7

ಹಳ್ಳಿ ಹೈದನ ಪಯಣದ ಕಥೆ

Published:
Updated:
ಹಳ್ಳಿ ಹೈದನ ಪಯಣದ ಕಥೆ

‘ಫಸ್ಟ್‌ ರ‍್ಯಾಂಕ್‌ ರಾಜು’ ಸಿನಿಮಾ ನಿರ್ದೇಶಿಸಿದ್ದ ನರೇಶ್‌ ಕುಮಾರ್ ಈಗ ‘ರಾಜು ಕನ್ನಡ ಮೀಡಿಯಂ’ ಎನ್ನುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ ವ್ಯಕ್ತಿ ನಗರ ಜೀವನ ಪ್ರವೇಶಿಸಿದಾಗ ಆತನ ಮನಸ್ಸಿನಲ್ಲಿ ಯಾವ ಬಗೆಯ ಭಾವನೆಗಳು ಮೂಡಬಹುದು ಎಂಬುದನ್ನು ಸಿನಿಮಾ ಮೂಲಕ ತೋರಿಸಲು ಮುಂದಾಗಿದ್ದಾರೆ ನರೇಶ್. ಈ ಸಿನಿಮಾದಲ್ಲಿ ನಟ ಸುದೀಪ್ ಅವರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಒಂದು ಪ್ಲಸ್ ಪಾಯಿಂಟ್.

‘ಸಿನಿಮಾ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಕೊಡೆಯೊಂದರ ಅಡಿಯಲ್ಲಿ... ಎನ್ನುವ ಹಾಡನ್ನು ಸೋನು ನಿಗಂ ಹಾಡಿದ್ದು, ಅದನ್ನು ಮಲೆನಾಡಿನಲ್ಲಿ ಚಿತ್ರೀಕರಿಸಿದ್ದೇವೆ. ನಮ್ಮ ಸಿನಿಮಾದಲ್ಲಿ ಶ್ರೇಯಾ ಘೋಷಾಲ್, ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಕೂಡ ಹಾಡಿದ್ದಾರೆ’ ಎಂದು ನರೇಶ್‌ ಕುಮಾರ್‌ ತಿಳಿಸಿದರು.

ಸಿನಿಮಾ ಬಗ್ಗೆ ಮಾಹಿತಿ ನೀಡಲು ನರೇಶ್ ಹಾಗೂ ಇಡೀ ಚಿತ್ರ ತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಕನ್ನಡ ಮಾಧ್ಯಮದಲ್ಲಿ ಓದಿದ ವ್ಯಕ್ತಿ ಎದುರಿಸಬಹುದಾದ ಕೀಳರಿಮೆಗಳನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಸಿನಿಮಾದಲ್ಲಿ ಮೂವರು ನಾಯಕಿಯರು ಇದ್ದಾರೆ’ ಎಂದರು ನರೇಶ್.

ಆಶಿಕಾ, ಅವಂತಿಕಾ ಶೆಟ್ಟಿ ಹಾಗೂ ವಿದೇಶಿ ಬೆಡಗಿ ಏಂಜಲೀನಾ ಚಿತ್ರದ ನಾಯಕಿಯರು. ಅವಂತಿಕಾ ಅವರದ್ದು ನಗರದ ಹುಡುಗಿಯೊಬ್ಬಳ ಪಾತ್ರವಂತೆ. ಏಂಜಲೀನಾ ಅವರದ್ದು ವಿದೇಶಿ ಬೆಡಗಿಯ ಪಾತ್ರ. ಚಿಕ್ಕಮಗಳೂರು, ಬೆಂಗಳೂರು ಹಾಗೂ ಅಮೆರಿಕದ ದ್ವೀಪವೊಂದರಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆಯಂತೆ.

(ನರೇಶ್ ಕುಮಾರ್)

ಸಿನಿಮಾವನ್ನು ಅಕ್ಟೋಬರ್ 27ರಂದು ಬಿಡುಗಡೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಬಿಗ್‌ಬಾಸ್‌ ಪ್ರಥಮ್, ಕಿರಿಕ್ ಕೀರ್ತಿ, ಇಂದ್ರಜಿತ್ ಲಂಕೇಶ್ ಅವರೂ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು ನಿರ್ಮಾಪಕ ಸುರೇಶ್.

‘ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ. ಅದಕ್ಕೂ ಮೊದಲೇ ಈ ಸಿನಿಮಾ ಬಿಡುಗಡೆ ಆಗಬೇಕು. ಸಿನಿಮಾದಲ್ಲಿ ಇರುವ ಕನ್ನಡ ಮೀಡಿಯಂ ಎನ್ನುವ ಪದಗಳಿಗೆ ಒಂದು ಅರ್ಥ ಸಿಗಬೇಕು ಎಂಬ ಉದ್ದೇಶದಿಂದ ಸಿನಿಮಾ ಬಿಡುಗಡೆಗೆ ಈ ದಿನಾಂಕ ನಿಗದಿ ಮಾಡಲಾಗಿದೆ’ ಎಂದರು ಸುರೇಶ್.

‘ಹಳ್ಳಿಯಲ್ಲಿ ಬೆಳೆದ ಹುಡುಗನೊಬ್ಬ ಬೆಂಗಳೂರಿಗೆ ಬಂದು, ಬೆಂಗಳೂರಿನಿಂದ ಅಮೆರಿಕಕ್ಕೆ ಹೋಗುವ ಕಥೆ ಈ ಸಿನಿಮಾದಲ್ಲಿ ಇದೆ. ದೊಡ್ಡ ಬಜೆಟ್‌ನ ಸಿನಿಮಾ ಇದು. ಕಥೆಗೆ ಅಗತ್ಯವಿರುವ ಎಲ್ಲವನ್ನೂ ಒದಗಿಸಿಕೊಟ್ಟಿದ್ದೇನೆ’ ಎಂದೂ ಹೇಳಿದರು.

(ಸುರೇಶ್)

ಸಿನಿಮಾದಲ್ಲಿ ಕನ್ನಡ ಮಾಧ್ಯಮದ ಹುಡುಗನ ಪಾತ್ರ ನಿಭಾಯಿಸಿರುವ ಗುರುನಂದನ್ ಅವರು, ‘ನಾನು ಓದಿದ, ಓಡಾಡಿದ ಸ್ಥಳಗಳಲ್ಲೇ ಚಿತ್ರೀಕರಣ ನಡೆದಿದೆ. ಹಾಗಾಗಿ ನನ್ನ ಪಾತ್ರಕ್ಕೂ, ನನ್ನ ಬಾಲ್ಯದ ದಿನಗಳಿಗೂ ಸಾಮ್ಯ ಇದೆ’ ಎಂದರು ಖುಷಿಯಿಂದ.

ಈ ಸಿನಿಮಾದಲ್ಲಿ ಅಭಿನಯಿಸಿರುವುದು ನಟಿ ಆಶಿಕಾ ಅವರಿಗೂ ಖುಷಿ ಕೊಟ್ಟಿದೆಯಂತೆ. ‘ಈ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಳ್ಳದೆ ಇದ್ದಿದ್ದರೆ, ಮುಂದೆ ಇಂಥದ್ದೊಂದು ಪಾತ್ರ ನನಗೆ ಸಿಗುತ್ತಿತ್ತೋ ಇಲ್ಲವೋ’ ಎಂದರು ಆಶಿಕಾ. ಅವರದ್ದು ಇದರಲ್ಲಿ ಹಳ್ಳಿಯ ಶಾಲೆಯಲ್ಲಿ ಓದುತ್ತಿರುವ ‘ಮಲ್ನಾಡ್ ಹುಡುಗಿ’ಯ ಪಾತ್ರವಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry