ಗ್ರಾಹಕ ಹಕ್ಕುಗಳ ಜೊತೆಗೂಡಿ ‘ಕನ್ನಡ’ ನುಡಿ

7

ಗ್ರಾಹಕ ಹಕ್ಕುಗಳ ಜೊತೆಗೂಡಿ ‘ಕನ್ನಡ’ ನುಡಿ

Published:
Updated:
ಗ್ರಾಹಕ ಹಕ್ಕುಗಳ ಜೊತೆಗೂಡಿ ‘ಕನ್ನಡ’ ನುಡಿ

ಕನ್ನಡ ಚಳವಳಿ ಗೊತ್ತು. ಕನ್ನಡ ಗ್ರಾಹಕ ಚಳವಳಿ ಗೊತ್ತೇ?

ಪರಂಪರೆ, ಸಾಹಿತ್ಯ, ಪರಂಪರೆ, ಶಿಕ್ಷಣ ಮಾಧ್ಯಮ – ಇವೆಲ್ಲ ಭಾಷೆಯನ್ನು ನೋಡುವ ಕೆಲವು ರೂಢಿಗತ ಕ್ರಮ

ಗಳು. ಭಾಷೆಯನ್ನು ಗ್ರಾಹಕರ ಹಕ್ಕಿನ ರೂಪದಲ್ಲಿ ನೋಡುವುದು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯಗೊಳ್ಳುತ್ತಿರುವ ಪರಿಕಲ್ಪನೆ.

ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಕನಕಪುರ ರಸ್ತೆಯ ಶಾಪಿಂಗ್‍ ಮಾಲೊಂದರಲ್ಲಿ ಅಮ್ಮನ ಜೊತೆಗಿದ್ದ ಮಗು ಜನಜಂಗುಳಿಯಲ್ಲಿ ತಪ್ಪಿಸಿಕೊಂಡಿತು. ಮಗು ಕಳೆದುಹೋದ ಬಗ್ಗೆ ಮೈಕ್‍ನಲ್ಲಿ ಪ್ರಕಟಣೆ ನೀಡುವಂತೆ ಕಂಗಾಲಾದ ತಾಯಿ ಕೇಳಿಕೊಂಡಾಗ ಮಾಲ್‍ ಸಿಬ್ಬಂದಿ ನಿರಾಕರಿಸಿದರು. ಕನ್ನಡದಲ್ಲಿ ಪ್ರಕಟಣೆ ನೀಡುವುದು ಆ ಬಹುರಾಷ್ಟ್ರೀಯ ಕಂಪೆನಿಯ ನೀತಿಸಂಹಿತೆಗೆ ವಿರುದ್ಧವಾಗಿತ್ತು. ಈ ಸುದ್ದಿ ಜನರಿಂದ ಜನರಿಗೆ ಹರಡಿತು. ಆಗಷ್ಟೇ ಕಣ್ಣರಳಿಸುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರತಿಭಟಿಸಿದರು. ಇ-ಮೇಲ್‍ ಮೂಲಕ ತಮ್ಮ ಪ್ರತಿಭಟನೆ ದಾಖಲಿಸಿದರು. ಆ ಮಾಲ್‍ನಲ್ಲಿ ಷಾಪಿಂಗ್‍ ಮಾಡುವುದಿಲ್ಲವೆಂದು ಕೆಲವರು ಹೇಳಿಕೊಂಡರು. ಕೊನೆಗೆ, ಕನ್ನಡ ಗ್ರಾಹಕರ ಒತ್ತಡಕ್ಕೆ ವ್ಯಾಪಾರಿಸಂಸ್ಥೆ ಮಣಿಯಿತು, ಕನ್ನಡಿಗರ ಕ್ಷಮೆ ಕೋರಿತು. ಈ ಘಟನೆಯ ಆಸುಪಾಸಿನಲ್ಲೇ ಮಲ್ಟಿಪ್ಲೆಕ್ಸ್ ಒಂದರ ಪಾರ್ಕಿಂಗ್‍ ಸ್ಥಳದಲ್ಲಿ ಕನ್ನಡ ಮಾತನಾಡುವುದರ ಬಗ್ಗೆ ಭದ್ರತಾ ಸಿಬ್ಬಂದಿ ತಕರಾರು ಎತ್ತಿದ್ದು ದೊಡ್ಡ ಸುದ್ದಿಯಾಯಿತು. ಮತ್ತೆ ಪ್ರತಿಭಟನೆ, ಕ್ಷಮಾಯಾಚನೆ. ಈ ಎರಡು ಪ್ರಕರಣಗಳು ಕನ್ನಡ ಗ್ರಾಹಕ ಚಳವಳಿಯ ಆರಂಭದ ಬಹುದೊಡ್ಡ ಹೆಜ್ಜೆಗಳು.

ತೊಂಬತ್ತರ ದಶಕದಲ್ಲಿ ಆರ್ಥಿಕ ಉದಾರೀಕರಣದ ಗಾಳಿ ಪೂರ್ವ-ಪಶ್ಚಿಮದ ತುಂಬ ಹರಡಿಕೊಂಡಿತಷ್ಟೆ. ಈ ಬದಲಾವಣೆಯ ಗಾಳಿ ‘ಗ್ರಾಹಕ’ ಎನ್ನುವ ಶಕ್ತಿಗೆ ಬಹುದೊಡ್ಡ ಮಹತ್ವ ತಂದುಕೊಂಡಿತು. ಗ್ರಾಹಕನನ್ನು ತೃಪ್ತಿಗೊಳಿಸುವುದೇ ಬಹುರಾಷ್ಟ್ರೀಯ ಸಂಸ್ಥೆಗಳ ಪರಮಗುರಿಯಾಯಿತು. ಮಾರುಕಟ್ಟೆಯ ಕೇಂದ್ರದಲ್ಲಿ ಗ್ರಾಹಕ ನಿಂತಿರುವಾಗ, ಅವನಿಗಿರುವ ಶಕ್ತಿಯನ್ನು ಕನ್ನಡದ ಹಿತಕ್ಕಾಗಿ ಬಳಸಿಕೊಳ್ಳಲು ಕೆಲವು ಯುವ ಮನಸ್ಸುಗಳು ಯೋಚಿಸಿದ್ದರ ಪರಿಣಾಮ ರೂಪುಗೊಂಡಿದ್ದು – ‘ಕನ್ನಡ ಗ್ರಾಹಕ ಚಳವಳಿ’. ಅಂತರ್ಜಾಲದ ಸವಲತ್ತುಗಳನ್ನು ಬಳಸಿಕೊಂಡು ಅಭಿಪ್ರಾಯ ರೂಪಿಸುವುದು ಹಾಗೂ ತಮ್ಮ ಹಕ್ಕೊತ್ತಾಯ ಮಂಡಿಸುವುದು ಈ ಚಳವಳಿಯ ವಿಶೇಷ.

“ಕನ್ನಡ ಅಭಿವೃದ‍್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯುವುದರಿಂದಲೋ ಅಥವಾ ಸರ್ಕಾರದ ಮೇಲೆ ಒತ್ತಡ ಹೇರುವುದರಿಂದಲೋ ವ್ಯಾಪಾರೀ ಸಂಸ್ಥೆಗಳನ್ನು ಮಣಿಸಲು ಸಾಧ್ಯವಾಗುವುದಿಲ್ಲ. ಅವುಗಳ ಮೇಲೆ ಒತ್ತಡ ಹೇರಲಿಕ್ಕಿರುವುದು ಒಂದೇ ದಾರಿ – ನಿಮ್ಮ ಉತ್ಪನ್ನಗಳನ್ನು ಕೊಳ್ಳುವುದಿಲ್ಲ ಎನ್ನುವ ನಿರಾಕರಣೆಯ ದಾರಿ’’ ಎಂದು ಹಲವು ಗ್ರಾಹಕ ಚಳವಳಿಗಳ ಜೊತೆ ಕೆಲಸ ಮಾಡಿರುವ ವಸಂತ ಶೆಟ್ಟಿ ಹೇಳುತ್ತಾರೆ.

ಎಚ್‍ಡಿಎಫ್‍ಸಿ ಹಾಗೂ ಸಿಟಿ ಬ್ಯಾಂಕ್‍ನ ಎಟಿಎಂಗಳಲ್ಲಿ ಕನ್ನಡ ಬಳಸಲು ಸಾಧ್ಯವಾಗಿರುವುದು, ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರಕಟಣೆಗಳು ಹಾಗೂ ಊಟದ ಮೆನುವಿನಲ್ಲಿ ಕನ್ನಡ ಕಾಣಿಸಿಕೊಂಡಿರುವುದು, ಬುಕ್‍ಮೈಷೋನ ಆ್ಯಪ್‍ನಲ್ಲಿ ಕನ್ನಡದ ಆಯ್ಕೆಯಿರುವುದು – ಇವೆಲ್ಲ ಕನ್ನಡ ಗ್ರಾಹಕ ಚಳವಳಿಯ ಯಶಸ್ಸಿನ ಕೆಲವು ಉದಾಹರಣೆಗಳು. ಸಿನಿಮಾಗಳ ಡಬ್ಬಿಂಗ್‍ ಪರವಾಗಿ ಒಂದು ಮಟ್ಟದ ಜನಾಭಿಪ್ರಾಯ ರೂಪಿಸಿದ್ದು ಹಾಗೂ ‘ಭಾರತೀಯ ಸ್ಮರ್ಧಾತ್ಮಕ ಆಯೋಗ’ ಡಬ್ಬಿಂಗ್‍ ವಿರೋಧಿಸಿದ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ನಿಲುವನ್ನು ವಿರೋಧಿಸಿ ತೀರ್ಪು ನೀಡಿದ್ದು ಮತ್ತೊಂದು ಮುಖ್ಯವಾದ ಗೆಲುವು. ನ. 16ರಿಂದ ‘ಸ್ಟಾರ್‍ ಸ್ಪೋರ್ಟ್ಸ್’ ವಾಹಿನಿಯನ್ನು ಕನ್ನಡದಲ್ಲೇ ನೋಡಲಿಕ್ಕೆ ಸಾಧ್ಯವಿದೆ. ಇದರ ಹಿಂದೆ ಕನ್ನಡ ಗ್ರಾಹಕರ ಎರಡು ವರ್ಷಗಳ ಶ್ರಮವಿದೆ. ಕನ್ನಡದ ಮೂಲಕವೇ ನಾವು ಆಟವನ್ನು ಆಸ್ವಾದಿಸಬೇಕು; ಅನಿಲ್‍ ಕುಂಬ್ಳೆ, ಶ್ರೀನಾಥ್‍ರ ಕಾಮೆಂಟರಿಯನ್ನು ಕನ್ನಡದಲ್ಲೇ ಕೇಳಬೇಕು – ಅದಕ್ಕಾಗಿ ಕನ್ನಡ ವಾಹಿನಿ ಬೇಕು ಎಂದು ನಿರಂತರವಾಗಿ ‘ಸ್ಟಾರ್‍ ಸ್ಪೋರ್ಟ್ಸ್’ ವಾಹಿನಿಯ ಬೆನ್ನುಬಿದ್ದಿದ್ದರ ಫಲಿತಾಂಶ ಈಗ ಸಾಕಾರಗೊಳ್ಳುತ್ತಿದೆ.

ಪರಂಪರೆಯ ಹೊಸ ಕವಲು: ಕನ್ನಡ ಗ್ರಾಹಕ ಚಳವಳಿಯನ್ನು ಸಾಂಪ್ರದಾಯಿಕ ಭಾಷಾ ಚಳವಳಿಗಿಂಥ ಭಿನ್ನ ಎಂದು ನೋಡುವ ಅಗತ್ಯವೇನೂ ಇಲ್ಲ. ಅರವತ್ತರ ದಶಕದಲ್ಲಿ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಆರಂಭಗೊಂಡ ‘ಕನ್ನಡ ಚಳವಳಿ’ಯ ಹಿನ್ನೆಲೆಯಲ್ಲಿ ಪ್ರಮುಖವಾಗಿ ಇದ್ದುದು ಗ್ರಾಹಕಪ್ರಜ್ಞೆಯೇ. ರಾಮೋತ್ಸವದಲ್ಲಿ ಕನ್ನಡದ ಸಂಗೀತಗಾರರ ಪ್ರಾತಿನಿಧ್ಯ ಕಡಿಮೆಯಿದ್ದುದು, ಕಾರ್ಖಾನೆಗಳಲ್ಲಿ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿದ್ದುದು, ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಸೀಮಿತ ಅವಕಾಶವಿದ್ದುದು, ಡಬ್ಬಿಂಗ್‍ ಚಿತ್ರಗಳ ಉಬ್ಬರ – ಕನ್ನಡ ಚಳವಳಿಗೆ ಪ್ರೇರಣೆ ನೀಡಿದ ಇವೆಲ್ಲದರ ಹಿಂದೆ ಇದ್ದುದು ಗ್ರಾಹಕಪ್ರಜ್ಞೆಯೇ. ಇದೇ ಪ್ರಜ್ಞೆ ಈಗ ಇನ್ನಷ್ಟು ವ್ಯವಸ್ಥಿತ ರೂಪದಲ್ಲಿ ಕಾಣಿಸಿಕೊಂಡಿದೆ ಅಷ್ಟೆ.

ತಾವು ಮತ್ತು ತಮ್ಮ ಗೆಳೆಯರ ನಡೆಯನ್ನು ಕನ್ನಡ ಚಳವಳಿಯ ಪರಂಪರೆಯೊಂದಿಗೆ ಗುರ್ತಿಸಿಕೊಳ್ಳಲು ವಸಂತ ಶೆಟ್ಟಿ ಬಯಸುತ್ತಾರೆ. “ನಾಡು-ನುಡಿಯ ಹಿತಾಸಕ್ತಿಗಾಗಿ ಬೀದಿಗಳಿದು ಹೋರಾಟ ಮಾಡಿದವರು, ಜೈಲಿಗೆ ಹೋದವರ ಬಗ್ಗೆ ನಮಗೆ ಗೌರವವಿದೆ’’ ಎನ್ನುವ ಅವರಿಗೆ, ಬೀದಿಗಿಳಿದು ಚಳವಳಿ ಮಾಡುವವರಿಗೆ ಇರುವ ರಿಸ್ಕ್ ನಮಗಿಲ್ಲ ಎನ್ನುವ ಅರಿವೂ ಇದೆ. ‘ಕರ್ನಾಟಕ ರಕ್ಷಣಾ ವೇದಿಕೆ’ಯಂಥ ಸಂಘಟನೆಗಳ ಚಳವಳಿಕಾರರೊಂದಿಗೆ ಗ್ರಾಹಕ ಹಕ್ಕುಗಳ ಪ್ರತಿಪಾದಕರು ಹಲವು ಸಂದರ್ಭಗಳಲ್ಲಿ ಕೈಜೋಡಿಸಿರುವುದಿದೆ.

“ನಾವು ಸಾಗಬೇಕಾದ ದಾರಿ ದೂರವಿದೆ. ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ಹಿಂದಿಯೇತರ ಭಾಷಿಕರನ್ನು ಸಂಘಟಿಸಿ, ಭಾಷಾನೀತಿಯೊಂದನ್ನು ರೂಪಿಸುವ ಅಗತ್ಯ ಜರೂರಿನದು. ಕನ್ನಡವನ್ನು ಒಳಗಿನಿಂದ ಬಲಪಡಿಸುವ ಕೆಲಸ ನಿರಂತರವಾಗಿ ಆಗಬೇಕಿದೆ. ಅಂತರ್ಜಾಲ ಗ್ರಾಮೀಣ ಪ್ರದೇಶಗಳನ್ನೂ ವ್ಯಾಪಕವಾಗಿ ಪ್ರವೇಶಿಸಿದೆ. ಇಂಥ ಸಂದರ್ಭದಲ್ಲಿ ‘ಕನ್ನಡ ತಂತ್ರಜ್ಞಾನ’ವನ್ನು ಅಭಿವೃದ್ಧಿಪಡಿಸುವ ಹಾಗೂ ಗ್ರಾಹಕ ಚಳವಳಿಯನ್ನು ಬಲಪಡಿಸಬೇಕಿದೆ’’ ಎನ್ನುವ ವಸಂತ್‍ ಮಾತುಗಳಲ್ಲಿ ಕನ್ನಡದ ನಾಳೆಗಳ ಬಗ್ಗೆ ದೂರದೃಷ್ಟಿಯೊಂದು ಕಾಣಿಸುತ್ತದೆ.

‘ಏನ್‍ ಗುರು ಕಾಫಿ ಆಯ್ತಾ’ ಬ್ಲಾಗ್‍ನ ರೂವಾರಿ ಆನಂದ್‍ ಕೂಡ ತಮ್ಮ ಚಳವಳಿಗೆ ಪರಂಪರೆಯ ಋಣವಿರುವುದನ್ನು ಒಪ್ಪಿಕೊಳ್ಳುತ್ತಾರೆ. ಗ್ರಾಹಕರಾಗಿ ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಕುರಿತು ಸಾಂಪ್ರದಾಯಿಕ ಚಳವಳಿಯಲ್ಲಿ ಇರುವ ಕೊರತೆಯನ್ನು ತುಂಬುವ ಯತ್ನವನ್ನು ನಾವು ಮಾಡುತ್ತಿದ್ದೇವೆ ಎನ್ನುವ ಅನಿಸಿಕೆ ಅವರದು.

ವ್ಯಾಪಾರಿ ಸಂಸ್ಥೆಗಳು ಇಡೀ ಭಾರತವನ್ನು ಒಂದು ಘಟಕವನ್ನಾಗಿ ನೋಡುತ್ತವೆ. ಅವರಿಗೆ ಹಿಂದಿಯಷ್ಟೇ ಇಲ್ಲಿನ ಭಾಷೆಯಾಗಿ ಕಾಣಿಸುತ್ತದೆ. ಅಂಥ ವ್ಯಾಪಾರಿಗಳಿಗೆ ಭಾರತದ ಬಹುತ್ವವನ್ನು ಅರ್ಥಮಾಡಿಸುವುದು ಗ್ರಾಹಕ ಚಳವಳಿಯಿಂದ ಸಾಧ್ಯ ಎನ್ನುತ್ತಾರೆ.

ಬೆಂಗಳೂರಿನ ‘ಮೆಟ್ರೊ’ ರೈಲುಗಳಲ್ಲಿ ಹಿಂದಿ ಹೇರಿಕೆಯ ಕುರಿತು ಇತ್ತೀಚೆಗೆ ಪ್ರತಿಭಟನೆ ನಡೆಯಿತಷ್ಟೆ. ಈ ಪ್ರತಿಭಟನೆಯ ಹಿಂದೆ ರಕ್ಷಣಾ ವೇದಿಕೆ ಕಾರ್ಯಕರ್ತರಿದ್ದಂತೆ, ಗ್ರಾಹಕ ಹಕ್ಕುಗಳ ಚಳವಳಿಕಾರರೂ ಇದ್ದರು. ಗ್ರಾಹಕ ಹಕ್ಕುಗಳ ಪ್ರತಿಪಾದಕರು ಹಿಂದಿ ಹೇರಿಕೆಯ ವಿರುದ್ಧ ತಮ್ಮ ವಿರೋಧವನ್ನು ನಿರಂತರವಾಗಿ ದಾಖಲಿಸುತ್ತಲೇ ಇದ್ದಾರೆ. ಆದರೆ, ಹಿಂದಿ  ಹೇರಿಕೆಯ ವಿರುದ್ಧ ತಮ್ಮ ಹೋರಾಟ ಎನ್ನುವುದನ್ನು ಆನಂದ್‍ ಒಪ್ಪುವುದಿಲ್ಲ. ‘ನಮ್ಮದು ನುಡಿ ಸಮಾನತೆಗಾಗಿ ನಡೆಸುತ್ತಿರುವ ಹೋರಾಟ’ ಎನ್ನುತ್ತಾರೆ.

ಬಹುಮುಖಿ ಚಳವಳಿ: ‘ಕನ್ನಡ ಗ್ರಾಹಕರ ಚಳವಳಿ’ಗೆ ವಿಶೇಷವಾದ ಮಹತ್ವವೇನಾದರೂ ಇದೆಯೇ? ಕನ್ನಡ ಚಳವಳಿಯ ಪರಂಪರೆಯ ಹಿನ್ನೆಲೆಯಲ್ಲಿ ಈ ಹೊತ್ತಿನ ಪೇಟೆಮಾತನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಈ ಸಿಕ್ಕನ್ನು ಬಿಡಿಸಲು ಯತ್ನಿಸುತ್ತ ಕಥೆಗಾರ ಹಾಗೂ ಹಣಕಾಸು ತಜ್ಞ ಎಂ.ಎಸ್‍. ಶ್ರೀರಾಮ್‍ ಅವರು ಕನ್ನಡ ಗ್ರಾಹಕ ಚಳವಳಿಯ ಎರಡು ಮುಖ್ಯ ಲಕ್ಷಣಗಳನ್ನು ಗುರ್ತಿಸುತ್ತಾರೆ. ಮೊದಲನೆಯದು ಈ ಚಳವಳಿಗೆ ಇರುವ ಬೌದ‍್ಧಿಕ ಆಯಾಮ, ಎರಡನೆಯದು ಕನ್ನಡದ ಸವಾಲುಗಳ ಕುರಿತ ಗ್ರಹಿಕೆಗೆ ಸಂಬಂಧಿಸಿದ್ದು.

“ವ್ಯಾಪಾರಿ ಸೇವೆಗಳಿಗೆ ಸಂಬಂಧಿಸಿದ ಹಕ್ಕೊತ್ತಾಯ ಇರಬಹುದು, ಸಿನಿಮಾ ಡಬ್ಬಿಂಗ್‍ ಕುರಿತ ಬೇಡಿಕೆ ಇರಬಹುದು – ಗ್ರಾಹಕ ಚಳವಳಿಯ ಪ್ರತಿ ಹೋರಾಟದಲ್ಲೂ ಸ್ಪಷ್ಟವಾದ ತಾತ್ವಿಕ ಆಯಾಮವೊಂದನ್ನು ಗುರ್ತಿಸಬಹುದು. ಸಾಂಪ್ರದಾಯಿಕ ಕನ್ನಡ ಚಳವಳಿಕಾರರಿಗೆ ಹೋಲಿಸಿದರೆ ಇವರ ಐಡೆಂಟಿಟಿ ಪಾಲಿಟಿಕ್ಸ್ ಭಿನ್ನವಾದುದು. ಪ್ರತಿಭಟನೆಯ ಜೊತೆಗೆ ಸಮಸ್ಯೆಯನ್ನು ರಚನಾತ್ಮಕವಾಗಿ ನೋಡಲಿಕ್ಕೆ ಕೂಡ ಇವರು ಪ್ರಯತ್ನಿಸುತ್ತಿದ್ದಾರೆ” ಎನ್ನುವುದು ಶ್ರೀರಾಮ್‍ ಅವರ ಅಭಿಪ್ರಾಯ.

“ತಮ್ಮ ಭಾಷಾನೀತಿಗೆ ಸಂಬಂಧಿಸಿದಂತೆ ಇವರ ಗ್ರಹಿಕೆ ಕೂಡ ಭಿನ್ನವಾದುದು. ಕಾವೇರಿ ಬಿಕ್ಕಟ್ಟು ಹೊರತುಪಡಿಸಿದರೆ ಇವರು ತಮಿಳ

ರನ್ನು ವಿರೋಧಿಸುವುದಿಲ್ಲ. ಬದಲಿಗೆ ತಮ್ಮ ಕನ್ನಡಪ್ರಜ್ಞೆಯನ್ನು ರೂಪಿಸಿಕೊಳ್ಳಲಿಕ್ಕೆ ತಮಿಳಿನಿಂದ ಕೆಲವು ಒಳ್ಳೆಯ ಅಂಶಗಳನ್ನು ಸ್ವೀಕರಿಸುವ ಬಗ್ಗೆ ಒಲವು ಹೊಂದಿದ್ದಾರೆ. ಇದೊಂದು ಕುತೂಹಲಕಾರಿ ಬೆಳವಣಿಗೆ” ಎನ್ನುತ್ತಾರೆ.

ಶ್ರೀರಾಮ್‍ ಅವರ ಮಾತುಗಳ ಮುಂದುವರಿಕೆ ರೂಪದಲ್ಲಿ ವಸಂತ ಶೆಟ್ಟಿ ಅವರ ನಿಲುವನ್ನು ನೋಡಬಹುದು. ಕನ್ನಡ ಚಳವಳಿ ಎಂದರೆ ತಮಿಳು ವಿರೋಧ ಎನ್ನುವ ಮನಃಸ‍್ಥಿತಿ ಬಗ್ಗೆ ಅವರಿಗೆ ಒಪ್ಪಿಗೆಯಿಲ್ಲ. “ಈಗಿನ ಸಮಸ್ಯೆಗಳೇ ಬೇರೆ. ಹಿಂದಿ ಹೇರಿಕೆಯಿಂದಾಗಿ ಕನ್ನಡಿಗರಿಗೆ ಬ್ಯಾಂಕ್‍ ನೌಕರಿ ಅವಕಾಶಗಳು ಕಡಿಮೆಯಾಗಿವೆ. ಮೆಟ್ರೊದಲ್ಲಿ ಹಿಂದಿ ನುಸುಳುತ್ತದೆ. ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿರುವ ಐದು ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದ್ದರೂ, ರಾಜ್ಯದ ಬಗ್ಗೆ ಕೇಂದ್ರಸರ್ಕಾರದ ಸ್ಪಂದನ ಧನಾತ್ಮಕವಾಗಿಲ್ಲ. ಈ ಧೋರಣೆಯನ್ನು ನಾವೆಲ್ಲ ಒಗ್ಗಟ್ಟಿನಿಂದ ವಿರೋಧಿಸಬೇಕಿದೆ’’ ಎನ್ನುವ ಅವರು, ಇಂದಿನ ಕನ್ನಡ ಎದುರಿಸುತ್ತಿರುವ ಸವಾಲುಗಳ ಸ್ವರೂಪವನ್ನು ಎದುರಿಗಿಡುತ್ತಾರೆ.

ಕನ್ನಡ ಗ್ರಾಹಕರ ಚಳವಳಿಯೊಂದಿಗೆ ಗುರ್ತಿಸಿಕೊಂಡವರ ಅಭಿವ್ಯಕ್ತಿಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಒಲವು ಇರುವುದನ್ನು ಶ್ರೀರಾಮ್‍ ಗುರ್ತಿಸುತ್ತಾರೆ. “ಇವರ ಭಾಷಾರಾಜಕಾರಣ ದೀರ್ಘಕಾಲೀನ ಉದ್ದೇಶಗಳನ್ನು ಹೊಂದಿದಂತಿದೆ. ಪ್ರತಿಭಟನೆ ಮಾತ್ರ ಇವರ ಅಸ್ಮಿತೆಯಾಗಿಲ್ಲ. ಜೊತೆಗೆ ಯಶಸ್ಸಿನೊಂದಿಗೆ ತಮ್ಮ ಹೆಸರನ್ನು ತಳಕು ಹಾಕಿಕೊಳ್ಳಲು ಮೇಲಾಟವನ್ನೂ ನಡೆಸುವುದಿಲ್ಲ” ಎನ್ನುವ ಅವರು, ಭಾಷೆಯ ಹಿನ್ನೆಲೆಯಲ್ಲಿ ನಡೆಯುವ ಗ್ರಾಹಕ ಚಳವಳಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಾದ ಅಗತ್ಯವಿದೆ ಎನ್ನುತ್ತಾರೆ.

ಕುತೂಹಲಕರ ನಾಳೆಗಳು

ಅರವತ್ತು ಎಪ್ಪತ್ತರ ದಶಕದಲ್ಲಿ ಗ್ರಾಹಕಪ್ರಜ್ಞೆಯ ರೂಪದಲ್ಲೇ ಕನ್ನಡ ಚಿತ್ರರಂಗ ಡಬ್ಬಿಂಗ್‍ ವಿರೋಧಿ ನಿಲುವು ಕೈಗೊಂಡಿತ್ತು. ಈಗ ಗ್ರಾಹಕರ ಹಕ್ಕಿನ ರೂಪದಲ್ಲೇ ಡಬ್ಬಿಂಗ್‍ ಬಯಸಲಾಗುತ್ತಿದೆ. ಡಬ್ಬಿಂಗ್‍ ಸಂಘರ್ಷಕ್ಕೆ ಸಂಬಂಧಿಸಿದಂತೆ ಸಿನಿಮಾ ಕಾರ್ಮಿಕರ ಹಿತಾಸಕ್ತಿಯನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಆರೋಪವೂ ಇದೆ.

ತಕರಾರುಗಳ ನಡುವೆಯೂ ಸಾಂಪ್ರದಾಯಿಕ ಕನ್ನಡ ಚಳವಳಿಗೆ ಹೊಸ ಹೊಳ ಪೊಂದನ್ನು ನೀಡಿದ ಅಗ್ಗಳಿಕೆ ‘ಕನ್ನಡ ಗ್ರಾಹಕ ಚಳವಳಿ’ಯದು. ಇಂಗ್ಲಿಷ್‍ ಜಗತ್ತಿನಲ್ಲಿರುವ ಯುವ ತಲೆಮಾರನ್ನು ಕನ್ನಡದ ಜಗತ್ತಿಗೆ ಕರೆತರುವ ಕೆಲಸವನ್ನೂ ‘ಗ್ರಾಹಕ ಚಳವಳಿ’ ಮಾಡುತ್ತಿದೆ. ಕನ್ನಡದ ನಾಳೆಗಳ ದೃಷ್ಟಿಯಿಂದ ಈ ಚಳವಳಿ ಪಡೆದುಕೊಳ್ಳುವ ಸ್ವರೂಪ ನಿರ್ಣಾಯಕ ಆಗಬಹುದೇನೊ?

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry