7

ಕೇರಳದಲ್ಲಿ ಬಿಜೆಪಿ ಕಾರ್ಯಕರ್ತೆ ಹತ್ಯೆಗೆ ಸಂಬಂಧಿಸಿ ಟ್ವಿಟರ್‌ನಲ್ಲಿ ಪ್ರಕಟಗೊಂಡ ವಿಡಿಯೊ ನಕಲಿ

Published:
Updated:
ಕೇರಳದಲ್ಲಿ ಬಿಜೆಪಿ ಕಾರ್ಯಕರ್ತೆ ಹತ್ಯೆಗೆ ಸಂಬಂಧಿಸಿ ಟ್ವಿಟರ್‌ನಲ್ಲಿ ಪ್ರಕಟಗೊಂಡ ವಿಡಿಯೊ ನಕಲಿ

ಬೆಂಗಳೂರು: ಕೇರಳದ ಎಡಪಂಥೀಯ ಮುಸ್ಲಿಮರು ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ಹತ್ಯೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬ ಟ್ವಿಟರ್‌ನಲ್ಲಿ ಪ್ರಕಟಿಸಿದ ವಿಡಿಯೊ ನಕಲಿ ಎಂಬುದು ಬೆಳಕಿಗೆ ಬಂದಿದೆ.

ಅಮಿತೇಶ್‌ ಕುಮಾರ್ ಎಂಬ ಹೆಸರಿನಲ್ಲಿ (@AmiteshK01) ಖಾತೆ ಹೊಂದಿರುವ ವ್ಯಕ್ತಿಯೊಬ್ಬ ಈ ನಕಲಿ ವಿಡಿಯೊವನ್ನು ಪ್ರಕಟಿಸಿದ್ದ. ಅಲ್ಲದೆ, ‘ಕೇರಳದಲ್ಲಿ ಕಮ್ಮಿ/ಜಿಹಾದಿಗಳಿಂದ ಬಿಜೆಪಿ ಕಾರ್ಯಕರ್ತೆಯ ಮತ್ತೊಂದು ಹತ್ಯೆ’ ಎಂದು ಬರೆದುಕೊಂಡಿದ್ದ. ನಂತರ, ‘ಕೇರಳದ ಮುಸ್ಲಿಮರಿಂದ ಆರ್‌ಎಸ್‌ಎಸ್ ಕಾರ್ಯಕರ್ತೆಯ ಹತ್ಯೆ’ ಎಂದು ಹಿಂದಿಯಲ್ಲಿ ಬರೆಯಲಾಗಿತ್ತು.

ವಿಡಿಯೋದಲ್ಲೇನಿತ್ತು?: ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯೊಬ್ಬರನ್ನು ಕಾರಿನಿಂದ ಹೊರಗೆಳೆದಿದ್ದಾರೆ. ಅವರ ಹಿಡಿತದಿಂದ ತಪ್ಪಿಸಿಕೊಂಡು ಆಕೆ ಓಡಲು ಮುಂದಾದಾಗ ಆಕೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ನಂತರ ಒಬ್ಬ ವ್ಯಕ್ತಿ ಮಲಯಾಳಂನಲ್ಲಿ ಮಾತನಾಡುವ ದೃಶ್ಯವಿದೆ. ಅದರಲ್ಲಿ ‘ಆರ್‌ಎಸ್‌ಎಸ್’ ಎಂಬ ಶಬ್ದ ಮಾತ್ರ ಸ್ಪಷ್ಟವಾಗಿದೆ.

ಡಿವೈಎಫ್‌ಐ ಬೀದಿ ನಾಟಕದ ದೃಶ್ಯ: ಅಮಿತೇಶ್‌ ಕುಮಾರ್ ಟ್ವಿಟರ್‌ನಲ್ಲಿ ಪ್ರಕಟಿಸಿದ ವಿಡಿಯೊ ಪರ್ತಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಡಿವೈಎಫ್‌ಐ ನಡೆಸಿದ ಬೀದಿ ನಾಟಕದ್ದು ಎಂಬುದು ಈಗ ಬಯಲಾಗಿದೆ. ಮಲಪ್ಪುರಂನ ಕಲಿಕಾವು ಎಂಬಲ್ಲಿ ನಡೆದ ಬೀದಿ ನಾಟಕ ಇದು ಎಂದು ಮಲಯಾಳ ದಿನಪತ್ರಿಕೆ ಮಾತೃಭೂಮಿ ವರದಿ ಮಾಡಿದೆ. ಗೌರಿ ಲಂಕೇಶ್ ಹತ್ಯೆಯಲ್ಲಿ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಕಲಿಕಾವಿನ ಡಿವೈಎಫ್‌ಐ ಕಾರ್ಯದರ್ಶಿ ಆರೋಪಿಸಿದ ಶಬ್ದಗಳೇ ವಿಡಿಯೊದಲ್ಲಿ ಕೇಳಿಬಂದದ್ದು ಎನ್ನಲಾಗಿದೆ.

ನಕಲಿ ವಿಡಿಯೊದ ಬಗ್ಗೆ ಟ್ವಿಟರ್‌ನಲ್ಲಿ ಹತ್ತಾರು ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಥ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.

ಈ ಮಧ್ಯೆ, ಹಿಂದಿ ಸುದ್ದಿವಾಹಿನಿ ಜೀ ನ್ಯೂಸ್‌ನಿಂದ ವಿಡಿಯೊವನ್ನು ತೆಗೆದುಕೊಳ್ಳಲಾಗಿತ್ತು. ‘ಕೇರಳದ ಎಡಪಂಥೀಯ ಮುಸ್ಲಿಮರಿಂದ ನಡುರಸ್ತೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತೆಯ ಹತ್ಯೆ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿವಾಹಿನಿ ವಿಡಿಯೊ ಪ್ರಸಾರ ಮಾಡಿತ್ತು ಎಂದು ಮಾತೃಭೂಮಿ ವರದಿ ಮಾಡಿದೆ. ಆದರೆ, ಈಗ ಸುದ್ದಿವಾಹಿನಿ ಆ ವಿಡಿಯೊವನ್ನು ಅಳಿಸಿಹಾಕಿದೆ.

ಇದೇ ಮೊದಲಲ್ಲ: ಅಮಿತೇಶ್‌ ಕುಮಾರ್ ಎಂಬ ಹೆಸರಿನಲ್ಲಿ (@AmiteshK01) ಖಾತೆ ಹೊಂದಿರುವ ವ್ಯಕ್ತಿ ಈ ರೀತಿ ಹಿಂದೆಯೂ ನಕಲಿ ವಿಡಿಯೊ, ಸುದ್ದಿಗಳನ್ನು ಪ್ರಕಟಿಸಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry