7

ಏಕದಿನ, ಟಿ20 ಮಾದರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ಗೆ ಅನುಮೋದನೆ ನೀಡಿದ ಐಸಿಸಿ

Published:
Updated:
ಏಕದಿನ, ಟಿ20 ಮಾದರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ಗೆ ಅನುಮೋದನೆ ನೀಡಿದ ಐಸಿಸಿ

ಬೆಂಗಳೂರು: ಏಕದಿನ ಹಾಗೂ ಟಿ20 ಮಾದರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲೂ ಚಾಂಪಿಯನ್‌ಷಿಪ್‌ ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಸಮ್ಮತಿ ಸೂಚಿಸಿದೆ. ಇದರೊಟ್ಟಿಗೆ ಏಕದಿನ ಕ್ರಿಕೆಟ್‌ನಲ್ಲಿ ಲೀಗ್‌ ಮಾದರಿಯ ಪಂದ್ಯಾವಳಿಗಳನ್ನು ಆಯೋಜಿಸುವ ಬಗ್ಗೆಯೂ ಗಮನ ಹರಿಸಲಾಗಿದೆ.

ಸದ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ಹೆಚ್ಚು ಆಕರ್ಷಿತರಾಗಿರುವ ಕ್ರಿಕೆಟ್‌ ಅಭಿಮಾನಿಗಳನ್ನು ಟೆಸ್ಟ್‌ ಕ್ರಿಕೆಟ್‌ನತ್ತ ಸೆಳೆಯಲು ಶುಕ್ರವಾರ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯದರ್ಶಿ ಡೇವ್‌ ರಿಚರ್ಡ್‌ಸನ್‌ ಅವರು, ‘ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. 2019ರ ಏಕದಿನ ವಿಶ್ವಕಪ್‌ ಬಳಿಕ ಟೆಸ್ಟ್‌ ಚಾಂಪಿಯನ್‌ಷಿಪ್‌ ಆರಂಭಿಸಿ, ಫೈನಲ್‌ ಪಂದ್ಯವನ್ನು 2021ರ ಮಧ್ಯದಲ್ಲಿ ಆಯೋಜಿಸಲಾಗುವುದು’ ಎಂದು ಹೇಳಿದ್ದಾರೆ.

ಸದ್ಯ ಟೆಸ್ಟ್‌ ಮಾನ್ಯತೆ ಪಡೆದಿರುವ 12 ರಲ್ಲಿ 9 ತಂಡಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದು, ಜಿಂಬಾಬ್ವೆ, ಐರ್ಲೆಂಡ್‌ ಹಾಗೂ ಆಫ್ಘಾನಿಸ್ತಾನವನ್ನು ಆರಂಭದ ಪಂದ್ಯಾವಳಿಯಿಂದ ಹೊರಗಿಡಲಾಗಿದೆ.

ಎರಡು ವರ್ಷಗಳ ಕಾಲ(2019–2021ರವರೆಗೆ) ನಡೆಯಲಿರುವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ತಲಾ ಮೂರು ಸರಣಿಗಳನ್ನು ತವರಿನಲ್ಲಿ ಮತ್ತು ಬೇರೆ ದೇಶಗಳಲ್ಲಿ ಆಡಬೇಕಿದೆ. ಪ್ರತಿ ಸರಣಿಯಲ್ಲಿ ಕನಿಷ್ಠ ಎರಡರಿಂದ ಗರಿಷ್ಠ  ಐದು ಪಂದ್ಯಗಳು ಇರಲಿವೆ.

2021ರ ಏಪ್ರಿಲ್‌ ವೇಳೆಗೆ ಈ ಪಂದ್ಯಾವಳಿಗಳಲ್ಲಿ ಅಗ್ರ ಎರಡು ಸ್ಥಾನದಲ್ಲಿ ಉಳಿಯುವ ತಂಡಗಳು, ಎರಡು ತಿಂಗಳ ಬಳಿಕ ನಡೆಯುವ ಅಂತಿಮ ಹಣಾಹಣಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಟೆಸ್ಟ್‌ ಚಾಂಪಿಯನ್‌ಷಿಪ್‌ನ ಬೆನ್ನಲ್ಲೇ 13 ತಂಡಗಳನ್ನೊಳಗೊಂಡ ಏಕದಿನ ಕ್ರಿಕೆಟ್‌ ಲೀಗ್‌ ಪರಿಚಯಿಸುವ ಉದ್ದೇಶವೂ ಐಸಿಸಿಗೆ ಇದೆ. 2023ರಲ್ಲಿ ಆರಂಭವಾಗಲಿರುವ ಲೀಗ್‌ ಪ್ರದರ್ಶನದ ಆಧಾರದ ಮೇಲೆ, 2023ಕ್ಕೆ ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ವಿವಿಧ ತಂಡಗಳು ಅರ್ಹತೆ ಗಳಿಸಲಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry