7

ಅಬ್ಬರಿಸಿದ ಮಳೆ: ಸಂಚಾರ ದಟ್ಟಣೆ

Published:
Updated:
ಅಬ್ಬರಿಸಿದ ಮಳೆ: ಸಂಚಾರ ದಟ್ಟಣೆ

ಬೆಂಗಳೂರು: ನಗರದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಗುರುವಾರ ರಾತ್ರಿಯೂ ಜೋರಾದ ಮಳೆ ಸುರಿಯಿತು. ರಸ್ತೆ ಮೇಲೆಯೇ ನೀರು ಹರಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.

ರಾಜಾಜಿನಗರ, ವಿಜಯನಗರ, ಹೊಸಕೆರೆಹಳ್ಳಿ, ಕೆಂಗೇರಿ, ರಾಜರಾಜೇಶ್ವರಿನಗರ, ಅಶೋಕನಗರ, ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮನಹಳ್ಳಿ, ಎಚ್.ಎಸ್‌.ಆರ್‌ ಲೇಔಟ್‌, ಬಿ.ಟಿ.ಎಂ ಲೇಔಟ್‌, ಎಂ.ಜಿ. ರಸ್ತೆ, ಶಿವಾಜಿನಗರ ಹಾಗೂ ಸುತ್ತಮುತ್ತ ಭಾರಿ ಮಳೆಯಾಯಿತು.

ಕೋರಮಂಗಲ, ನೃಪತುಂಗ ರಸ್ತೆ, ಹಳೇ ಮದ್ರಾಸ್‌ ರಸ್ತೆ, ರಾಜಾಜಿನಗರ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಯಶವಂತಪುರ, ಹೊಸೂರು ರಸ್ತೆಯ ಡೈರಿ ವೃತ್ತ, ಲಾಲ್‌ಬಾಗ್‌ ಮುಖ್ಯರಸ್ತೆಗಳಲ್ಲಿ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೈಸೂರು ರಸ್ತೆಯಲ್ಲಿ ಹೆಚ್ಚಿನ ದಟ್ಟಣೆ ಕಂಡುಬಂತು.

ಶಿವಾನಂದ ವೃತ್ತದ ರೈಲ್ವೆ ಕೆಳಸೇತುವೆ, ಓಕಳಿಪುರ ಸೇತುವೆ, ಮೆಜೆಸ್ಟಿಕ್‌ ರೈಲ್ವೆ ಕೆಳ ಸೇತುವೆಗಳಲ್ಲಿ 4 ಅಡಿಯಷ್ಟು ನೀರು ಹರಿಯಿತು. ಕೆಲ ಸವಾರರು ಅದರಲ್ಲೇ ವಾಹನಗಳನ್ನು ಓಡಿಸಿಕೊಂಡು ಹೋದರು. ಹಲವು ವಾಹನಗಳ ಎಂಜಿನ್‌ನಲ್ಲಿ ನೀರು ಹೋಗಿ ಅವು ರಸ್ತೆ ಮಧ್ಯೆಯೇ ಕೆಟ್ಟು ನಿಂತವು. ಕೆ.ಆರ್. ಮಾರುಕಟ್ಟೆಯ ವೃತ್ತ ಹಾಗೂ ಕೆಲ ಒಳರಸ್ತೆಗಳಲ್ಲಿ ನೀರು 2 ಅಡಿಯಷ್ಟು ಹರಿಯಿತು.

ಕೋರಮಂಗಲ 4ನೇ ಹಂತದ ಮುಖ್ಯರಸ್ತೆ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ 4 ಅಡಿಯಷ್ಟು ನೀರು ನಿಂತಿತ್ತು. ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರು ತೊಂದರೆ ಅನುಭವಿಸಿದರು.

‘ನಗರದಲ್ಲಿ ರಾತ್ರಿ ಉತ್ತಮ ಮಳೆಯಾಗಿದೆ. ಆದರೆ, ಹಾನಿ ಬಗ್ಗೆ ತಡರಾತ್ರಿಯವರೆಗೆ ಯಾವುದೇ ದೂರು ಬಂದಿಲ್ಲ’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry