7

ನೂತನ ಮಯೂರ ನರ್ತನ!

Published:
Updated:
ನೂತನ ಮಯೂರ ನರ್ತನ!

‘ಹೆತ್ತ ಜೀವಗಳು ನಮ್ಮನ್ನು ಅಗಲಿದಾಗ ಎಂಥ ರಾಕ್ಷಸ ಆದರೂ ಆ ಸಂದರ್ಭದಲ್ಲಿ ಕರಗಿಹೋಗುತ್ತಾನೆ. ಎದೆಗುಂದುತ್ತಾನೆ. ನಾನು ತುಂಬ ಸಾಧಾರಣ ಕುಟುಂಬದಿಂದ ಬಂದವಳು. ಸಾಕಷ್ಟು ಕಷ್ಟ ನೋಡಿದವಳು. ಆದರೆ ಅವೆಲ್ಲವನ್ನೂ ಒಂದು ಧೈರ್ಯದಿಂದಲೇ ಎದುರಿಸುತ್ತ ಬಂದಿದ್ದೆ. ಆದರೆ ಅನಿರೀಕ್ಷಿತವಾಗಿ ನನ್ನ ತಂದೆಯನ್ನು ಕಳೆದುಕೊಂಡ ಸನ್ನಿವೇಶ ಎದುರಾದಾಗ ಮಾತ್ರ ಪೂರ್ತಿ ಕುಸಿದು ಹೋಗಿದ್ದೆ.  ಇದು ನನ್ನ ಬದುಕಿನ ಮುಕ್ತಾಯ ಅನಿಸಿಬಿಟ್ಟಿತ್ತು. ತಂದೆ ಕಳೆದುಕೊಂಡ ದುಃಖ ಒಂದೆಡೆ. ಇಲ್ಲೇ ಇರಬೇಕಾ, ಅಥವಾ ಚಿತ್ರರಂಗ ಬಿಟ್ಟು ಮರಳಿ ನನ್ನೂರು ಹುಬ್ಬಳ್ಳಿಗೆ ಹೋಗಬೇಕಾ? ಅಮ್ಮನನ್ನು ಇಲ್ಲಿಗೆ ಕರೆಸಿಕೊಳ್ಳಬೇಕಾ? ಮುಂದಿನ ಬದುಕು ಹೇಗೆ?  ಇಂಥ ನೂರಾರು ಪ್ರಶ್ನೆಗಳು ನನ್ನನ್ನು ಇರಿಯುತ್ತಿರುವಾಗ ನನಗೆ ಬದುಕಲು ಸ್ಫೂರ್ತಿ ತಂದುಕೊಂಡ ಸಿನಿಮಾ ‘ಕರಿಯ 2’.  ಇದು ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡೂ ರೀತಿಯಿಂದಲೂ ತುಂಬ ವಿಶೇಷ ಸಿನಿಮಾ’ – ಪಟಪಟಪಟ ಎಂದು ಇಷ್ಟು ಹೇಳಿ ಉಸಿರು ತೆಗೆದುಕೊಳ್ಳಲಿಕ್ಕೋ, ನಿಟ್ಟುಸಿರು ಮರೆಮಾಚಲಿಕ್ಕೋ ಸುಮ್ಮನಾಗಿಬಿಟ್ಟರು ಮಯೂರಿ.

ಮಾಡೆಲಿಂಗ್‌, ಕಿರುತೆರೆ, ಚಲನಚಿತ್ರಗಳು ಹೀಗೆ ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮೇಲೇರುತ್ತ ಬಂದಿರುವ  ಹುಡುಗಿ ಮಯೂರಿ. 2015ರಲ್ಲಿ ‘ಕೃಷ್ಣಲೀಲಾ’ ಸಿನಿಮಾ ಮೂಲಕ ನಾಯಕಿಯಾಗಿ ಹಿರಿತೆರೆಗೆ ಅಡಿಯಿಟ್ಟ ಮಯೂರಿ ಅವರ ನಾಲ್ಕನೇ ಸಿನಿಮಾ ‘ಕರಿಯ 2’. ಇಷ್ಟು ಕಮ್ಮಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಕಾರಣ ಕೇಳಿದರೆ ಅವರದು ಒಂದೇ ಉತ್ತರ; ‘ಹತ್ತು ಸಿನಿಮಾ ಮಾಡಿ ಎಲ್ಲದರಲ್ಲಿಯೂ ಸೋಲುವುದಕ್ಕಿಂತ ಒಂದೊಂದೇ ಮಾಡುತ್ತ ಹೋಗಿ ಎಲ್ಲದರಲ್ಲಿಯೂ ಗೆಲ್ಲುತ್ತಾ ಶಾಶ್ವತವಾಗಿ ಬೆಳೆಯಬೇಕು ಎನ್ನುವುದೇ ನನ್ನ ಪಾಲಿಸಿ’.

’ಎಲ್ಲರೂ ಎಲ್ಲೆಲ್ಲಿಂದಲೋ ಬಂದು ನಮ್ಮ ಚಿತ್ರರಂಗದಲ್ಲಿ ಬೆಳೆಯುತ್ತಾರೆ. ಆದರೆ ನಾನು ಉತ್ತರಕರ್ನಾಟಕದ ಹುಡುಗಿಯಾಗಿ, ಕನ್ನಡದವಳಾಗಿ ನನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಇಲ್ಲಿ ಗುರುತರ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಮತ್ತು ಛಲ ಎರಡೂ ನನ್ನಲ್ಲಿದೆ’ ಎನ್ನುತ್ತಾರೆ ಮಯೂರಿ.

‘ಕರಿಯ 2’ ಅವರ ಮನಸ್ಸಿಗೆ ಹತ್ತಿರವಾಗಲು ಇನ್ನೂ ಒಂದು ಕಾರಣ ಇದೆ.  ಈ ಚಿತ್ರದಲ್ಲಿನ ಅನೇಕ ಸನ್ನಿವೇಶಗಳು ಅವರ ವೈಯಕ್ತಿಕ ಬದುಕನ್ನೇ ಹೋಲುವಂತಿದೆಯಂತೆ. ‘ಈ ಚಿತ್ರದಲ್ಲಿ ಎಲ್ಲಿಯೂ ನಾನು ಗ್ಲಿಸರಿನ್‌ ಬಳಸಿಯೇ ಇಲ್ಲ. ಕೇವಲ ಒಂದು ತಿಂಗಳ ಹಿಂದೆ ತೀರಿಕೊಂಡಿದ್ದರು. ನಂತರ ನನ್ನ ರೀಲ್‌ ಬದುಕಿನಲ್ಲಿಯೂ ತಂದೆಯ ಶವದ ಮುಂದೆ ಅಳುವ ದೃಶ್ಯಗಳಲ್ಲಿ ನಟಿಸುತ್ತಿದ್ದೆ. ಒಂದೇ ವ್ಯತ್ಯಾಸ. ಇಲ್ಲಿ ಶಾಟ್‌ ಮುಗಿದ ತಕ್ಷಣ ತಂದೆ ಎದ್ದು ಕೂತುಬಿಡುತ್ತಿದ್ದರು. ನಮ್ಮ ಜತೆಗೇ ಟೀ ಕುಡಿಯುತ್ತಿದ್ದರು. ಮಾತಾಡುತ್ತಿದ್ದರು. ನಿಜಜೀವನದಲ್ಲಿಯೂ ಹೀಗೆ ಆಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲಾ ಅನಿಸುತ್ತಿತ್ತು. ಭಾವುಕಳಾಗಿಬಿಡುತ್ತಿದ್ದೆ’ ಎಂದು ಬಣ್ಣದ ಬದುಕು ವಾಸ್ತವ ಜೀವನದೊಟ್ಟಿಗೆ ಬೆಸೆದುಕೊಂಡ ಪರಿಯನ್ನು ಅವರು ವಿವರಿಸುತ್ತಾರೆ.

ಅಲ್ಲದೇ ಈ ಸಿನಿಮಾದ ಕಥೆ ಮತ್ತು ಅದರಲ್ಲಿ ತಮ್ಮ ಪಾತ್ರಕ್ಕಿರುವ ಮಹತ್ವದ ಬಗ್ಗೆ ಅವರಿಗೆ ತುಂಬ ಖುಷಿಯಿದೆ. ನಿರ್ದೇಶಕ ಪ್ರಭು ಶ್ರೀನಿವಾಸ್‌ ಅವರನ್ನೂ ಅವರ ಪ್ರತಿಭೆಯನ್ನೂ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಈ ಚಿತ್ರದಲ್ಲಿ ಅವರು ಜಾನಕಿ ಅನ್ನೊ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಕೋಪ, ರೋಷ, ಪ್ರೀತಿ, ತುಂಟತನ ಎಲ್ಲವೂ ಇರುವ ಪಾತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಎಲ್ಲ ಕಲಾವಿದರಿಗೂ ಇರುತ್ತದೆ. ಅದರಲ್ಲಿಯೂ ನಟಿಯರಿಗಂತೂ ತಾವೂ ಪಂಚಿಂಗ್‌ ಡೈಲಾಗ್‌ ಹೊಡೀಬೇಕು ಎಂಬ ಬಯಕೆ ಇರುತ್ತದೆ. ಈ ಎಲ್ಲವೂ ಜಾನಕಿಯ ಪಾತ್ರದಲ್ಲಿದೆ. ಅಲ್ಲದೇ ನಾಯಕನಷ್ಟೇ ಮಹತ್ವ ನಾಯಕಿಗೂ ಇದೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ. ಜತೆಗೆ ಅವರು ಈ ಚಿತ್ರದಲ್ಲಿ ಬುಲೆಟ್‌ ಬೈಕ‌್ ಅನ್ನೂ ಓಡಿಸಿದ್ದಾರೆ. ಅದುವರೆಗೂ ಬುಲೆಟ್‌ ಓಡಿಸಿ ಗೊತ್ತಿರದ ಅವರು ವಿಶ್ವಾಸದಿಂದಲೇ ಚಲಾಯಿಸುವುದನ್ನು ಕಂಡ ನಿರ್ದೇಶಕರು ಮತ್ತೂ ಒಂದೆರಡು ಬೈಕ್‌ ಓಡಿಸುವ ದೃಶ್ಯ ಅಳವಡಿಸಿದರಂತೆ! ಹಾಗೆಯೇ ಇವರ ಅಭಿನಯವನ್ನು ನೋಡಿ ಇವರಿಗೆ ಹೆಚ್ಚುವರಿಯಾಗಿ ಒಂದಿಷ್ಟು ಡೈಲಾಗ್‌ಗಳು, ದೃಶ್ಯಗಳನ್ನೂ ಅಳವಡಿಸಿದ್ದಾರಂತೆ.

ದರ್ಶನ್‌ ಅಭಿನಯದ ‘ಕರಿಯ’ ಸಿನಿಮಾದ ನೆರಳು ಈ ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಮಾಡುವುದಿಲ್ಲವೇ ಎಂಬ ಪ್ರಶ್ನೆಗೆ ಅವರು ಚಿತ್ರದ ಟ್ಯಾಗ್‌ ಲೈನ್‌ ’ಇವ್ನು ಬೇರೆ ಥರ’ ಎಂಬುದನ್ನೇ ಪುನರುಚ್ಚರಿಸುತ್ತಾರೆ.

ಸಂತೋಷ್‌ ಅವರೊಂದಿಗೆ ನಟಿಸಿದ ಅನುಭವದ ಕುರಿತೂ ಅವರು ಉತ್ಸಾಹದಿಂದ ಮಾತನಾಡುತ್ತಾರೆ. ‘ಕರಿಯ 2 ಸಿನಿಮಾ ನಿರ್ಮಾಪಕ ಸಂತೋಷ್‌ ತಂದೆ. ಆದರೆ ಅವರಿಗೆ ನಿರ್ಮಾಪಕನ ಮಗ  ಎಂಬ ಯಾವ ಹಮ್ಮೂ ಇಲ್ಲ. ಎಲ್ಲರ ಜತೆ ಬೆರೆಯುತ್ತ ಖುಷಿಯಾಗಿರುತ್ತಾರೆ. ಅವರ ಪ್ರತಿಭಾಶಕ್ತಿಯಂತೂ ಅದ್ಭುತ. ಕರಿಯ ಸಿನಿಮಾದ ಮೂಲಕ ದರ್ಶನ್‌ ಅವರು ಎಷ್ಟು ಹೆಸರುಗಳಿಸಿದರೋ ಅಷ್ಟೇ ಹೆಸರನ್ನು ಈ ಸಿನಿಮಾದ ಮೂಲಕ ಸಂತೋಷ್‌ ಗಳಿಸಿದರೆ ಅಚ್ಚರಿಯಿಲ್ಲ’ ಎನ್ನುವುದು ಅವರ ಭವಿಷ್ಯನುಡಿ.

ಮುಂದೆಯೂ ಹೀಗೆ ಭಿನ್ನ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲ ಅವರದು.

‘ಮುಂದೊಂದು ದಿನ ನಾನು ಹಿಂತಿರುಗಿ ನೋಡಿದಾಗ ನನ್ನ ಬಗ್ಗೆ ನನಗೆ ಆತ್ಮತೃಪ್ತಿ ಮೂಡಬೇಕು. ನಾನು ನಟಿಸಿದ ಎಲ್ಲ ಪಾತ್ರಗಳೂ ನನ್ನ ಹೆಸರಿನೊಟ್ಟಿಗೆ ಸೇರುತ್ತ ಹೋಗಬೇಕು. ನನ್ನ ಪಾತ್ರಗಳ ಹೆಸರೇ ನನ್ನ ಡೆಸಿಗ್ನೇಶನ್‌ ಆಗಬೇಕು. ನಾನು ಮಾಡುವ ಪಾತ್ರಗಳು ಪ್ರೇಕ್ಷಕರು ಏನಾದರೂ ಹೊಸತನ್ನು ಕಲಿಯಬೇಕು’ ಎಂದು ಪ್ರತಿಭೆಯ ಮೂಲಕವೇ ಬೆಳೆಯಬೇಕು ಎಂಬ ತಮ್ಮ ಬದ್ಧತೆಯನ್ನು ಅವರು ವ್ಯಕ್ತಪಡಿಸುತ್ತಾರೆ.

ಹಾಗೆಯೇ ತಮ್ಮ ಪ್ರತಿಭೆಯನ್ನು ಜನರು ಗುರ್ತಿಸಬೇಕು ಎಂಬ ಅಭಿಲಾಷೆಯೂ ಅವರಿಗಿದೆ. ‘ಈ ಗುರ್ತಿಸುವಿಕೆ ಎನ್ನುವುದು ಅವಾರ್ಡ್‌ಗಳ ಮೂಲಕ ಅಲ್ಲ, ರಿವಾರ್ಡ್‌ಗಳ ಮೂಲಕ’ ಎಂದೂ ಅವರು ಸ್ಪಷ್ಟವಾಗಿ ಹೇಳುತ್ತಾರೆ.

ಸದ್ಯಕ್ಕೆ ರಾಮಚಂದ್ರ ಎಂಬ ಹೊಸ ನಿರ್ದೇಶಕರು ನಿರ್ದೇಶಿಸಿರುವ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ಅವರು ಮತ್ತೊಂದು ಭಿನ್ನ ಪಾತ್ರಕ್ಕಾಗಿ ಕಾಯುತ್ತಿದ್ದಾರೆ.

**

ನಾನು ದೇವರಿಗೆ ನಮಸ್ಕಾರ ಮಾಡುವುದನ್ನು ಮರೆತಿರಬಹುದು. ಆದರೆ ನನ್ನ ಕಾಸ್ಟ್ಯೂಮ್‌, ಮೇಕಪ್‌ ಮತ್ತು ಅಮ್ಮನಿಗೆ ನಮಸ್ಕಾರ ಮಾಡುವುದನ್ನು ನಾನು ಒಂದು ದಿನವೂ ಮರೆತಿಲ್ಲ. ಇದು ನನ್ನ ಬದುಕಿನ ಶೈಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry