7

ಹುಡುಗರು ಮೆಚ್ಚಿದ ‘ನಂದಿನಿ’

Published:
Updated:
ಹುಡುಗರು ಮೆಚ್ಚಿದ ‘ನಂದಿನಿ’

ಮೊದಲೆಲ್ಲಾ ಹೊರಗಡೆ ಯಾರೇ ಸಿಕ್ಕರೂ ಹಲೋ... ನೀವು ರಚಿತಾ ರಾಮ್ ಅಲ್ವಾ? ಅನ್ನೋರು. ಸಾರಿ, ನಾನು ಅವರ ಅಕ್ಕ ನಿತ್ಯಾ ರಾಮ್ ಅನ್ನುತ್ತಿದ್ದೆ. ಹೋದ ಕಡೆಯಲ್ಲಾ ಸಿಕ್ಕಾಪಟ್ಟೆ ಗೊಂದಲ ಆಗುತ್ತಿತ್ತು. ಇಬ್ಬರ ಹೋಲಿಕೆ ಒಂದೆ ಥರಾ ಇರೋದರಿಂದ ಹೀಗೆಲ್ಲಾ ಆಗೋದು ಸಹಜ.

ಈಗ ಎಲ್ಲೇ ಹೋದರೂ ‘ನಂದಿನಿ’ ಬಂದರು ಅಂತ ಮಾತನಾಡಿಸುತ್ತಾರೆ. ಇದೊಂದು ತರಹ ಮನಸ್ಸಿಗೆ ಥ್ರಿಲ್ ನೀಡುತ್ತಿದೆ ಎಂದು ಮಾತು  ಆರಂಭಿಸಿದರು ನಿತ್ಯಾ ರಾಮ್. ಉದಯ ವಾಹಿನಿಯ ‘ನಂದಿನಿ’ ಧಾರಾವಾಹಿ ಮಹಿಳೆಯರಿಗಷ್ಟೇ ಫೇವರಿಟ್ ಅಲ್ಲ. ಹುಡುಗರು ಕೂಡ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ‘ಇದು ನನಗೂ ಕೂಡ ಅಚ್ಚರಿಯೇ. ಫೇಸ್‌ಬುಕ್‌ನಲ್ಲಿ ಫಾಲೋ ಮಾಡೋ ಹುಡುಗರು ಅಮ್ಮನ ಜೊತೆ ಧಾರಾವಾಹಿ ನೋಡುವ ಅಭ್ಯಾಸ ಶುರುವಾಗಿದೆ’ ಎನ್ನುತ್ತಾರೆ. ಅಭಿನಯ ಮೆಚ್ಚಿ ಪ್ರಶಂಸೆಯ ಮಳೆ ಸುರಿಸುತ್ತಿದ್ದಾರೆ. ಅಭಿಮಾನದ ಹೊಳೆಯಲ್ಲಿ ತೇಲುತ್ತಿದ್ದೇನೆ’ ಎಂದು ನಕ್ಕರು.

ಆಡಿಷನಲ್‌ನಲ್ಲಿ ಆಯ್ಕೆಯಾದ ಮೇಲೆ ನಿರ್ದೇಶಕ ರಾಜ್‌ಕಪೂರ್ ಧಾರಾವಾಹಿಯಲ್ಲಿ ನೆಗೆಟಿವ್ ಮುಖ್ಯ ಪಾತ್ರ ಮಾಡಬೇಕು ಎಂದರು. ಹಾವೊಂದರ ಸೇಡಿನ ಪಾತ್ರ ಷೋಷಣೆ ಎಂದಾಗ ನೆಗೆಟಿವ್ ಪಾತ್ರ ನಿಜಕ್ಕೂ ಜನರಿಗೆ ಇಷ್ಟವಾಗುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಇತ್ತು. ಹಿಂಜರಿಕೆಯಿಂದಲೇ ಒಪ್ಪಿಕೊಂಡೆ. ‘ನಂದಿನಿ’ ಹೆಸರಿನ ಹಾವು ‘ಗಂಗಾ’ ಎನ್ನುವ ಪಾತ್ರದ ಆತ್ಮದೊಳಗೆ ಪ್ರವೇಶ ಮಾಡುವ ಮಾಂತ್ರಿಕ ಕಥೆ ತೆರೆದುಕೊಳ್ಳುತ್ತಾ, ತೊಡಕು ಉಂಟು ಮಾಡುವ ವ್ಯಕ್ತಿಗಳನ್ನು ಸಂಹಾರ ಮಾಡುವ ಕಥಾಹಂದರ ಮುಂದುವರಿದಿದೆ. ದೊಡ್ಡ ನೀಲಿ ಕಣ್ಣುಗಳು, ಹಾವಿನ ನಾಲಿಗೆ, ಉತ್ತರ ಭಾರತೀಯ ಶೈಲಿಯ ವೇಷ ದಕ್ಷಿಣ ಭಾರತೀಯರಿಗೆ ಇಷ್ಟವಾಗುತ್ತದೆಯೇ ಎನ್ನುವ ಪ್ರಶ್ನೆ ಕಾಡಿತ್ತು. ಆದರೆ, ಕಥೆಯಲ್ಲಿನ ಹೂರಣದಿಂದ ಧಾರಾವಾಹಿ ಒಳ್ಳೆಯ ಟಿ.ಆರ್‌.ಪಿ. ಸ್ಥಾನಕ್ಕೆ ಜಿಗಿತ ಕಂಡಿದೆ ಎಂದು ಅಭಿಮಾನ ಬೀಗಿದರು.

‘ಒಂದ್ಸಲ ಹೊರಗಡೆ ಸುತ್ತಾಟಕ್ಕೆ ಹೋದಾಗ ಮಗುವೊಂದು ನನ್ನ ಕಂಡು ಹೆದರಿಕೊಂಡಿತು. ನಂದಿನಿ ಬಂದಿದೆ. ಕಚ್ಚಿ ಬಿಡುತ್ತದೆ. ಮನೆಗೆ ಹೋಗೋಣ’ ಎಂದು ಮಗು ಅಮ್ಮನ ಹತ್ತಿರ ರಚ್ಚೆ ಹಿಡಿದಿತ್ತು. ಅಮ್ಮಂದಿರು ಮಕ್ಕಳಿಗೆ ತುತ್ತು ತಿನ್ನಿಸುವಾಗ ಹಟ ಮಾಡುವ ಮುದ್ದು ಮಕ್ಕಳಿಗೆ ಗುಮ್ಮನ ಬದಲು ನಂದಿನಿ ಬರುತ್ತದೆ ಎಂದು ಹೆದರಿಸುವ ಮಟ್ಟಕ್ಕೆ ಆ ಪಾತ್ರ ಜನಮಾನಸದಲ್ಲಿ ಮೋಡಿ ಮಾಡಿದೆ’ ಎಂದು ಗಹಗಹಿಸಿ ನಕ್ಕರು.‌

ಸನ್‌ ನೆಟ್‌ವರ್ಕ್‌ನ ಕನ್ನಡ, ತಮಿಳು, ತೆಲುಗು, ಮಲಯಾಳಂ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನಂದಿನಿ’ ನಾಲ್ಕು ಭಾಷೆಯಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಧಾರಾವಾಹಿ. ಬಹುತೇಕ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದೆ. ತಿಂಗಳಲ್ಲಿ 20 ದಿನ ಅಲ್ಲೇ ವಾಸ ಮಾಡಬೇಕಾಗಿದೆ. ಅಲ್ಲಿನ ಬಿಸಿಲಿನ ವಾತಾವರಣಕ್ಕೆ ಬೆಂದು, ಬೆಂಗಳೂರಿನ ತಂಪು ಹವೆ ನೆನಪಾಗಿ ಬೇಸರ ಮಾಡಿಕೊಳ್ಳುತ್ತಿದ್ದೆ. ಈಗ ಎಲ್ಲದಕ್ಕೂ ಹೊಂದಿಕೆ ಆಗಿದೆ. ಅಪ್ಪ– ಅಮ್ಮ ವಾರದ ನಡುವೆ ಬಂದು ಹೋಗುವುದರಿಂದ ಏಕಾಂಗಿತನ ಕಾಡುತ್ತಿಲ್ಲ. ಬಿಡುವ ಸಿಕ್ಕಾಗ ಬೆಂಗಳೂರಿಗೆ ಬಂದು ಹಾಯಾಗಿ ಕಾಲ ಕಳೆಯುತ್ತೇನೆ ಎಂದ ಅವರ ಮಾತು ವೈಯಕ್ತಿಕ ಬದುಕಿನತ್ತ ಹೊರಳಿತು.

ಅಪ್ಪ ಕೆ.ಎಸ್. ರಾಮು ಭರತನಾಟ್ಯ ಗುರು. ತಾಯಿ ಶಾಂತಾ ಶಾಲೆಯೊಂದರ ಪ್ರಾಂಶುಪಾಲರಾಗಿದ್ದಾರೆ. ತಂಗಿ ರಚಿತಾ ರಾಮ್ ಸಿನಿಮಾ ನಟಿ. ಮನೆಯಲ್ಲಿ ತಂಗಿಯದ್ದು ಚೇಷ್ಟೆ ಸ್ವಭಾವ. ನಾನು ಗಂಭೀರವದನೆ, ಹೊರಗಡೆ ತಂಗಿಯದ್ದು ಮೆದು ಮಾತು. ನನ್ನದು ಬೋಲ್ಡ್ ಮಾತು ಮತ್ತು ಸ್ನೇಹಪರತೆ. ಮನೆಯಲ್ಲಿ ಸಾಂಸ್ಕೃತಿಕ ವಾತಾವರಣದಿಂದ ನಟನೆಯ ಕಲಿಕೆಗೆ ಕಷ್ಟವಾಗಲಿಲ್ಲ ಎನ್ನುತ್ತಾರೆ ನಿತ್ಯಾ ರಾಮ್.

ಹೊಸ ಬಟ್ಟೆ ಖರೀದಿ, ಅದನ್ನು ತೊಡುವಾಗ ಅಕ್ಕ– ತಂಗಿ ಜಗಳ ಮನೆಯಲ್ಲಿ ನಡೆಯುತ್ತಲೇ ಇರುತ್ತದೆ. ಕೋಳಿ, ಮೀನು ಪ್ರಿಯಳಾದ ನಾನು ಬೆಂಗಳೂರಿಗೆ ಬಂದಾಗ ಅಮ್ಮನ ಅಡುಗೆ ಇಷ್ಟಪಡುತ್ತೇನೆ. ದುಂಡುಮಲ್ಲಿಗೆ ತರಹ ಇದ್ದ ದೇಹಸಿರಿ ಡಯಟ್‌ನಿಂದ ಸಪೂರ ಆಗಿದೆ. ಇದು ಧಾರಾವಾಹಿ ಪಾತ್ರಕ್ಕೂ ಮುಖ್ಯ. ಬಿಡುವಾದಾಗ ತಂಗಿ ರಚಿತಾ ರಾಮ್ ಜೊತೆ ಶಾಪಿಂಗ್‌ ಮಾಡುವುದು ಇಷ್ಟ. ವೃತ್ತಿಪರವಾಗಿ ಇಬ್ಬರ ನಡುವೆ ಸರಿ– ತಪ್ಪುಗಳ ವಿಮರ್ಶೆ ನಡೆಯುತ್ತದೆ. ಈಗಾಗಲೇ, ಕನ್ನಡದಲ್ಲಿ ‘ಮುದ್ದು ಮನಸೇ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಈ ನಡುವೆ ತೆಲುಗು– ತಮಿಳಿನಿಂದ ಚಿತ್ರಗಳ ಆಫರ್ ಬಂದಿವೆ. ಸದ್ಯಕ್ಕೆ ಧಾರಾವಾಹಿಗೆ ಕಮಿಟ್ ಆಗಿದ್ದೇನೆ ಎಂದು ಮಾತಿಗೆ ವಿರಾಮ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry