7

ಆರೋಗ್ಯ ಸೇವೆ: ಗುಣಮಟ್ಟಕ್ಕೆ ಬದ್ಧತೆ ಇರಲಿ

Published:
Updated:
ಆರೋಗ್ಯ ಸೇವೆ: ಗುಣಮಟ್ಟಕ್ಕೆ ಬದ್ಧತೆ ಇರಲಿ

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಉದ್ದೇಶದ ಮಸೂದೆಯ ಪರಿಶೀಲನೆಗೆ ಜೂನ್ ತಿಂಗಳಲ್ಲಿ ರಚಿಸಲಾಗಿದ್ದ ಸದನದ ಜಂಟಿ ಪರಿಶೀಲನಾ ಸಮಿತಿಯು ಈಗ ಸಭಾಧ್ಯಕ್ಷರಿಗೆ ವರದಿ ಸಲ್ಲಿಸಿದೆ. ಮಸೂದೆಯು ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಬೇಕಾಗುವ ಹಲವು ಶಿಫಾರಸುಗಳನ್ನು ಮಾಡಿರುವುದು ಸ್ವಾಗತಾರ್ಹ. ವರದಿ ಬಗ್ಗೆ ಎದ್ದಿರುವ ತಕರಾರುಗಳನ್ನು ಸಮತೂಕದಿಂದ ಪರಾಮರ್ಶಿಸಿ ಶೀಘ್ರವೇ ಮಸೂದೆಯನ್ನು ಜಾರಿಗೊಳಿಸುವುದರ ಮೂಲಕ ಜನರ ಆರೋಗ್ಯ ಕಾಪಾಡುವ ತನ್ನ ಬದ್ಧತೆಯನ್ನು ಸರ್ಕಾರ ತೋರಿಸಬೇಕಾಗಿದೆ. ಹಲವು ರೀತಿಯ ವೈದ್ಯಕೀಯ ನಿರ್ಲಕ್ಷ್ಯಗಳಿಗೆ ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಿರುವುದು ಸಹ ನಿಯಂತ್ರಣದ ಅಗತ್ಯ ಕ್ರಮ.

ಆದರೆ ಮಸೂದೆಯ ಶಿಕ್ಷೆಯ ವ್ಯಾಪ್ತಿಯನ್ನು ನಾಲ್ವರು ಸದಸ್ಯರು ಪ್ರಶ್ನಿಸಿರುವುದು ಸಮಂಜಸವಲ್ಲವೆಂದೆನಿಸುತ್ತದೆ. ಏಕೆಂದರೆ ವೈದ್ಯಕೀಯ ಕ್ಷೇತ್ರಕ್ಕೆ ಅದಕ್ಕೇ ಆದ ಸ್ವಾಮ್ಯವು ಸಿಂಧುವಾದರೂ ಅದು ಸಾಮಾಜಿಕ ವ್ಯವಸ್ಥೆಯ ಭಾಗವೇ ಆಗಿದೆ ಎಂಬುದು ವಾಸ್ತವ. ಅದರಲ್ಲೂ ಗ್ರಾಮೀಣ ಪ್ರದೇಶದ ಶೇಕಡ 70ರಷ್ಟು ಆರೋಗ್ಯ ಸೇವೆ ಒದಗಿಸುತ್ತಿರುವ ಖಾಸಗಿ ವೈದ್ಯಕೀಯ ವ್ಯವಸ್ಥೆಯಲ್ಲಿ ಜರುಗಬಹುದಾದ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಶಿಕ್ಷೆ ವಿಧಿಸುವುದು ವೈದ್ಯಕೀಯ ಕ್ಷೇತ್ರದ ನಿಯಂತ್ರಣದ ಅನಿವಾರ್ಯ ಭಾಗವಾಗುತ್ತದೆ.

ಇಂತಹ ಸಂದರ್ಭದಲ್ಲಿ ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಕೈಜೋಡಿಸಿರುವ ಖಾಸಗಿ ಆರೋಗ್ಯ ಕ್ಷೇತ್ರ ಜವಾಬ್ದಾರಿ, ಬದ್ಧತೆಯನ್ನು ಕಾಪಾಡಿಕೊಳ್ಳಬೇಕಿದೆ. ಜನರ ಆರೋಗ್ಯವನ್ನು ಕೇವಲ ಬಂಡವಾಳವನ್ನಾಗಿ ಮಾಡಿಕೊಂಡಿರುವ ಹಲವು ಖಾಸಗಿ ವೈದ್ಯಕೀಯ ಉದ್ಯಮಗಳಿಂದಾಗಿ ವೈದ್ಯ ವೃತ್ತಿಯು ತನ್ನ ನೈತಿಕತೆ ಕಳೆದುಕೊಂಡಿದೆ. ಬಂಡವಾಳಶಾಹಿ ಆರೋಗ್ಯ ಉದ್ಯಮಗಳ ನೇಯಿಗೆಯಲ್ಲಿ ಅನಿವಾರ್ಯವಾಗಿ ಸಿಲುಕಿಕೊಂಡಿರುವ ಅದೆಷ್ಟೋ ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳಲು ಹೆಣಗಬೇಕಾಗಿದೆ.

ಇದರ ಮಧ್ಯೆಯೂ ಅನೇಕ ವೈದ್ಯರು ಜನರ ಆರೋಗ್ಯವನ್ನು ಕಾಪಾಡುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತಾರೆ. ತಮ್ಮ ಬುದ್ಧಿಮತ್ತೆ, ಅನುಭವ, ಕ್ಷಮತೆ ಮತ್ತು ಸಮಯವನ್ನು ರೋಗಿಗಳ ಯೋಗಕ್ಷೇಮಕ್ಕೆ ಮೀಸಲಿಡುತ್ತಿದ್ದಾರೆ. ಆದ್ದರಿಂದಲೇ ಇಂತಹ ಆರೋಗ್ಯ ಮಾರುಕಟ್ಟೆಯಲ್ಲೂ ಜನರ ಆರೋಗ್ಯ ಸುಧಾರಣೆ ಸಾಧ್ಯವಾಗುತ್ತಿದೆ. ಆದರೆ ಇದರ ಪ್ರಮಾಣ ಅತ್ಯಂತ ಕಡಿಮೆ ಎಂಬುದೂ ವಾಸ್ತವ. ಯಾವುದೇ ನಾಗರಿಕ ಸಮಾಜವು ಆರೋಗ್ಯ ಸುಧಾರಣೆಯತ್ತ ಕಾಲಿಡಬೇಕಾಗುತ್ತದೆಯೇ ಹೊರತು, ವಾಸ್ತವ ಹೀಗೆಯೇ ಎಂದು ಕುರುಡಾಗಲು ಸಾಧ್ಯವಿಲ್ಲ. ಸುಧಾರಣೆ ಮತ್ತು ರಚನಾತ್ಮಕ ಬದಲಾವಣೆಯತ್ತ ಮುಖ ಮಾಡಲೇಬೇಕಾಗುತ್ತದೆ. ಜನರ ಆರೋಗ್ಯ ಹಕ್ಕುಗಳನ್ನು ಪ್ರತಿಪಾದಿಸುವುದು ಇದಕ್ಕೆ ಹೊರತಾಗಿಲ್ಲ.

ಈ ನಿಟ್ಟಿನಲ್ಲಿ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ’ ಮುಖ್ಯವಾಗುತ್ತದೆ. ಖಾಸಗಿ ವೈದ್ಯಕೀಯ ಕ್ಷೇತ್ರದ ನಿಯಂತ್ರಣದಲ್ಲಿ ಕಾನೂನಿಗಿರುವ ಪಾತ್ರವನ್ನು ಇಂತಹ ಮಸೂದೆಗಳು ವಹಿಸುತ್ತವೆ. ವಿಶ್ವಬ್ಯಾಂಕ್‌ನ 2011ರ ಸಂಶೋಧನಾ ವರದಿಯ ಪ್ರಕಾರ ಭಾರತದ ಕಡಿಮೆ ಆದಾಯದ ಕುಟುಂಬಗಳು ಹೆಚ್ಚಾಗಿ ಖಾಸಗಿ ಸಣ್ಣ ವೈದ್ಯಕೀಯ ಸಂಸ್ಥೆಗಳ ಮತ್ತು ಖಾಸಗಿ ವೈದ್ಯರ ಮೊರೆಹೋಗುತ್ತಿವೆ. ಗ್ರಾಮೀಣ ಭಾರತದ ಶೇಕಡ 70ರಷ್ಟು ಆರೋಗ್ಯ ಸೇವೆಯನ್ನು ಇಂತಹ ಸಂಸ್ಥೆಗಳು ಮತ್ತು ವೈದ್ಯರು ಒದಗಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಕಡಿಮೆ ಆದಾಯದ ಕುಟುಂಬಗಳು, ಸರ್ಕಾರಿ ಆರೋಗ್ಯ ಕ್ಷೇತ್ರದ ಬದಲಾಗಿ ಖಾಸಗಿ ವೈದ್ಯಕೀಯ ಕ್ಷೇತ್ರಕ್ಕೆ ಮೊರೆಹೋಗಲು ಎರಡು ಪ್ರಮುಖ ಕಾರಣಗಳನ್ನು ಈ ಸಂಶೋಧನಾ ವರದಿ ಹೊರಹಾಕಿದೆ: ಒಂದು, ಖಾಸಗಿ ವೈದ್ಯ ಕ್ಷೇತ್ರಕ್ಕೆ ಯಾವುದೇ ಪರಿಣಾಮಕಾರಿ ನಿಯಂತ್ರಣ ಇಲ್ಲದೇ ಇರುವುದು ಮತ್ತು ಬಹುಪಾಲು ಖಾಸಗಿ ವೈದ್ಯರಿಗೆ ಯಾವುದೇ ವೃತ್ತಿಪರ ತರಬೇತಿ ಇಲ್ಲದೇ ಇರುವುದು. ಎರಡನೆಯದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಆರೋಗ್ಯಸೇವೆಯ ಪ್ರಮಾಣ ಕಡಿಮೆ ಇರುವುದು. ಎರಡನೆಯ ಕಾರಣ ಮುಖ್ಯವಾಗಿರಲು ಸಾಧ್ಯವಿಲ್ಲ ಎಂದು ಈ ಸಂಶೋಧನೆ ಗುರುತಿಸಿದೆ. ಏಕೆಂದರೆ ಸರ್ಕಾರಿ ವೈದ್ಯರ ಉಚಿತ ಸೇವೆ ಇರುವ ಗ್ರಾಮೀಣ ಪ್ರದೇಶಗಳಲ್ಲೂ ಜನರ ಆದ್ಯತೆ ಖಾಸಗಿ ವೈದ್ಯರೇ ಆಗಿದ್ದಾರೆ.

ಗ್ರಾಮೀಣ ಪ್ರದೇಶದ ಬಹುಪಾಲು ಖಾಸಗಿ ವೈದ್ಯರು ಅರ್ಹತೆ ಇಲ್ಲದೇ ಇದ್ದರೂ ರೋಗಿಗಳ ತಪಾಸಣೆ, ರೋಗನಿದಾನ ಪ್ರಕ್ರಿಯೆಯಲ್ಲಿ ಮತ್ತು ಆ್ಯಂಟಿಬಯೊಟಿಕ್‌ಗಳ ಬಳಕೆಯಲ್ಲಿ ಸರ್ಕಾರಿ ವೈದ್ಯರಿಗೆ ಸರಿಸಮ ಎನ್ನುವ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಸರ್ಕಾರಿ ವೈದ್ಯರ ಸೇವೆ ಸರಿಯಾದ ಸಮಯಕ್ಕೆ ಸಿಗದಿರುವುದಕ್ಕೆ ಮುಖ್ಯ ಕಾರಣ ವೈದ್ಯರ ಅತಿಯಾದ ಗೈರುಹಾಜರಿ. ಇದರಿಂದಾಗಿ ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಬಾರಿ ಅಲೆಯಬೇಕಾಗುತ್ತದೆ.  ಪ್ರಯಾಣಕ್ಕೆ ತಗುಲುವ ವೆಚ್ಚ ಮತ್ತು ಸಮಯವನ್ನು ಲೆಕ್ಕಹಾಕಿದಾಗ ಜನರಿಗೆ ಸರ್ಕಾರಿ ಆಸ್ಪತ್ರಗಳಿಂದ ಲುಕ್ಸಾನಾಗುತ್ತಿದೆ.

ಹಾಗೆಯೇ ಸರ್ಕಾರಿ ಆರೋಗ್ಯಸೇವೆ ರೋಗಿಗಳ ಪಾಲಿಗೆ ಉಚಿತ ಎನ್ನುವುದೇನೋ ನಿಜ. ಆದರೆ ಈ ವೆಚ್ಚವನ್ನು ತೆರಿಗೆದಾರರು ಭರಿಸುತ್ತಾರೆ. ಅಧ್ಯಯನದ ಪ್ರಕಾರ ಪ್ರತಿಯೊಬ್ಬ ರೋಗಿಗೆ ಸರ್ಕಾರ ಮಾಡುವ ವೆಚ್ಚಕ್ಕೆ ಹೋಲಿಸಿದರೆ, ಆ ರೋಗಿ ಖಾಸಗಿ ವೈದ್ಯರಿಗೆ ಕೊಡುವ ಶುಲ್ಕವೇ ಅಗ್ಗ.

ಈ ಎಲ್ಲಾ ಅಂಕಿ ಅಂಶಗಳು ಹೊರಚೆಲ್ಲುವ ವ್ಯಾಖ್ಯಾನದ ಪ್ರಕಾರ ನಮ್ಮ ಗ್ರಾಮೀಣ ಜನರ ಬಹುಪಾಲು ಆರೋಗ್ಯಸೇವೆಯ ಜವಾಬ್ದಾರಿಯನ್ನು ಖಾಸಗಿ ಆರೋಗ್ಯ ವಲಯ ನಿರ್ವಹಿಸುತ್ತಿದೆ. ನಗರ ಪ್ರದೇಶಗಳ ಆರೋಗ್ಯ ಸೇವೆಯನ್ನು ನಿರ್ವಹಿಸುತ್ತಿರುವ ವೈದ್ಯಕೀಯ ಕ್ಷೇತ್ರದ ಅನೈತಿಕ ಚಟುವಟಿಕೆಗಳನ್ನು ವಿವರಿಸಲು ಇಲ್ಲಿಯ ವ್ಯಾಪ್ತಿ ಸಾಕಾಗದು. ಇಲ್ಲಿ ಪ್ರಮಾಣಕ್ಕಿಂತ ಗುಣಮಟ್ಟದ ಆರೋಗ್ಯಸೇವೆಯ ಅಭಾವವಿರುವುದು ವಾಸ್ತವ. ಗುಣಮಟ್ಟದ ಕೊರತೆಯನ್ನು ನೀಗಿಸಲು ಕಾನೂನು ಒಂದೇ ಸಾಲದು. ಆದರೆ ಅದು ಮುಖ್ಯವಾದ ಹೆಜ್ಜೆ. ಆದ್ದರಿಂದಲೇ ಜನರು ಹೆಚ್ಚಾಗಿ ಅವಲಂಬಿತವಾಗಿರುವ ಖಾಸಗಿ ವೈದ್ಯಕೀಯ ಸೇವೆಯು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಕ್ಕಿದೆ. ಮತ್ತು ಈ ಸೇವೆಯ ಗುಣಮಟ್ಟವನ್ನು ನಿರೀಕ್ಷಿಸುವ ಹಕ್ಕು ಜನರಿಗಿದೆ. ಇದೇ ಕಾರಣಕ್ಕಾಗಿಯೇ ಖಾಸಗಿ ಆರೋಗ್ಯ ವಲಯ ಜನರಿಗೆ ಗುಣಮಟ್ಟದ ಆರೋಗ್ಯಸೇವೆಯನ್ನು ನೀಡುವಂತೆ ನಿಯಂತ್ರಣ ಹೇರುವುದು ಅಗತ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry