7

ಹೌದು ಸ್ವಾಮಿ..! ಇದು ಸಾಮಾನ್ಯರ ಸಮಯ!!

Published:
Updated:
ಹೌದು ಸ್ವಾಮಿ..! ಇದು ಸಾಮಾನ್ಯರ ಸಮಯ!!

ಜನಪ್ರಿಯ ರಿಯಾಲಿಟಿ ಷೋ ‘ಬಿಗ್‌ಬಾಸ್‌’ನ ಕನ್ನಡದ ಐದನೇ ಆವೃತ್ತಿ ಅಕ್ಟೋಬರ್‌ 15ರಂದು ಆರಂಭವಾಗುತ್ತಿದೆ. ಸೆಲೆಬ್ರಿಟಿಗಳಿಗಷ್ಟೇ ಮೀಸಲಾಗಿದ್ದ ಬಿಗ್‌ಬಾಸ್‌ ಮನೆ ಬಾಗಿಲು ಈ ಸಲ ಆರು ಜನ ಸಾಮಾನ್ಯರಿಗೂ ತೆರೆದುಕೊಂಡಿರುವುದು ವಿಶೇಷ. ಬಿಗ್‌ಬಾಸ್‌ ಅಂದರೆ ಮನರಂಜನೆಯ ಜತೆ ಒಂದಿಷ್ಟು ವಿವಾದಗಳೂ ಸಾಮಾನ್ಯ. ಐದರಲ್ಲಿ ನಾಲ್ಕು ಸೀಸನ್‌ಗಳ ನಿರ್ದೇಶಕರಾಗಿ ಕೆಲಸ ಮಾಡಿರುವ ಕಲರ್ಸ್‌ ಕನ್ನಡ ಮತ್ತು ಸೂಪರ್‌ ಚಾನೆಲ್‌ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಅವರು ಚಂದನವನದ ಜತೆಗಿನ ಮಾತುಕತೆಯಲ್ಲಿ ಅನೇಕ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

* ಬಿಗ್‌ಬಾಸ್‌ನ ಐದನೇ ಸೀಸನ್‌ವರೆಗಿನ ಪ್ರಯಾಣ ದಾರಿಯನ್ನು ಹಿಂತಿರುಗಿ ನೋಡಿದರೆ ಏನನಿಸುತ್ತದೆ?

ಒಂದನೇ ಸೀಸನ್‌ ಸ್ಟಾರ್‌ ವಾಹಿನಿಯಲ್ಲಿ ಬಂದಿತ್ತು. ಆದ್ದರಿಂದ ವೈಯಕ್ತಿಕವಾಗಿ ಇದು ನನಗೆ ನಾಲ್ಕನೇ ಸೀಸನ್‌.

ಬಿಗ್‌ಬಾಸ್‌ ಜತೆಗಿನ ಈ ಪ್ರಯಾಣ ನಮಗೆ ತುಂಬ ವಿದ್ಯೆಗಳನ್ನು ಕಲಿಸಿದೆ. ಅಷ್ಟೊಂದು ಜನ ಸ್ಪರ್ಧಿಗಳನ್ನು ಭೇಟಿಯಾಗಿದ್ದೇವೆ. ಅವರ ಜತೆ ದಿನಗಳನ್ನು ಕಳೆದಿದ್ದೇವೆ. ಅವರನ್ನು ಅರ್ಥ ಮಾಡಿಕೊಂಡಿದ್ದೇವೆ. ಯಾರಿಗೆ ಇದರಿಂದ ಲಾಭ ಆಯ್ತೋ, ಯಾರಿಗೆ ತೊಂದರೆ ಆಯ್ತೋ, ಯಾರು ಗೆದ್ದರೋ ಯಾರು ಸೋತರೋ ಈ ಎಲ್ಲಕ್ಕಿಂತ ಹೆಚ್ಚಾಗಿ ನಾನು ದಿನದಿನವೂ ಗೆದ್ದಿದ್ದೀನಿ– ಸೋತಿದ್ದೀನಿ. ಅದರಿಂದ ನನ್ನ ಭಾವಪ್ರಪಂಚ, ನನ್ನ ಅನುಭವ ಪ್ರಪಂಚ ದೊಡ್ಡದಾಗಿದೆ.

* ಹಿಂದಿನ ನಾಲ್ಕು ಸೀಸನ್‌ಗಿಂತ ಈ ಸೀಸನ್‌ ಯಾವ ರೀತಿ ಭಿನ್ನವಾಗಿರುತ್ತದೆ?

ಐದನೇ ಸೀಸನ್‌ನಲ್ಲಿ ಸುದೀಪ್‌ ಅವರನ್ನು ಬಿಟ್ಟು ಉಳಿದಿದ್ದೆಲ್ಲವೂ ಹೊಸತೇ ಆಗಿರುತ್ತದೆ. ಸುದೀಪ್‌ ವಿಷಯದಲ್ಲಿ ಕೂಡ ಅವರು ಪ್ರತಿ ಸೀಸನ್‌ನಲ್ಲಿ ತಮ್ಮ ಲುಕ್‌ ಅನ್ನು ತುಂಬ ಎಚ್ಚರಿಕೆಯಿಂದ ನಿರ್ವಹಿಸಿದ್ದಾರೆ. ಒಂದು ಸೀಸನ್‌ನಲ್ಲಿದ್ದ ಲುಕ್‌ ಇನ್ನೊಂದರಲ್ಲಿ ಇಲ್ಲ. ಬರೀ ಲುಕ್‌ ಅಷ್ಟೇ ಅಲ್ಲ, ಕಾರ್ಯಕ್ರಮ ಪ್ರಸ್ತುತಿಯ ಶೈಲಿಯಲ್ಲಿಯೂ ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಈ ಸೀಸನ್‌ನಲ್ಲಿಯೂ ಅದೇ ಸುದೀಪ್‌ ಬೇರೆಯದೇ ರೀತಿ ಕಾಣಿಸಿಕೊಳ್ಳುತ್ತಾರೆ.

ಅಲ್ಲದೇ ಈ ವರ್ಷ ಬಿಗ್‌ಬಾಸ್‌ ಪ್ರಸಾರವಾಗುವ ಸಮಯವೂ ಬದಲಾಗಿದೆ. ಕಳೆದ ಎರಡೂ ಸೀಸನ್‌ಗಳಲ್ಲಿ ರಾತ್ರಿ ಒಂಬತ್ತು ಗಂಟೆಗೆ ಬರುತ್ತಿತ್ತು. ಈ ಸಲ ಎಂಟು ಗಂಟೆಗೆ ಬರುತ್ತಿದೆ. ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಪ್ರಸಾರವಾಗುತ್ತದೆ. ಚಾನೆಲ್‌ ಹೊಸತು, ಸಮಯ ಹೊಸತು. ಅಲ್ಲದೇ ಹೊಸ ಹದಿನೇಳು ಮುಖಗಳು ಈ ಸಲ ಮನೆಯಲ್ಲಿರುತ್ತವೆ. ಹೊಸ ಮನುಷ್ಯರು ಮನೆಗೆ ಬಂದಾಗ ಹೊಸ ರೀತಿಯ ಆಲೋಚನೆಗಳು, ಹೊಸ ತಿಕ್ಕಾಟಗಳು, ಹೊಸ ಬಗೆಯ ಜೀವನ ನೋಡಲಿಕ್ಕೆ ಸಿಗುತ್ತದೆ. ಹನ್ನೊಂದು ಸೆಲೆಬ್ರಿಟಿಗಳು, ಆರು ಸಾಮಾನ್ಯ ಜನರು ಒಟ್ಟು ಹದಿನೇಳು ಜನರು ಈ ಸಲ ಬಿಗ್‌ಬಾಸ್‌ ಮನೆಯಲ್ಲಿರುತ್ತಾರೆ.  ಕೆಲವು ಹಳೆಯ ಟಾಸ್ಕ್‌ಗಳು ಉಳಿದಿ ರುತ್ತವೆ. ಆದರೆ ಹಲವು ಹೊಸ ಟಾಸ್ಕ್‌ಗಳು ಬರಲಿವೆ. ಬಿಗ್‌ ಬಾಸ್‌ ಮನೆಯ ವಿನ್ಯಾಸವೂ ಬದಲಾಗಿದೆ.

* ಸಾಮಾನ್ಯ ಜನರನ್ನು ಯಾವ ರೀತಿ ಆಯ್ಕೆ ಮಾಡಿಕೊಳ್ಳುತ್ತೀರಿ?

ವಿಡಿಯೊ ಅಪ್‌ಲೋಡ್‌ ಮಾಡಲಿಕ್ಕೆ ಕೇಳಿದ್ದೆವು. ನಲ್ವತ್ತು ಸಾವಿರ ವಿಡಿಯೊಗಳು ಅಪ್‌ಲೋಡ್‌ ಆಗಿದ್ದವು. ಅದರಲ್ಲಿ ಆರುನೂರು ವಿಡಿಯೊಗಳ ಪಟ್ಟಿ ಸಿದ್ಧಪಡಿಸಿದ್ದೇವೆ. ಆ ಆರುನೂರು ವಿಡಿಯೊಗಳನ್ನು ನಾನು ನೋಡಿದ್ದೇವೆ. ಅವರಲ್ಲಿ ಆಯ್ಕೆಯಾದ ಒಂದು ನೂರು ಜನರನ್ನು ಭೇಟಿಯಾಗಿ ಅವರಲ್ಲಿ ಆರು ಜನರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

* ಬಿಗ್‌ಬಾಸ್‌ ಅಂದರೆ ‘ಮುಖವಾಡಗಳ ಹಿಂದಿನ ಮುಖ ಬಯಲಾಗುತ್ತದೆ’ ಎಂದು ಬಿಂಬಿಸಿಕೊಂಡು ಬಂದಿದ್ದೀರಿ. ಸೆಲಿಬ್ರಿಟಿಗಳಿಗೆ ‘ಇಮೇಜ್‌’ನ ಮುಖವಾಡಗಳಿರುತ್ತವೆ. ಆದರೆ ಜನಸಾಮಾನ್ಯರಿಗೆ ಅಂಥ ಯಾವ ಮುಖವಾಡಗಳೂ ಇರುವುದಿಲ್ಲವಲ್ಲ...

‘ಮುಖವಾಡಗಳು ಕಳಚಿ ಬೀಳುತ್ತವೆ’ ಎನ್ನುವುದು ಎರಡನೇ ಸೀಸನ್‌ನಿಂದ ಬಿಗ್‌ಬಾಸ್ ಬಗ್ಗೆ ಬೆಳೆದುಕೊಂಡು ಬಂದಿರುವ ತಪ್ಪುಗ್ರಹಿಕೆ. ಅದಷ್ಟೇ ಅಲ್ಲ ಬಿಗ್‌ಬಾಸ್‌ ಅಂದರೆ. ಇದು ಹದಿನೇಳು ಮನಸ್ಸುಗಳ ಅಧ್ಯಯನ. ಅದು ಸೆಲೆಬ್ರಿಟಿಯಾಗಲಿ ಸಾಮಾನ್ಯರಾಗಲಿ ಹದಿನೇಳು ಥರದ ವ್ಯಕ್ತಿತ್ವಗಳು ಸೇರಿಕೊಂಡಾಗ ಆ ಸಮಾಜ ಹೇಗಿರಬಹುದು ಎಂಬುದರ ಚಿತ್ರಣ.

ಇನ್ನು ಮುಖವಾಡಗಳ ವಿಷಯಕ್ಕೆ ಬರುವುದಾದರೆ ಸೆಲೆಬ್ರಿಟಿಗಳಿಗೆ ಒಂದು ಇಮೇಜ್‌ ಇರಬಹುದು. ಆದರೆ ಒಬ್ಬ ಸಾಮಾನ್ಯ ಮನುಷ್ಯ ಮೊದಲ ದಿನ ಒಂದು ರೀತಿ ಮಾತನಾಡಿ ಮೂರನೇ ದಿನ ಇನ್ನೊಂದು ರೀತಿ ಮಾತನಾಡಿದರೆ ಅದೂ ಮುಖವಾಡವೇ ಅಲ್ಲವೇ? ಹಾಗಾಗಿ ಮನೆ ಒಳಗೆ ಹೋದಮೇಲೆ ಸಾಮಾನ್ಯನಿಗೂ ಸೆಲಿಬ್ರಿಟಿಗೂ ಏನೂ ವ್ಯತ್ಯಾಸ ಇರುತ್ತದೆ ಎಂದು ನನಗನ್ನಿಸುವುದಿಲ್ಲ.

* ಬಿಗ್‌ ಬಾಸ್‌ ಮತ್ತು ಸುದೀಪ್‌ ನಡುವಿನ ಬಾಂಧವ್ಯದ ಬಗ್ಗೆ ಹೇಳಿ.

ಬಿಗ್‌ಬಾಸ್‌ನ ಈ ಐದು ಸೀಸನ್‌ಗಳ ಜತೆಯಲ್ಲಿ ಸುದೀಪ್‌ ಅವರದೊಂದು ಅದ್ಭುತವಾದ ಜರ್ನಿಯಿದೆ. ಮೊದಲನೇ ಸೀಸನ್‌ನಲ್ಲಿರುವ ಸುದೀಪ್‌ ಅವರಿಗೂ ಈ ಹೊತ್ತಿನ ಐದನೇ ಸೀಸನ್‌ನ ಸುದೀಪ್‌ ಅವರಿಗೂ ಬಹಳ ವ್ಯತ್ಯಾಸವಿದೆ. ಒಂದನೇ ಸೀಸನ್‌ನಲ್ಲಿ ಅವರ ‘ಈಗ’ ಸಿನಿಮಾ ಬಂದಿರಲಿಲ್ಲ. ಸಿಸಿಎಲ್‌ ಗೆದ್ದಿರಲಿಲ್ಲ. ಅವರ ಹಲವು ಮುಖ್ಯ ಪ್ರಾಜೆಕ್ಟ್‌ಗಳು ಆಗಿರಲಿಲ್ಲ. ಆದರೆ ಈ ಹೊತ್ತಿಗೆ ಸುದೀಪ್‌ ಆ ಎಲ್ಲ ಹಂತಗಳನ್ನೂ ದಾಟಿ ಹಾಲಿವುಡ್‌ ಸಿನಿಮಾ ಮಾಡುವ ಮಟ್ಟಕ್ಕೆ ಆ್ಯಕ್ಟರ್‌ ಆಗಿ ಅವರು ಬೆಳೆದಿದ್ದಾರೆ.

ಬಿಗ್‌ಬಾಸ್‌ ಜತೆ ಅವರದು  ಇನ್‌ಕ್ರೆಡಿಬಲ್‌ ಇನ್ವಾಲ್‌ಮೆಂಟ್‌. ಬಿಗ್‌ಬಾಸ್‌ ಕಾರ್ಯಕ್ರಮವನ್ನು ಗೌರವಧನ ತೆಗೆದುಕೊಂಡೇ ಮಾಡುತ್ತಾರೆ ಅವರು. ಆದರೆ ಆ ಹಣದ ಆಚೆಗೂ ಈ ಕಾರ್ಯಕ್ರಮದ ಬಗ್ಗೆ ಅವರಿಗೆ ಪ್ರೀತಿ ಇಲ್ಲದೇ ಹೋದರೆ ಅದನ್ನು ಇಷ್ಟು ಅದ್ಭುತವಾಗಿ ನಡೆಸಿಕೊಡುವುದು ಸಾಧ್ಯವಾಗಲ್ಲ. ಅಡುಗೆ, ಕ್ರಿಕೆಟ್‌, ನಟನೆ, ಸಿನಿಮಾ, ಹಾಡುವುದು ಈ ಎಲ್ಲವೂ ಸುದೀಪ್‌ ಅವರ ವ್ಯಕ್ತಿತ್ವದ ಮುಖಗಳು. ಅದರ ಜತೆಗೆ ಇನ್ನೊಂದನ್ನು ಸೇರಿಸುವುದಿದ್ದರೆ ಅದು ಬಿಗ್‌ಬಾಸ್‌.

ಬಿಗ್‌ಬಾಸ್‌ ಅನ್ನು ಅವರು ತಮ್ಮ ಜೀವನದ ಜರ್ನಿಯ ಭಾಗವನ್ನಾಗಿ ಮಾಡಿಕೊಂಡಿದ್ದರಿಂದ ಇವೆಲ್ಲವೂ ಸಾಧ್ಯವಾಗಿದೆ. ನಾವು ವರ್ಷಕ್ಕೆ ಒಂದು ಸಲ ಬಿಗ್‌ಬಾಸ್‌ ಮಾಡುತ್ತೇವೆ. ಆದರೆ ಸತತವಾಗಿ ಅದರ ಬಗ್ಗೆ ಚರ್ಚೆ ಮಾಡುತ್ತಿರುತ್ತೇವೆ. ಕಳೆದ ಸೀಸನ್‌ ಮುಗಿದ ದಿನ ರಾತ್ರಿಯಿಂದಲೇ ಮುಂದಿನ ಸೀಸನ್‌ ಬಗ್ಗೆ ಮಾತುಕತೆ ಶುರುವಾಗಿದೆ. ಇದು ಅವರಿಗೆ ಬಿಗ್‌ಬಾಸ್‌ ಮೇಲೆ ಇರುವ ಪ್ರೀತಿಯಿಂದ ಸಾಧ್ಯವಾಗಿದ್ದು. ಇಂದು ಅವರು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣದಲ್ಲಿದ್ದಾರೆ. ಅದರ ನಡುವೆಯೂ ಸತತವಾಗಿ ನನ್ನೊಂದಿಗೆ ಸಂಪರ್ಕದಲ್ಲಿರುತ್ತಾರೆ.

* ಬಿಗ್‌ ಬಾಸ್‌ ಅನ್ನು ಕಲರ್ಸ್‌ ಕನ್ನಡದಿಂದ ಕಲರ್ಸ್‌ ಸೂಪರ್‌ ಚಾನೆಲ್‌ಗೆ ಬದಲಾಯಿಸಲು ಕಾರಣ ಏನು?

ನಮ್ಮ ಬಳಿ ಎರಡು ವಾಹಿನಿಗಳಿವೆ. ಎರಡನೇ ಚಾನೆಲ್‌ಗೆ ಬಿಗ್‌ಬಾಸ್‌ನ ಅವಶ್ಯಕತೆ ಇದೆ. ಈ ರೀತಿಯ ದೊಡ್ಡ ಕಾರ್ಯಕ್ರಮಗಳು ಒಂದು ವಾಹಿನಿಯನ್ನು ಮೇಲೆ ತೆಗೆದುಕೊಂಡು ಹೋಗುತ್ತವೆ. ಕಲರ್ಸ್‌ ಸೂಪರ್‌ಗೆ ಸುದೀಪ್‌ ಅವರು ಬೇಕು. ಅದಕ್ಕೆ ಬಿಗ್‌ಬಾಸ್‌ ಬೇಕು. ಬಿಗ್‌ಬಾಸ್‌ಗೆ ಚಾನಲ್‌ ಅನ್ನು ಮೀರಿ ಜನರನ್ನು ಪ್ರಭಾವಿಸುವ ಶಕ್ತಿ ಇದೆ. ಅದು ಎರಡನೇ ಸೀಸನ್‌ಗೆ ಸಾಬೀತಾಗಿದೆ. ಹಾಗಾಗಿ ವಾಹಿನಿಗೆ ಅದರಿಂದ ಲಾಭ ಆಗುತ್ತದೆ. ಕಲರ್ಸ್‌ ಸೂಪರ್‌ ಅನ್ನು ಮುಖ್ಯವಾಹಿನಿಗೆ ತರುವ ನಮ್ಮ ಉದ್ದೇಶ ಬಿಗ್‌ಬಾಸ್‌ನಿಂದ ಸಾಧ್ಯವಾಗುತ್ತದೆ. ಸುದೀಪ್‌ ಥರದ ಒಬ್ಬ ಸೂಪರ್‌ಸ್ಟಾರ್‌ನಿಂದ ಸಾಧ್ಯವಾಗುತ್ತದೆ.

* ಪ್ರತಿಯೊಂದು ಬಿಗ್‌ಬಾಸ್ ಸೀಸನ್‌ ಒಂದಿಷ್ಟು ವಿವಾದಗಳು, ಹುಚ್ಚ ವೆಂಕಟ್‌, ಪ್ರಥಮ್‌, ಭುವನ್‌ರಂಥ ಒಂದಿಷ್ಟು ವಿವಾದಿತ ಮನುಷ್ಯರನ್ನು ಹುಟ್ಟುಹಾಕುತ್ತಿದೆಯಲ್ಲ...

ವಿವಾದಿತ ವ್ಯಕ್ತಿಗಳನ್ನಷ್ಟೇ ಬಿಗ್‌ಬಾಸ್‌ಗೆ ಜೋಡಿಸುವುದಕ್ಕಿಂತ ಜನರು ಅವರನ್ನಷ್ಟೇ ನೋಡುತ್ತಿದ್ದಾರೆ ಅನ್ನಬಹುದು. ಒಬ್ಬ ಪ್ರಥಮ್‌, ಒಬ್ಬ ಹುಚ್ಚ ವೆಂಕಟ್‌ರಂಥ ಒಂದೆರಡು ವ್ಯಕ್ತಿಗಳು ಇದ್ದಾರೆ. ಆದರೆ ಅವರನ್ನು ಹೊರತುಪಡಿಸಿ ತುಂಬ ಜನರು ಬಿಗ್‌ಬಾಸ್‌ನಲ್ಲಿ ಬಂದಿದ್ದಾರೆ. ಅವರನ್ನು ನಾವು ಮರೆತುಬಿಟ್ಟಿದ್ದೇವೆ. ವಿಜಯರಾಘವೇಂದ್ರರಂಥ ಸಜ್ಜನ ಇದ್ದಾರೆ, ಕಿರಿಕ್‌ ಕೀರ್ತಿ, ಮೋಹನ್‌, ರೆಹಮಾನ್‌, ರೇಖಾ, ಚಂದನ್‌, ಅರುಣ್‌ ಸಾಗರ್‌, ಆನಂದ್‌ ಇವರೆಲ್ಲ ಬಿಗ್‌ಬಾಸ್‌ ಮನೆಯಲ್ಲಿದ್ದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಬಹಳ ಗಟ್ಟಿ ವ್ಯಕ್ತಿತ್ವಗಳು. ಅವರನ್ನೆಲ್ಲ ಮರೆತು ಪ್ರಥಮ್‌ ಮತ್ತು ಹುಚ್ಚ ವೆಂಕಟ್‌ ಮಾತ್ರ ಯಾಕೆ ನೆನಪಾಗಬೇಕು ಎಂಬ ಬಗ್ಗೆ ನನಗೆ ಸ್ವಲ್ಪ ಅಸಮಧಾನವಿದೆ. ಒಂದು ಸಮಾಜದಲ್ಲಿ ಯಾವ ರೀತಿಯ ಜನರನ್ನು ನೋಡಬಹುದು ಆ ಎಲ್ಲ ರೀತಿಯ ಜನರೂ ಬಿಗ್‌ಬಾಸ್‌ನಲ್ಲಿದ್ದರು.

* ಕಳೆದ ನಾಲ್ಕು ಸೀಸನ್‌ಗಳನ್ನು ನೋಡಿಕೊಂಡ ಬಂದ ಜನರು ಈ ಸೀಸನ್‌ಲ್ಲಿ ಹೊಸತಾಗಿ ಏನನ್ನು ನಿರೀಕ್ಷಿಸಬಹುದು?

ನಿರೀಕ್ಷೆಗಳು ದೊಡ್ಡದಿವೆ. ಆ ನಿರೀಕ್ಷೆಗಳ ಭಾರಕ್ಕೆ ನಾನು ಸ್ವಲ್ಪ ಕುಸಿದುಹೋಗಿದ್ದೀನಿ. ಆ ನಿರೀಕ್ಷೆಗಳ ಭಾರ ನನ್ನನ್ನು ಎಕ್ಸೈಟ್  ಮಾಡಿದೆ, ನರ್ವಸ್‌ ಮಾಡಿದೆ. ಇಷ್ಟು ಜನ ನಮ್ಮ ಕಾರ್ಯಕ್ರಮವನ್ನು ಇಷ್ಟಪಡುತ್ತಿದ್ದಾರಲ್ಲಾ ಎಂಬ ಖುಷಿ, ಜತೆಗೆ ಅವರ ನಿರೀಕ್ಷೆ ಇಡೇರದಿದ್ದರೆ ಎಂಬ ಆತಂಕವೂ ಇದೆ. ಈ ಎರಡೂ ಭಾವನೆಗಳ ಮಿಶ್ರಣ ನನ್ನ ಮನಸಲ್ಲಿದೆ.

ಇದರಲ್ಲಿ ಹೊಸ ಹದಿನೇಳು ಜನರನ್ನುನೋಡಬಹುದು. ಖಂಡಿತವಾಗಿಯೂ ಹೊಸ ಮುಖ ಉದಯವಾಗುತ್ತದೆ. ಅದು ಸಾಕಷ್ಟು ಮನರಂಜನಾತ್ಮಕವಾಗಿರುತ್ತದೆ ಕೂಡ. ಈ ಸಲ ಹೆಚ್ಚು ಸಿದ್ಧತೆ ಮಾಡಿಕೊಂಡಿದ್ದೇವೆ. ಆದ್ದರಿಂದ ಹೆಚ್ಚು ನಿಯಂತ್ರಣ ಸಾಧ್ಯವಾಗುತ್ತದೆ ಅಂದುಕೊಂಡಿದ್ದೇವೆ. ಆದರೆ ಮನೆಯಲ್ಲಿ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry