಸಿಕೊಳ್ಳಬಹುದು? ತಂತ್ರಜ್ಞಾನವನ್ನು ಕೃಷಿಗೆ ಹೇಗೆ ಅಳವಡಿಸಿಕೊಳ್ಳಬಹುದು? ಈ ಪ್ರಶ್ನೆಗಳು ಗಿರೀಶರನ್ನು ಮತ್ತೆ ಮತ್ತೆ ಕಾಡಲು ಆರಂಭಿಸಿದವು.

‘ಅವಶ್ಯಕತೆಗಳೇ ಆಲೋಚನೆಗಳ ಮೂಲ ಎಂಬ ಮಾತು ನನ್ನ ಜೀವನದಲ್ಲಿ ನಿಜ. ನಮ್ಮ ಅವಶ್ಯಕತೆಗಳೇ ಹೊಸ ದಾರಿ ಹುಡುಕಲು ಪ್ರೇರೇಪಿಸುವುದು. ಹಾಗೆಯೇ ಕೃಷಿಯಲ್ಲಿನ ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರ ಕುರಿತೇ ನನ್ನ ಆಲೋಚನೆಗಳು ಇದ್ದವು. ನಗರಕ್ಕೆ ಬಂದ ಮೇಲೆ, ಸಿಗುವ ಸಮಯದಲ್ಲೇ ಹೊಸ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದೆ. ಅದಕ್ಕೆ ತಕ್ಕ ಅವಕಾಶಗಳೂ ದೊರಕಿದವು’ ಎಂದು ಹುಡುಕಾಟದ ಹಿಂದಿನ ಕಾರಣವನ್ನು ಹೇಳುತ್ತಾರೆ ಗಿರೀಶ್.

ರೈತರ ನೆರವಿಗೆ ತಂತ್ರಜ್ಞಾನ

ಕೃಷಿಯ ಸಮಸ್ಯೆಗಳೇ ಗಿರೀಶ್ ಅವರ ಎಲ್ಲ ಆವಿಷ್ಕಾರಗಳಿಗೆ ಮೂಲ. ತಮ್ಮ ಜಮೀನಿನಲ್ಲಿ ಕೊಳವೆ ಬಾರಿ ಕೊರೆಸಿದಾಗ, ನೀರಿನ ಹರಿವಿನ ಕುರಿತು ತಿಳಿದುಕೊಳ್ಳಲು ಕಂಡುಕೊಂಡ ಬೋರ್‌ವೆಲ್ ಸ್ಕ್ಯಾನರ್, ಅವರು ಅಭಿವೃದ್ಧಿಪಡಿಸಿದ ಮೊದಲ ಯಂತ್ರ. ಉದ್ದವಾದ ವೈರ್‌ಗೆ ಕ್ಯಾಮೆರಾ ಕಟ್ಟಿ ಭೂಮಿಯೊಳಗೆ ಇಳಿಸಿ, ನೀರನ್ನು ಅಳೆಯುವ ಸಾಧನ. 12 ಪ್ಯಾರಾಮೀಟರ್ ಸ್ಕ್ಯಾನ್ ಮಾಡಿ, ನೀರು ಹರಿಯುವ ದಿಕ್ಕು, ಗುಣಮಟ್ಟವನ್ನು ಅಳೆಯುತ್ತದೆ. ಆ ಕ್ಯಾಮೆರಾ, ನೀರಿನ ಮಟ್ಟದ ಚಿತ್ರವನ್ನು ತೆಗೆದು ರವಾನಿಸುತ್ತದೆ. ಈ ಮೂಲಕ ನೀರಿನ ಲಭ್ಯತೆಯ ಬಗ್ಗೆ ಮಾಹಿತಿ ದೊರೆಯುತ್ತದೆ.

ಈ ಬೋರ್‌ವೆಲ್‌ ಸ್ಕ್ಯಾನರ್‌ ಆವಿಷ್ಕಾರವನ್ನು ಗುರುತಿಸಿದ್ದು ನ್ಯಾಷನಲ್ ಇನೊವೇಷನ್ ಫೌಂಡೇಶನ್. ಈ ಸಾಧನಕ್ಕೆ 2015ರಲ್ಲಿ ರಾಷ್ಟ್ರಪತಿ ಆವಿಷ್ಕಾರ ಪ್ರಶಸ್ತಿ ಕೂಡ ಲಭಿಸಿತು. ‘ನೌಕರಿ ಒಂದು, ಆಸಕ್ತಿ ಮತ್ತೊಂದು’ ಎಂಬಂತಾಗಬಾರದು ಎಂದು ತಮ್ಮ ಆಸಕ್ತಿಗೆ ನೀರೆರೆಯುವ, ನವೀಕರಿಸಬಹುದಾದ  ಸಂಪನ್ಮೂಲಗಳಿಗೆ ಸಂಬಂಧಿಸಿದ ‘ಎಂಝೆನ್ ಗ್ಲೋಬಲ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್’ ಕಂಪೆನಿಯಲ್ಲಿ ಸಹ ಸಂಶೋಧಕರಾಗಿ ಸೇರಿಕೊಂಡರು. ಅಲ್ಲಿಂದ ಸಾಕಷ್ಟು ಕೃಷಿಸ್ನೇಹಿ ಯಂತ್ರಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು.

ಬರ್ಡ್‌ ರಿಪೆಲ್ಲರ್: ರೈತರ ಫಸಲಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಹಕ್ಕಿಗಳದು. ಹಕ್ಕಿಗಳ ಕಾಟದಿಂದ ಆಗುವ ಬೆಳೆಹಾನಿಯನ್ನು ತಡೆಯುವ ನಿಟ್ಟಿನಲ್ಲಿ ‘ಬರ್ಡ್‌ ರಿಪೆಲ್ಲರ್‌’ ಎನ್ನುವ ಯಂತ್ರವನ್ನು ಗಿರೀಶ್ ಅಭಿವೃದ್ಧಿಪಡಿಸಿದ್ದಾರೆ. ಎಂಟು ಸ್ಪೀಕರುಗಳನ್ನು ಹೊಂದಿರುವ ಈ ಯಂತ್ರ ಬೇರೆ ಬೇರೆ ಧ್ವನಿಗಳನ್ನು ಹೊರಡಿಸುವ ಮೂಲಕ ಹಕ್ಕಿಗಳು ಜಮೀನಿನತ್ತ ಸುಳಿಯದಿರುವಂತೆ ಮಾಡುತ್ತದೆ. ‘ನಬಾರ್ಡ್‌’ ಈ ಯಂತ್ರಕ್ಕೆ ಬೆಂಬಲ ನೀಡಿತು. ಈಗಾಗಲೇ ಈ ಯಂತ್ರವನ್ನು 360 ರೈತರು ಬಳಸುತ್ತಿದ್ದಾರಂತೆ.

ನೀರು ಉಳಿತಾಯಕ್ಕೆ ತಂತ್ರ!

ಜಮೀನಿನಲ್ಲಿ ಸೋಲಾರ್ ಸೆನ್ಸರ್‌ಗಳನ್ನು ಅಳವಡಿಸುವ ಮೂಲಕ ಗಿಡಕ್ಕೆ ಅಗತ್ಯವಿದ್ದಾಗ ನೀರು ಪೂರೈಸುವ ಸಾಧನ ಇದು. ಅಳವಡಿಸಿದ ಈ ಸೆನ್ಸರ್‌ಗಳು ಅಗತ್ಯ ಬಿದ್ದಾಗ ಪಂಪ್‌ಸೆಟ್‌ಗೆ ಸಂದೇಶ ರವಾನಿಸುತ್ತದೆ. ಪಂಪ್‌ಸೆಟ್‌ ಸ್ವಯಂ ಚಾಲೂ ಆಗುತ್ತದೆ. ಕೆಲಸ ಮುಗಿದಾಗ ತಾನೇ ಬಂದಾಗುತ್ತದೆ.  ಇದರೊಂದಿಗೆ ಸ್ವಯಂಚಾಲಿತ ನೀರುಣಿಸುವ ಯಂತ್ರವನ್ನೂ ಕಂಡುಹಿಡಿದಿದ್ದಾರೆ.

ಗಿಡಕ್ಕೆ ತಾನೇ ನೀರುಣಿಸುವ ಯಂತ್ರ ಇದಾಗಿದ್ದು, ನೀರಿನ ಪಂಪ್‌ಗೆ ಈ ಯಂತ್ರ ಅಳವಡಿಸಿದರೆ, ಬೆಳೆಗೆ ಎಷ್ಟು ಅಗತ್ಯವೋ ಅಷ್ಟು ನೀರನ್ನು ವಾತಾವರಣಕ್ಕೆ ತಕ್ಕಂತೆ ಉಣಿಸುತ್ತದೆ. ಇದರಿಂದ ನೀರಿನ ಅತಿಯಾದ ಬಳಕೆ ತಡೆಯಬಹುದು. ಈ ಯಂತ್ರದಿಂದಾಗಿ ಶೇ.60ರಷ್ಟು ನೀರು ಉಳಿತಾಯ ಸಾಧ್ಯ. ಸೆನ್ಸರ್‌ ಬೆಂಬಲಿತ ನೀರಾವರಿ,  ಸನ್‌ಲೈಟ್ ಟ್ರ್ಯಾಕಿಂಗ್ ಇರಿಗೇಷನ್, ಟೆರೇಸ್ ಗಾರ್ಡನ್ ವಾಟರ್ ಮ್ಯಾನೇಜ್‌ಮೆಂಟ್‌ ಹೀಗೆ ಹತ್ತು ಹಲವು ನೀರು ಉಳಿತಾಯದ ಮಾದರಿಗಳನ್ನು ರೂಪುಗೊಳಿಸಿದ್ದಾರೆ. ಹೊಸ ಆವಿಷ್ಕಾರಗಳಷ್ಟೇ ಅಲ್ಲದೆ, ಹಿಂದೆ ಇದ್ದ ಯಂತ್ರಗಳನ್ನು  ಮಾರ್ಪಾಟು ಮಾಡಿ ಅದನ್ನು ಇನ್ನಷ್ಟು ಸ್ಮಾರ್ಟ್‌ ಆಗಿಸುವ ಕೆಲಸವನ್ನೂ ಮಾಡಿದ್ದಾರೆ. ಇದಕ್ಕೆ ಉದಾಹರಣೆ ‘ತೂರ್‌ ದಾಲ್ ಟ್ರಿಮ್ಮರ್‌’.

ನಾಲ್ಕು ಶೇವಿಂಗ್ ಬ್ಲೇಡ್‌ಗಳನ್ನು ಬಳಸಿ ರೂಪಿಸಿರುವ ಈ ಯಂತ್ರದಲ್ಲಿ ಇಳುವರಿ ಹೆಚ್ಚಿಸುವ ತಂತ್ರವಿದೆ. ಇದೇ ನಿಟ್ಟಿನಲ್ಲಿ ರೂಪುಗೊಂಡ ಸೋಲಾರ್ ಆಧರಿತ ಯಂತ್ರಗಳು ಇವರ ಆವಿಷ್ಕಾರದ ಪಟ್ಟಿಯಲ್ಲಿ ಸಾಕಷ್ಟಿವೆ.

ಜಾಗೃತಿಯ ಹೆಜ್ಜೆ

ಯಂತ್ರಗಳನ್ನು ಅಭಿವೃದ್ಧಿಪಡಿಸಿದರಷ್ಟೇ ಸಾಲದು, ಅವುಗಳ ಹಿಂದಿನ ಉದ್ದೇಶವನ್ನು ಮನವರಿಕೆ ಮಾಡಬೇಕೆಂದು ಗಿರೀಶ್ ಶಾಲೆಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸುತ್ತಾರೆ. ಇತ್ತೀಚೆಗೆ ‘ರಾಷ್ಟ್ರಪತಿ ಭವನ’ದಲ್ಲಿ ನಡೆದ ‘ಫೆಸ್ಟಿವಲ್ ಆಫ್ ಇನೊವೇಷನ್‌ 2017’ಗೆ ಆಯ್ಕೆಯಾಗಿದ್ದ ಗಿರೀಶ್, ಅಲ್ಲಿಗೆ ಭೇಟಿಕೊಟ್ಟು 18 ದಿನಗಳ ಕಾಲ ತಂತ್ರಜ್ಞಾನದ ಹಲವು ಸಾಧ್ಯತೆಗಳ ಕುರಿತು ನಡೆದ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ‘ಇನ್‌ರೆಸಿಡೆನ್ಸ್‌ ಪ್ರೋಗ್ರಾಮ್’ ಅಂಗವಾಗಿ ನಡೆದ, ‘ಸ್ಮಾರ್ಟ್‌ ಗ್ರಾಮ’ ಪರಿಕಲ್ಪನೆಯಲ್ಲಿ ಹಳ್ಳಿಗಳಲ್ಲಿ ಅಳವಡಿಸಬಹುದಾದ ತಂತ್ರಜ್ಞಾನದ ಕುರಿತು ಸಂವಾದವನ್ನೂ ನಡೆಸಿದ್ದಾರೆ.

‘ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ’ ಎನ್ನುವ ಮೂಲಮಂತ್ರ ಇಟ್ಟುಕೊಂಡು ತಮ್ಮದೇ ಆದ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ‘ಸೊಸೈಟಿ ಆಫ್ ಸೋಷಿಯಲ್ ಎನ್‌ಲೈಟ್‌ಮೆಂಟ್’ ಎಂಬ ಈ ತಂಡದಲ್ಲಿ ಭಿನ್ನ ವೃತ್ತಿಯಲ್ಲಿರುವ ಆರು ಮಂದಿ ಇದ್ದಾರೆ. ರೈತರಲ್ಲಿ ತಂತ್ರಜ್ಞಾನದ ಕುರಿತು, ಕೃಷಿಗೆ ತಂತ್ರಜ್ಞಾನದಿಂದಾಗುವ ಲಾಭಗಳ ಕುರಿತು ಮನವರಿಕೆ ಮಾಡುವ ಕೆಲಸ ಈ ತಂಡದ್ದು. 

ಜೊತೆಗೆ ‘ನಿಮಿ’–ನೆಸೆಸಿಟಿ ಇಸ್ ಮದರ್ ಆಫ್ ಇನೊವೇಷನ್’ ಎಂಬ ಪರಿಕಲ್ಪನೆಯಡಿಯಲ್ಲಿ ಪ್ರತಿ ವಾರಾಂತ್ಯದಲ್ಲೂ ಶಾಲಾ ಮಕ್ಕಳಲ್ಲಿ ತಾಂತ್ರಿಕ ಜ್ಞಾನವನ್ನು ಪ್ರೇರೇಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಸಂಪರ್ಕಕ್ಕೆ: ggbadragond@gmail.com v

**

ಗಿರೀಶ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry